ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕುಮಾರಿ ಡಯಾನಾ ಸಂದರ್ಶನದ ಹಿಂದೆ ಮೋಸದ ತಂತ್ರ

Last Updated 23 ಮೇ 2021, 19:30 IST
ಅಕ್ಷರ ಗಾತ್ರ

ಲಂಡನ್‌: ‘ಬಿಬಿಸಿಯ ಪತ್ರಕರ್ತ ಮಾರ್ಟಿನ್‌ ಬಷೀರ್‌ ಅವರು 1995ರಲ್ಲಿ ರಾಜಕುಮಾರಿ ಡಯಾನಾ ಅವರ ಸಂದರ್ಶನಕ್ಕಾಗಿ ಮೋಸದ ತಂತ್ರವನ್ನು ಅನುಸರಿಸಿದ್ದರು. ಡಯಾನಾ ಅವರ ಸಾವಿಗೆ ಆ ಸಂದರ್ಶನವೂ ಕಾರಣವಾಗಿತ್ತು’ ಎಂಬ ವರದಿಯೊಂದು ಪ್ರಕಟವಾಗಿದೆ.

ತನಿಖೆಯ ವರದಿ ಸಲ್ಲಿಕೆಯಾಗುವುದಕ್ಕೂ ಕೆಲವೇ ದಿನ ಮೊದಲು ಬಷೀರ್‌ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ಡಯಾನಾ ಅವರ ಪುತ್ರರಾದ ರಾಜಕುಮಾರ ವಿಲಿಯಂ ಹಾಗೂ ಹ್ಯಾರಿ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.

‘ಡಯಾನಾ ಅವರನ್ನು ಸಂಪರ್ಕಿಸಲು ಬಷೀರ್ ಅವರು ಡಯಾನಾ ಅವರ ಅತ್ಯಂತ ಆತ್ಮೀಯರೆನಿಸಿಕೊಂಡ ಕೆಲವರ ನಕಲಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನು ತಯಾರಿಸಿ ದ್ದರು. ಈ ಸ್ಟೇಟ್‌ಮೆಂಟ್‌ಗಳನ್ನು ಡಯಾನಾ ಅವರ ಸಹೋದರ ಚಾರ್ಲ್ಸ್‌ ಸ್ಪೆನ್ಸರ್ ಅವರಿಗೆ ತೋರಿಸಿ, ‘ಡಯಾನಾ ಅವರ ಚಲನವಲನಗಳ ಮೇಲೆ ನಿಗಾ ಇಡಲು ಅವರ ಸಮೀಪವರ್ತಿಗಳಿಗೆ ಭದ್ರತಾ ಏಜೆನ್ಸಿಗಳು ಭಾರಿ ಪ್ರಮಾಣದಲ್ಲಿ ಹಣನೀಡುತ್ತಿವೆ’ ಎಂದು ನಂಬಿಸಿದ್ದರು. ಅವುಗಳನ್ನು ಇಟ್ಟುಕೊಂಡೇ ಡಯಾನಾ ಅವರ ಸಂದರ್ಶನದ ಅವಕಾಶ ವನ್ನೂ ಪಡೆದಿದ್ದರು’ ಎಂದು ನಿವೃತ್ತ ನ್ಯಾಯಾಧೀಶ ಜಾನ್‌ ಡೈಸನ್‌ ಅವರು ನಡೆಸಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.

‘ಬಷೀರ್‌ ಅವರ ವರ್ತನೆ ಹಾಗೂ ಆ ಸಂದರ್ಶನವು ನಮ್ಮ ಪಾಲಕರ ನಡುವಿನ ಸಂಬಂಧ ಹದಗೆಡಲು ಕಾರಣವಾಗಿತ್ತು. ತಾಯಿ ಡಯಾನಾ ಅವರು ಕೊನೆಯ ದಿನಗಳಲ್ಲಿ ಅನುಭವಿಸುತ್ತಿದ್ದ ಭಯ, ಆತಂಕ ಮತ್ತು ಒಂಟಿತನಕ್ಕೆ ಆ ಸಂದರ್ಶನ ಗಮನಾರ್ಹ ಕಾಣಿಕೆ ನೀಡಿದೆ’ ಎಂದು ಡಯಾನಾ ಅವರ ಪುತ್ರ ಪ್ರಿನ್ಸ್‌ ವಿಲಿಯಮ್ಸ್‌ ಆರೋಪಿಸಿದ್ದಾರೆ.

‘ನನ್ನ ತಾಯಿಯ ಸಾವಿಗೆ ಆ ಮೋಸದ ಸಂದರ್ಶನವೂ ಕಾರಣ. ಶೋಷಣೆ ಹಾಗೂ ಈ ಅನೈತಿಕ ನಡವಳಿಕೆಯು ಅವರನ್ನು ಬಲಿ ತೆಗೆದುಕೊಂಡಿದೆ’ ಎಂದು ಇನ್ನೊಬ್ಬ ಪುತ್ರ ಹ್ಯಾರಿ ಹೇಳಿದ್ದಾರೆ.

1997ರಲ್ಲಿ ಬೆನ್ನಟ್ಟಿ ಬರುತ್ತಿದ್ದ ಛಾಯಾಗ್ರಾಹಕರಿಂದ ತಪ್ಪಿಸಲು ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಡಯಾನಾ ಅವರು ಸಾವನ್ನಪ್ಪಿದ್ದರು.

ಬಿಬಿಸಿಗೆ ಧನಸಹಾಯ ಒದಗಿಸುವುದು ಹಾಗೂ ಅದರ ಆಡಳಿತದ ವಿಚಾರವಾಗಿ ಸರ್ಕಾರದ ಪರಿಶೀಲನೆಯು ಮುಂದಿನ ವರ್ಷ ನಡೆಯಲಿದೆ. ಇದು ಅತಿ ಮುಖ್ಯವಾದ ಘಟ್ಟ ಎಂದು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಹೇಳಿದ್ದಾರೆ.

‘ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ವರದಿಗೆ ಸೂಕ್ತವಾಗಿ ಸ್ಪಂದಿಸುವುದು ಮತ್ತು ವಿಶ್ವಾಸವನ್ನು ಪುನಃ ಸ್ಥಾಪಿಸುವುದು ಬಿಬಿಸಿಯ ಹೊಣೆಯಾಗಿದೆ’ ಎಂದು ಪ್ರೀತಿ ಅವರು ಹೇಳಿದ್ದಾರೆ.

ಸಂದರ್ಶನದಲ್ಲಿ ಹೇಳಿದ್ದೇನು?: ಡಯಾನಾ ಅವರು ತಮ್ಮ ಮತ್ತು ಪತಿ ಚಾರ್ಲ್ಸ್‌ ನಡುವಿನ ಸಂಬಂಧ ಹಳಸಿದ್ದನ್ನು ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಜತೆಗೆ. ಚಾರ್ಲ್ಸ್‌ ಮತ್ತು ಕೆಮಿಲಾ ಪಾರ್ಕರ್ (ಆ ನಂತರ ಇವರ ವಿವಾಹ ನಡೆದಿತ್ತು) ನಡುವೆ ಸಂಬಂಧವಿದೆ ಎಂದೂ ಹೇಳಿದ್ದರು. ತಾವು ಬೇರೊಬ್ಬನನ್ನು ಪ್ರೀತಿಸಿರುವ ವಿಚಾರವನ್ನು ಹೇಳಿಕೊಂಡಿದ್ದರು. ಇದು ಬ್ರಿಟನ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು.

ಕ್ಷಮೆ ಯಾಚಿಸಿದ ಬಷೀರ್‌
ತನಿಖೆಯ ವರದಿಯು ಪ್ರಕಟವಾಗುತ್ತಿದ್ದಂತೆಯೇ ಬಷೀರ್‌ ಅವರು ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ‘ಡಯಾನಾ ಅವರಿಗೆ ಹಾನಿ ಉಂಟುಮಾಡಲು ನಾನು ಯಾವತ್ತೂ ಬಯಸಿರಲಿಲ್ಲ. ಅವರ ಸಾವಿಗೆ ನಾನೇ ಕಾರಣ ಎಂಬ ಆರೋಪವನ್ನು ಒಪ್ಪಿಕೊಳ್ಳಲಾಗದು’ ಎಂದಿದ್ದಾರೆ.

‘ಡಯಾನಾ ಅವರ ಜೀವನದಲ್ಲಿ ನಡೆಯುತ್ತಿದ್ದ ಅನೇಕ ಬೆಳವಣಿಗೆಗಳು ಹಾಗೂ ಕೆಲವು ಸಂಕೀರ್ಣ ವಿಷಯಗಳಿಗೆ ನಾನು ಕಾರಣ ಎಂಬುದನ್ನು ಒಪ್ಪಿಕೊಳ್ಳಲಾರೆ. ಅವರ ಷರತ್ತುಗಳನ್ನು ಒಪ್ಪಿಕೊಂಡೇ ಆ ಸಂದರ್ಶನ ನಡೆಸಲಾಗಿತ್ತು. ಅದನ್ನು 2.28 ಕೋಟಿ ಜನರು ವೀಕ್ಷಿಸಿದ್ದರು. ಇದಾದ ನಂತರವೂ ನಮ್ಮ ಸ್ನೇಹ ಮುಂದುವರಿದಿತ್ತು. ಸಂದರ್ಶನದಲ್ಲಿ ಡಯಾನಾ ಅವರು ಬಹಿರಂಗಪಡಿಸಿರುವ ವಿಚಾರಗಳ ಮೇಲೆ, ಅವರ ಸಹೋದರನಿಗೆ ನಾನು ತೋರಿಸಿರುವ ದಾಖಲೆಗಳ ಯಾವುದೇ ಪ್ರಭಾವ ಇರಲಿಲ್ಲ’ ಎಂದು ಬಷೀರ್ ಹೇಳಿದ್ದಾರೆ.

ಮೈಕಲ್‌ ಜಾಕ್ಸನ್‌ ಸಂದರ್ಶನ
ಡಯಾನಾ ಸಂದರ್ಶನದ ವೇಳೆಗೆ ಬಷೀರ್‌ ಪತ್ರಿಕೋದ್ಯಮದಲ್ಲಿ ಅಷ್ಟೇನೂ ಪರಿಚಿತ ಹೆಸರಾಗಿರಲಿಲ್ಲ. ಆದರೆ, ಆ ಸಂದರ್ಶನದ ನಂತರ ಅವರು ಇನ್ನೂ ಹಲವು ದಿಗ್ಗಜರ ಸಂದರ್ಶನ ನಡೆಸಿದ್ದರು. ಪಾಪ್‌ ಗಾಯಕ ಮೈಕಲ್‌ ಜಾಕ್ಸನ್‌ ಅವರ ಸಂದರ್ಶನವನ್ನೂ ನಡೆಸಿದ್ದರು.

ಮೈಕಲ್‌ ಸಾವಿನ ನಂತರವೂ ಅವರ ಕುಟುಂಬದವರು, ‘ಮೈಕಲ್‌ ಸಾವಿಗೆ ಬಷೀರ್‌ ಅವರೇ ಕಾರಣ’ ಎಂದು ಆರೋಪಿಸಿದ್ದರು. ‘ಆ ಸಂದರ್ಶನ ಪ್ರಸಾರವಾದ ನಂತರ ಮೈಕಲ್‌ ಅವರು ಹೆಚ್ಚುಹೆಚ್ಚು ಮಾದಕ ವಸ್ತುಗಳ ಮೇಲೆ ಅವಲಂಬಿತರಾಗಿದ್ದರು’ ಎಂದು ಕುಟುಂಬದವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT