ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್: ನ್ಯಾಯಾಲಯಕ್ಕೆ ಹಾಜರಾದ ಸೂಕಿ ವಿರುದ್ಧ ಹೊಸ ಆರೋಪ

ಪ್ರಕರಣದ ವಿಚಾರಣೆ ಮುಂದೂಡಿಕೆ
Last Updated 1 ಮಾರ್ಚ್ 2021, 19:37 IST
ಅಕ್ಷರ ಗಾತ್ರ

ಯಾಂಗೂನ್‌ (ರಾಯಿಟರ್ಸ್‌): ಮ್ಯಾನ್ಮಾರ್‌ನ ಉಚ್ಛಾಟಿತ ನಾಯಕಿ ಆಂಗ್‌ ಸಾನ್ ಸೂ ಕಿ ಸೋಮವಾರ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು, ಈ ಸಂದರ್ಭದಲ್ಲಿ ತಿಂಗಳ ಹಿಂದೆ ನಡೆದ ದಂಗೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಮತ್ತೆರಡು ಹೊಸ ಕ್ರಿಮಿನಲ್‌ ಪ್ರಕರಣಗಳನ್ನು ಹೊರಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 15ಕ್ಕೆ ಮುಂದೂಡಿದೆ.

75 ವರ್ಷದ ಸೂ ಕಿ ಪರವಾನಗಿ ಇಲ್ಲದ ವಾಕಿ ಟಾಕಿಗಳನ್ನು ಹೊಂದಿ ರುವುದಕ್ಕೆ ಮತ್ತು ಕಳೆದ ವರ್ಷದ ಚುನಾವಣೆಯಲ್ಲಿ ಪ್ರಚಾರ ನಡೆಸುವ ಮೂಲಕ ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸಿದಕ್ಕಾಗಿಈಗಾಗಲೇ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದರು.

‘ಈಗ ಸೂ ಕಿ ಅವರ ವಿರುದ್ಧ ಸಂವಹನ ಕಾನೂನುಗಳ ಉಲ್ಲಂಘನೆ ಮತ್ತು ಸಾರ್ವಜನಿಕ ಅಶಾಂತಿ ಪ್ರಚೋದಿಸುವ ಉದ್ದೇಶದ ಎರಡು ಕ್ರಿಮಿನಲ್‌ ಪ್ರಕರಣಗಳುದಾಖಲಾಗಿವೆ. ಈ ಅವಧಿಯಲ್ಲಿ ಅವರು ಇನ್ನೆಷ್ಟುಪ್ರಕರಣಗಳನ್ನು ಎದುರಿಸಬೇಕಾಗುತ್ತದೆಯೋ ಖಚಿತವಾಗಿ ಹೇಳಲಾಗದು. ಈ ಸಮಯದಲ್ಲಿ ಈ ದೇಶದಲ್ಲಿ ಏನೂ ಬೇಕಾದರೂ ಸಂಭವಿಸಬಹುದು’ ಎಂದು ಸೂ ಕಿ ಅವರ ವಕೀಲ ಖಿನ್ ಮಾಂಗ್ ಜಾವ್ ಹೇಳಿದ್ದಾರೆ.

ಫೆಬ್ರುವರಿ 1ರಿಂದ ಸೂ ಕಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಗುಂಡಿನ ಮಳೆಗೆ ಲೆಕ್ಕಿಸದೆ ಭುಗಿಲೆದ್ದ ಪ್ರತಿಭಟನೆ; ಮ್ಯಾನ್ಯಾರ್‌ನಲ್ಲಿ ಮಿಲಿಟರಿ ಕ್ಷಿಪ್ರ ದಂಗೆ ವಿರೋಧಿಸಿ ಜನತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಭಾನುವಾರ ಒಂದೇ 18 ಮಂದಿ ದೇಶದಾದ್ಯಂತ ಸೇನೆ ಮತ್ತು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರೂ ಪ್ರತಿಭಟನೆಗಳು ನಿಂತಿಲ್ಲ. ಸೋಮವಾರ ದೇಶದ ವಿವಿಧ ನಗರಗಳಲ್ಲಿ ಜನರ ಪ್ರತಿಭಟನೆ ಭುಗಿಲೆದ್ದಿದೆ.

ಯಾಂಗೊನ್‌ ನಗರದ ಬೀದಿಗಳಲ್ಲಿ ಪ್ರತಿಭಟನಕಾರರು ಬಿದಿರಿನ ಬೊಂಬುಗಳು, ಸೋಫಾಗಳು ಮತ್ತು ಮರದ ಕೊಂಬೆಗಳನ್ನು ಬಳಸಿ ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಪ್ರತಿಭಟಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಭದ್ರತಾಪಡೆಗಳು ಸ್ಟನ್ ಗ್ರೆನೇಡ್‌ಗಳು ಮತ್ತು ಅಶ್ರುವಾಯು ಪ್ರಯೋಗಿಸಿದರು.

ಮೈಯಿನಿಗೋನ್ ಜಂಕ್ಷನ್ ಬಳಿ ಪ್ರತಿಭಟನೆಯ ವರದಿ ಮಾಡುತ್ತಿದ್ದಚೀನಾದ ಷಿನುವಾ ಸುದ್ದಿ ಸಂಸ್ಥೆಯಇಬ್ಬರು ವರದಿಗಾರರು ಬೆಳಿಗ್ಗೆ ಭದ್ರತಾ ಪಡೆಗಳ ರಬ್ಬರ್ ಗುಂಡುಗಳಿಂದ ಗಾಯಗೊಂಡಿದ್ದಾರೆ.

ಭದ್ರತಾಪಡೆಗಳ ಹಲ್ಲೆಗಳ ಬಗ್ಗೆ ಸಚಿತ್ರ ವರದಿ ಮಾಡುತ್ತಿರುವ ಯಾಂಗೊನ್‌ನಲ್ಲಿನ ಅಸೋಸಿಯೇಟೆಡ್ ಪ್ರೆಸ್ ಫೋಟೊಗ್ರಾಫರ್‌ ಸೇರಿ ಹಲವಾರು ಪತ್ರಕರ್ತರನ್ನು ಇತ್ತೀಚಿನ ದಿನಗಳಲ್ಲಿ ಬಂಧಿಸಲಾಗಿದೆ. ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಇಬ್ಬರು ವರದಿಗಾರರನ್ನು ಮ್ಯಾನ್ಮಾರ್‌ ಸೇನೆ ಬಂಧಿಸಿದೆ.

ದಂಗೆಯ ನಂತರ ಈವರೆಗೆ ಭದ್ರತಾಪಡೆಯ ಗುಂಡಿಗೆ ಸುಮಾರು 30 ಜನರು ಹತರಾಗಿದ್ದಾರೆ. ಸುಮಾರು 110ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ರಾಜಕೀಯ ಕೈದಿಗಳ ಸಹಾಯಕ ಸಂಘ (ಎಎಪಿಪಿ) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT