ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಹಿಂಸಾಚಾರ: ಮ್ಯಾನ್ಮಾರ್‌ನ ಕೆಲವೆಡೆ ‘ಮಾರ್ಷಿಯಲ್‌ ಲಾ’

ಸ್ಥಳೀಯ ಪೊಲೀಸರ ಬದಲು ಸೇನೆಗೆ ಭದ್ರತೆ ವ್ಯವಸ್ಥೆ ನಿಯಂತ್ರಣ
Last Updated 15 ಮಾರ್ಚ್ 2021, 21:26 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ ಮಿಲಿಟರಿ ಆಡಳಿತವು ಯಾಂಗೂನ್‌ ನಗರದ ಆರು ಟೌನ್‌ಶಿಪ್‌ಗಳಲ್ಲಿ ’ಮಾರ್ಷಿಯಲ್‌ ಲಾ’ ಜಾರಿಗೊಳಿಸಲಾಗಿದೆ.

ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿರುವುದರಿಂದ ಮತ್ತು ಹಿಂಸಾಚಾರ ಹತ್ತಿಕ್ಕಲು ಈ ಕ್ರಮಕೈಗೊಳ್ಳಲಾಗಿದೆ.

ಯಾಂಗೂನ್‌ನ ಉತ್ತರ ಡಾಗೋನ್‌, ದಕ್ಷಿಣ ಡಾಗೋನ್‌, ಡಾಗೋನ್‌ ಸೈಕ್ಕನ್‌, ಉತ್ತರ ಒಕ್ಕಳಪಾ, ಹ್ಲೈಂಗ್‌ ಥಾರ್‌ ಯಾರ್‌ ಮತ್ತು ಶ್ವೆಪ್ಯಿಥಾನಲ್ಲಿ ಭಾನುವಾರದಿಂದ ’ಮಾರ್ಷಿಯಲ್‌ ಲಾ’ ಘೋಷಿಸಲಾಗಿದೆ.

ಫೆಬ್ರುವರಿ 1ರಂದು ಸೇನೆ ಆಡಳಿತವನ್ನು ವಹಿಸಿಕೊಂಡ ಬಳಿಕ, ದೇಶದಾದ್ಯಂತ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಈ ಮೂಲಕ ಎಲ್ಲ ಸರ್ಕಾರಿ ಇಲಾಖೆಗಳ ನಿಯಂತ್ರಣವನ್ನು ಸೇನೆ ವಹಿಸಿಕೊಂಡಿತ್ತು. ಆದರೆ, ಈಗ ಜಾರಿಗೊಳಿಸಲಾಗಿರುವ ‘ಮಾರ್ಷಿಯಲ್‌ ಲಾ’ ಅನ್ವಯ ಸ್ಥಳೀಯ ಪೊಲೀಸರ ಬದಲು ಸೇನೆಯೇ ನೇರವಾಗಿ ಭದ್ರತೆಯ ವ್ಯವಸ್ಥೆಯ ನಿಯಂತ್ರಣವನ್ನು ತೆಗೆದುಕೊಳ್ಳಲಿದೆ.

ಯಾಂಗೂನ್‌ ಪ್ರಾದೇಶಿಕ ಕಮಾಂಡರ್‌ಗೆ ಆಡಳಿತಾತ್ಮಕ, ನ್ಯಾಯಾಂಗ ಮತ್ತು ಸೇನಾ ಅಧಿಕಾರವನ್ನು ನೀಡಲಾಗಿದೆ.

ಭಾನುವಾರ ನಡೆದ ಹಿಂಸಾಚಾರದಲ್ಲಿ 38 ಮಂದಿಯನ್ನು ಹತ್ಯೆ ಮಾಡಲಾಗಿದೆ. ಹಲವರು ಗಾಯಗೊಂಡಿದ್ದಾರೆ ಎಂದು ‘ಅಸಿಸ್ಟೆನ್ಸ್‌ ಅಸೋಸಿಯೇಷನ್‌ ಫಾರ್‌ ಪಾಲಿಟಿಕಲ್ ಪ್ರಿಸನರ್ಸ್‌’ (ಎಎಪಿಪಿ) ಎನ್ನುವ ಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್‌ನ ಹಲವೆಡೆ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಂಟರ್‌ನೆಟ್‌ ಸೇವೆ ವ್ಯತ್ಯಯದಿಂದಾಗಿ ನ್ಯಾಯಾಲಯದಲ್ಲಿ ಆಂಗ್‌ ಸಾನ್‌ ಸೂಕಿ ಅವರ ವಿಚಾರಣೆ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ, ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಫೆಬ್ರುವರಿ 1ರಂದು ಸೂಕಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸಲಾಗಿದೆ.

ಚೀನಾ ಕಾರ್ಖಾನೆಗಳ ಧ್ವಂಸ: ಆತಂಕ

ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿ ಚೀನಾ ಮೂಲದ 32 ಕಾರ್ಖಾನೆಗಳನ್ನು ಸೋಮವಾರ ಧ್ವಂಸಗೊಳಿಸಲಾಗಿದ್ದು, ಅಪಾರ ಹಾನಿಯಾಗಿದೆ.

ಈ ಘಟನೆಯಲ್ಲಿ ಚೀನಾದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಮ್ಯಾನ್ಮಾರ್‌ನಲ್ಲಿ ಚೀನಾ ನಾಗರಿಕರ ಸುರಕ್ಷತೆ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ.

ಚೀನಾ ನಾಗರಿಕರು ಮತ್ತು ಸಂಸ್ಥೆಗಳ ಸುರಕ್ಷತೆಗೆ ಮ್ಯಾನ್ಮಾರ್‌ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್‌ ಒತ್ತಾಯಿಸಿದ್ದಾರೆ.

ಮ್ಯಾನ್ಮಾರ್‌ ಸೇನೆಗೆ ಚೀನಾ ಬೆಂಬಲ ನೀಡಿರುವುದರಿಂದಲೇ ಪ್ರತಿಭಟನಾಕಾರರು ಈ ರೀತಿಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಹೇಳಲಾಗಿದೆ. ‘ವ್ಯಾಪಾರ–ಉದ್ಯಮ ಗಳನ್ನು ರಕ್ಷಿಸಿಕೊಳ್ಳಬೇಕಾದರೆ ಸೇನಾ ಬೆಂಬಲ ನೀಡುವುದನ್ನು ಚೀನಾ ನಿಲ್ಲಿಸಬೇಕು’ ಎಂದು ನಾಯಕಿ ಥಿಂಜಾರ್‌ ಶುನ್ಲೆಯಿ ಯಿ ಟ್ವೀಟ್‌ ಮಾಡಿದ್ದಾರೆ.

ಮತ್ತೆ ಐವರ ಹತ್ಯೆ

ಸೇನೆಯ ಆಡಳಿತ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಐವರ ಮೇಲೆ ಸೋಮವಾರ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಲಾಗಿದೆ.

ಮಾಂಡಲೇ ಮತ್ತು ಹಖಾ ನಗರಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ರ‍್ಯಾಲಿಗಳನ್ನು ಆಯೋಜಿಸಲಾಗಿತ್ತು. ಔಂಗ್ಲಾನ್‌ ನಗರದಲ್ಲಿ ಇಬ್ಬರು ಮತ್ತು ಮ್ಯಿಂಗ್ಯಾನ್‌ನಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT