ಗುರುವಾರ , ಜೂನ್ 30, 2022
23 °C

ರಷ್ಯಾ ನೆರವಿಲ್ಲದೇ ಐಎಸ್‌ಎಸ್‌ಅನ್ನು ನಿರ್ವಹಿಸುವ ಮಾರ್ಗ ಹುಡುಕುತ್ತಿದೆ ನಾಸಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ರಷ್ಯಾದ ಸಹಾಯವಿಲ್ಲದೇ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್‌)’ ಕಕ್ಷೆಯಲ್ಲಿ ನಿರ್ವಹಿಸಲು ನಾಸಾ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ, ಉಕ್ರೇನ್ ಆಕ್ರಮಣದ ನಂತರ ರಷ್ಯಾ ಐಎಸ್‌ಎಸ್‌ ಸಹಯೋಗದಿಂದ ಹಿಂದೆ ಸರಿಯುವ ಲಕ್ಷಣಗಳನ್ನೇನೂ ತೋರಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂಶೋಧನಾ ವೇದಿಕೆಯಲ್ಲಿ ಕಾರ್ಯಾಚರಣೆಗಳು ಎಂದಿನಂತೇ ನಡೆಯುತ್ತಿವೆ. ಸಂಶೋಧನೆಯಲ್ಲಿ ರಷ್ಯಾ ಬದ್ಧತೆ ಪ್ರದರ್ಶಿಸುತ್ತಿಲ್ಲ ಎನ್ನಲು ಸಾಧ್ಯವಿಲ್ಲ’ ಎಂದು ನಾಸಾದ ಮಾನವ ಬಾಹ್ಯಾಕಾಶಯಾನ ಕಾರ್ಯಕ್ರಮದ ಮುಖ್ಯಸ್ಥರಾದ ಕ್ಯಾಥಿ ಲ್ಯೂಡರ್ಸ್ ಸುದ್ದಿ ಸಂಸ್ಥೆ ‘ಎಎಫ್‌ಪಿ’ಗೆ ಫೋನ್‌ ಕರೆಯ ಮೂಲಕ ತಿಳಿಸಿದ್ದಾರೆ.

‘ಸುಗಮ ಕಾರ್ಯಾಚರಣೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ನಾವು ಗಮನಿಸುತ್ತಿರುತ್ತೇವೆ. ಐಎಸ್‌ಎಸ್‌ನಲ್ಲಿ ವಿಭಿನ್ನ ಸಾಮರ್ಥ್ಯಗಳನ್ನು ಹೇಗೆ ಸೇರಿಸಬಹುದು ಎಂಬುದನ್ನು ಗಮನಿಸುತ್ತಿರುತ್ತದೆ’ ಎಂದು ಅವರು ತಿಳಿಸಿದರು.

ಐಎಸ್‌ಎಸ್‌ಗೆ ಶಕ್ತಿ ತುಂಬುವ ಕೆಲಸವನ್ನು ಅಮೆರಿಕ ನಿರ್ವಹಿಸಿದರೆ, ರಷ್ಯಾ ಐಎಸ್‌ಎಸ್‌ನ ಸಂಚಲನೆ, ತೇಲುವಿಕೆ ಮತ್ತು ನಿರ್ವಹಣೆಯ ಹೊಣೆಯನ್ನು ಹೊಂದಿದೆ.

ಅಮೆರಿಕದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಐಎಸ್‌ಎಸ್‌ನ ತನ್ನ ಪಾಲುದಾರಿಕೆಯಿಂದ ಹೊರಬಂದರೆ ಆಗುವ ದುಷ್ಪರಿಣಾಮಗಳ ಬಗ್ಗೆ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್‌ ಆತಂಕ ವ್ಯಕ್ತಪಡಿಸಿದ್ದರು. ನಿರ್ವಹಣೆಯಿಂದ ರಷ್ಯಾ ಹಿಂದೆ ಸರಿದರೆ, 400 ಟನ್‌ ತೂಕದ ಐಎಸ್‌ಎಸ್‌ ಭೂಮಿಗೆ ಅಪ್ಪಳಿಸುವ ಭೀತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದರು. ಇದು ಭಾರತ ಅಥವಾ ಚೀನಾದ ಮೇಲೆಯೇ ಬೀಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದರು.

ಆದರೆ, ಗಮನಿಸಬೇಕಾದ ಅಂಶವೆಂದರೆ, ಫೆ.21ರಂದು ಐಎಸ್‌ಎಸ್‌ಗೆ ರಷ್ಯಾದ ನೆರವಿಲ್ಲದೇ ಅಗತ್ಯ ವಸ್ತುಗಳನ್ನು ಪೂರೈಸಲಾಗಿತ್ತು.

‘ಐಎಸ್‌ಎಸ್‌ ಅನ್ನು ಯಾರು ನಿರ್ವಹಿಸುತ್ತಾರೆ...’ ಎಂದು ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥರು ಕೇಳಿದ್ದ ಪ್ರಶ್ನೆಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದ ‘ಸ್ಪೇಸ್‌ಎಕ್ಸ್‌’ನ ಮುಖ್ಯಸ್ಥ ಎಲೊನ್‌ ಮಸ್ಕ್‌, ತಮ್ಮ ಸಂಸ್ಥೆಯ ಚಿತ್ರವನ್ನು ಪ್ರಕಟಿಸಿ, ತಾವು ಬೆಂಬಲವಾಗಿರುವುದಾಗಿ ಪರೋಕ್ಷವಾಗಿ ಹೇಳಿದ್ದರು.

ಆದರೂ, ಇಂಥ ನೆರವುಗಳೆಲ್ಲವೂ ಆಪತ್ಕಾಲದ ಕ್ರಮಗಳಷ್ಟೇ ಆಗಿರುತ್ತವೆ ಎಂದು ಕ್ಯಾಥಿ ಲ್ಯೂಡರ್ಸ್ ಹೇಳಿದ್ದಾರೆ.

‘ಸ್ವಂತವಾಗಿ ಕಾರ್ಯನಿರ್ವಹಿಸಲು ನಾಸಾಕ್ಕೆ ತುಂಬಾ ಕಷ್ಟವಿದೆ. ಐಎಸ್‌ಎಸ್‌ ಒಂದು ಅಂತರಾಷ್ಟ್ರೀಯ ಪಾಲುದಾರಿಕೆ. ಜಂಟಿ ಅವಲಂಬನೆಗಳೊಂದಿಗೆ ಇದರ ನಿರ್ವಹಣೆ ನಡೆಯುತ್ತದೆ. ಒಂದು ತಂಡವಾಗಿ ನಾವು ಸುಗಮ ಕಾರ್ಯಾಚರಣೆಯನ್ನು ನಿರೀಕ್ಷಿಸುತ್ತಿರುತ್ತೇವೆ. ನಾವು ಬಾಹ್ಯಾಕಾಶದಲ್ಲಿ ಶಾಂತಿಯುತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸಾಧ್ಯವಾಗದೇ ಹೋದರೆ ಅದು ತುಂಬಾ ದುಃಖದ ಸಂಗತಿ‘ ಎಂದು ಲ್ಯೂಡರ್ಸ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು