ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಇಲ್ಲದೇ ಶತದಿನ ಪೂರೈಸಿದ ನ್ಯೂಜಿಲೆಂಡ್‌: ಈಗ ಹೇಗಿದೆ ಅಲ್ಲಿ ಪರಿಸ್ಥಿತಿ?

Last Updated 10 ಆಗಸ್ಟ್ 2020, 2:25 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಜಗತ್ತಿನ ಹಲವು ರಾಷ್ಟ್ರಗಳು ಕೊರೊನಾ ವೈರಸ್‌ನಿಂದ ನಿರಂತರ ದಾಳಿಗೀಡಾಗುತ್ತಿರುವ ಹೊತ್ತಿನಲ್ಲೇ ನ್ಯೂಜಿಲೆಂಡ್‌ ಕೋವಿಡ್‌ನಿಂದ ಮುಕ್ತಿಕೊಂಡು ಶತದಿನ ಪೂರೈಸಿದೆ.

ದಕ್ಷಿಣ ಪೆಸಿಫಿಕ್‌ ರಾಷ್ಟ್ರದ 5 ಮಿಲಿಯನ್ ಜನರ ಜೀವನವು ಈಗ ಸಾಮಾನ್ಯ ಸ್ಥಿತಿಗೆ ಮರಳಿದೆ. ತುಂಬಿ ತುಳುಕುವ ಕ್ರೀಡಾಂಗಣಗಳಲ್ಲಿ ಜನ ರಗ್ಬಿ ಆಟಗಳಿಯುತ್ತಿದ್ದಾರೆ, ಸೋಂಕಿಗೆ ತುತ್ತಾಗುವ ಯಾವ ಭಯವೂ ಇಲ್ಲದೇ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಅಲ್ಲಿನವರು ಹರಟುತ್ತಿದ್ದಾರೆ. ಆದರೆ, ಕೊರೊನಾ ವೈರಸ್‌ ನಿಗ್ರಹದ ವಿಚಾರದಲ್ಲಿ ನ್ಯೂಜಿಲೆಂಡ್‌ ಸಂತೃಪ್ತಿ ಹೊಂದಿರಬಹುದು. ಆದರೆ, ಭವಿಷ್ಯದಲ್ಲಿ ಸಂಭವಿಸಬಹುದಾದ ಮತ್ತೊಂದು ವೈರಸ್‌ ದಾಳಿಗೆ ದೇಶ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ ಅಂತ್ಯದಲ್ಲಿ 100 ಕೊರೊನಾ ವೈರಸ್‌ ಪ್ರಕರಣಗಳು ಕಂಡು ಬರುತ್ತಲೇ, ನ್ಯೂಜಿಲೆಂಡ್ ಕಟ್ಟುನಿಟ್ಟಾದ ಲಾಕ್‌ಡೌನ್‌ ಕ್ರಮಗಳನ್ನು ವಿಧಿಸುವ ಮೂಲಕ ವೈರಸ್ಅನ್ನು ತೊಡೆದುಹಾಕಿತು. ವೈರಾಣು ಹರಡುವುದನ್ನು ತಡೆಯಿತು. ಕಳೆದ ಮೂರು ತಿಂಗಳಿಂದ, ದೇಶದ ಒಳಗೆ ಯಾವುದೇ ಸೋಂಕು ಪ್ರಕರಣಗಳು ಕಾಣಿಸಿಕೊಂಡಿಲ್ಲ. ಆದರೆ, ವಿದೇಶದಿಂದ ಬರುತ್ತಿರುವ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಗಡಿಯಲ್ಲೇ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಕೊರೊನಾ ವೈರಸ್ ಅನ್ನು ನಿಗ್ರಹಗೊಳಿಸಿರುವ ದೇಶದ ಸಾಧನೆಯ ಕುರಿತು ಮಾತನಾಡಿರುವ ಒಟಾಗೊ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊಫೆಸರ್ ಮೈಕೆಲ್ ಬೇಕರ್ ‘ಇದು ಉತ್ತಮ ವಿಜ್ಞಾನ ಮತ್ತು ಉತ್ತಮ ರಾಜಕೀಯ ನಾಯಕತ್ವದ ಫಲ,’ ಎಂದು ಹೇಳಿದ್ದಾರೆ. ‘ ಜಗತ್ತಿನ ಉತ್ತಮ ರಾಷ್ಟ್ರಗಳತ್ತ ಒಮ್ಮೆ ನೀವು ಕಣ್ಣು ಹಾಯಿಸಿದರೆ, ಅಲ್ಲಿ ಉತ್ತಮ ವಿಜ್ಞಾನ ಮತ್ತು ಉತ್ತಮ ರಾಜಕೀಯ ನಾಯಕತ್ವದ ಸಂಯೋಜನೆ ಎದ್ದು ಕಾಣುತ್ತದೆ,’ ಎಂದು ಅವರು ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವಿಕೆಯನ್ನು ನಿಗ್ರಹಿಸುವ ಬದಲು, ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನ್ಯೂಜಿಲೆಂಡ್‌ ಮೊದಲಿನಿಂದಲೂ ದಿಟ್ಟ ತಂತ್ರವನ್ನು ಅನುಸರಿಸಿತು. ಕೋವಿಡ್‌ ಕುರಿತ ಉತ್ತರಗಳಿಗಾಗಿ ಇತರ ದೇಶಗಳು ಈಗ ನ್ಯೂಜಿಲೆಂಡ್‌ನತ್ತ ನೋಡುತ್ತಿವೆ ಎಂದು ಬೇಕರ್ ಹೇಳಿದ್ದಾರೆ.

ಕೊರೊನಾ ವೈರಸ್‌ ವಿರುದ್ಧ ನ್ಯೂಜಿಲೆಂಡ್‌ ಗೆದ್ದಿರಬಹುದು. ಆದರೆ, ದೇಶದ ಪ್ರವಾಸೋದ್ಯಮವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೇಶವು ಪ್ರಪಂಚದಿಂದ ಪ್ರತ್ಯೇಕವಾಗಿ ಉಳಿದಂತೆ ಕಾಣುತ್ತಿದೆ. ಇತರ ರಾಷ್ಟ್ರಗಳು ಎಚ್ಚರಿಕೆಯಿಂದ ಹಾಗೆ ಮಾಡಿವೆ. ಅದರೆ, ಇತರೆ ರಾಷ್ಟ್ರಗಳಂತೆ ಗಡಿಯನ್ನು ಮುಕ್ತಗೊಳಿಸಲು ಆರ್ಡರ್ನ್ ಸರ್ಕಾರ ಹಿಂಜರಿಯುತ್ತಿದೆ.

ಸದ್ಯ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 1,569ಕ್ಕೆ ಸೀಮಿತಗೊಂಡಿದ್ದು, ಈ ವರೆಗೆ 22 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT