ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಸೇನಾ ಅಧಿಕಾರಿ ಕೈಗೆ: ನಿರ್ಧಾರ ಸಮರ್ಥಿಸಿದ ಚೀನಾ

Last Updated 7 ಫೆಬ್ರುವರಿ 2022, 15:35 IST
ಅಕ್ಷರ ಗಾತ್ರ

ಬೀಜಿಂಗ್‌: ಗಾಲ್ವಾನ್‌ ಸಂಘರ್ಷದಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿಯಾ ಕೈಗೆ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ನೀಡಿದ ತನ್ನ ನಡೆಯನ್ನು ಚೀನಾ ಸೋಮವಾರ ಸಮರ್ಥಿಸಿಕೊಂಡಿದೆ.

ಎಲ್ಲ ಮಾನದಂಡಗಳನ್ನೂ ಪೂರೈಸಿರುವುದರಿಂದಲೇ ಅವರನ್ನು ಜ್ಯೋತಿ ಹೊರಲು ಆಯ್ಕೆ ಮಾಡಲಾಗಿದೆ. ಅಲ್ಲದೆ, ಅವರ ಆಯ್ಕೆಯನ್ನು ವಸ್ತುನಿಷ್ಠ ಮತ್ತು ತರ್ಕಬದ್ಧ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಅದು ಪ್ರತಿಪಾದಿಸಿದೆ.

2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆಯಾಗಿತ್ತು. ಅದರಲ್ಲಿ ಭಾಗಿಯಾಗಿದ್ದ ‘ಪೀಪಲ್ಸ್ ಲಿಬರೇಶನ್ ಆರ್ಮಿ (ಚೀನಾ ಸೇನೆ)’ಯ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ ಎಂಬುವವರು ಒಲಿಂಪಿಕ್ಸ್‌ ಜ್ಯೋತಿಯನ್ನು ಹೊತ್ತಿದ್ದರು. ಇದನ್ನು ಭಾರತ ಆಕ್ಷೇಪಿಸಿತ್ತು. ಅಲ್ಲದೇ, ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಭಾರತ ಬಹಿಷ್ಕರಿಸಿತ್ತು.

ಕ್ವಿ ಅವರಿಗೆ ಜ್ಯೋತಿ ಹೊರಲು ಅವಕಾಶ ನೀಡಿದ್ದು, ಒಲಿಂಪಿಕ್ಸ್‌ ಕ್ರೀಡೆಯು ದೇಶಗಳ ನಡುವಿನ ಸೇತುವೆಯಾಗಬೇಕು ಎಂಬ ಚೀನಾದ ನೀತಿಗೆ ವಿರುದ್ಧವಾದ ನಿರ್ಧಾರವೇ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್, ‘ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಜ್ಯೋತಿ ಹೊರುವವರನ್ನು ವಿಶಾಲ ಆಶಯಗಳನ್ನು ಪ್ರತಿನಿಧಿಸುತ್ತಾರೆ. ಅಲ್ಲದೇ, ಎಲ್ಲ ಮಾನದಂಡಗಳನ್ನೂ ಅವರು ಪೂರೈಸುತ್ತಾರೆ. ಎಲ್ಲರೂ ಇದನ್ನು ವಸ್ತುನಿಷ್ಠ, ತರ್ಕಬದ್ಧ ದೃಷ್ಟಿಕೋನದಲ್ಲಿ ನೋಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

ರಾಜಕೀಯ ದೃಷ್ಟಿಕೋನದಲ್ಲಿ ಇದನ್ನು ನೋಡಬಾರದು ಎಂದು ಅವರು ಹೇಳಿದ್ದಾರೆ.

ಗಾಲ್ವಾನ್‌ ಸಂಘರ್ಷದಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿ ಕ್ವಿ ತಲೆಗೆ ಗಂಭೀರ ಗಾಯವಾಗಿತ್ತು. ಆ ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು, ಐವರು ಚೀನೀ ಸೈನಿಕರು ಮೃತಪಟ್ಟಿದ್ದರು. ಆದರೂ, ಚೀನಾ ತನ್ನ ಕಡೆಯ ಸಾವುನೋವುಗಳನ್ನು ಒಪ್ಪಿಕೊಂಡಿದ್ದು 8 ತಿಂಗಳ ನಂತರ.
ಗಾಲ್ವಾನ್‌ ಘರ್ಷಣೆಯ ವೇಳೆ ಉಂಟಾದ ಸಾವು ನೋವುಗಳ ನೈಜ ಅಂಕಿ ಅಂಶಗಳನ್ನು ಚೀನಾ ಮುಚ್ಚಿಟ್ಟಿದೆ ಎಂದು ಇತ್ತೀಚೆಗೆ ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT