ರಷ್ಯಾ: ವಿರೋಧ ಪಕ್ಷದ ನಾಯಕ ನವಾಲ್ನಿಗೆ ಜೈಲು ಶಿಕ್ಷೆ

ಮಾಸ್ಕೊ: ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರಿಗೆ ಎರಡೂವರೆ ವರ್ಷಗಳಿಗೂ ಅಧಿಕ ಕಾಲ ಜೈಲು ಶಿಕ್ಷೆ ವಿಧಿಸಿ ಮಾಸ್ಕೊ ಕೋರ್ಟ್ ಆದೇಶಿಸಿದೆ.
2014ರಲ್ಲಿ ನವಾಲ್ನಿ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಶಿಕ್ಷೆಯ ನಿಮಯಗಳನ್ನು ನವಾಲ್ನಿ ಮುರಿದಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಅವರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ನವಾಲ್ನಿ ಆಗ ತಳ್ಳಿ ಹಾಕಿದ್ದರು. ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದೂ ಹೇಳಿದ್ದರು.
ಕೋರ್ಟ್‌ನ ಈ ತೀರ್ಪು ಹೊರ ಬೀಳುತ್ತಿದ್ದಂತೆಯೇ ಮಾಸ್ಕೊ ಹಾಗೂ ಸೇಂಟ್ ಪೀಟರ್ಸ್‌ಬರ್ಗ್ ನಗರಗಳಲ್ಲಿ ಪ್ರತಿಭಟನೆ ಆರಂಭವಾಗಿವೆ.
ಪ್ರತಿಭಟನಕಾರರು ಯಾವುದೇ ರೀತಿಯ ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗಿರದಿದ್ದರೂ, ಪೊಲೀಸರು ಅವರನ್ನು ಬಂಧಿಸಿ ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು.
ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕನೊಬ್ಬನನ್ನು ಪೊಲೀಸರು ಹೊರಗೆ ಎಳೆಯುತ್ತಿದ್ದ ದೃಶ್ಯವಿರುವ ವಿಡಿಯೊವನ್ನು ಮೆಡುಜಾ ವೆಬ್‌ಸೈಟ್ ಹಂಚಿಕೊಂಡಿದೆ. 650ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಒವಿಡಿ–ಇನ್ಫೋ ಎಂಬ ಸಂಘಟನೆ ಹೇಳಿದೆ.
‘ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಹಾಗೂ ನೂರಾರು ಜನ ಪ್ರತಿಭಟನಕಾರರನ್ನು ಯಾವುದೇ ಷರತ್ತುಗಳನ್ನು ಹಾಕದೇ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.