ಗುರುವಾರ , ನವೆಂಬರ್ 26, 2020
19 °C

2021 ಅತ್ಯಂತ ಶ್ರೇಷ್ಠ ಆರ್ಥಿಕ ವರ್ಷ: ಡೊನಾಲ್ಡ್‌ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌ ಪಿಡುಗಿನಿಂದಾಗಿ ಉದ್ಭವಿಸಿರುವ ಆರ್ಥಿಕ ಕುಸಿತದಿಂದ ಅಮೆರಿಕವು ಶೀಘ್ರವೇ ಚೇತರಿಸಿಕೊಳ್ಳಲಿದ್ದು, ಮುಂದಿನ ವರ್ಷವು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಆರ್ಥಿಕ ವರ್ಷವಾಗಿ ಗುರುತಿಸಿಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ ವ್ಯಕ್ತಪಡಿಸಿದ್ದಾರೆ. 

‘ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಕೋವಿಡ್‌–19 ನಿಯಂತ್ರಣ, ಆರ್ಥಿಕ ಸ್ಥಿತಿ, ಕಪ್ಪುವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿಷಯಗಳೇ ಪ್ರಮುಖ ಅಂಶಗಳಾಗಿದ್ದು, ಚುನಾವಣೆಗೆ ಇನ್ನೆರಡೇ ವಾರಗಳು ಬಾಕಿ ಉಳಿದಿರುವಾಗ ಟ್ರಂಪ್‌ ಹಾಗೂ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.

ಅರಿಜೋನಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಟ್ರಂಪ್‌, ‘ಪರಿಸ್ಥಿತಿಯು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವುದನ್ನೇ ಎಲ್ಲರೂ ಬಯಸುತ್ತಿದ್ದೇವೆ. ಮತ್ತೆ ಸದೃಢವಾದ ಬುನಾದಿಯೊಂದಿಗೆ ದೇಶದ ಆರ್ಥಿಕತೆಯನ್ನು ಕಟ್ಟುತ್ತೇವೆ. ಲಕ್ಷಾಂತರ ಜನರ ಪ್ರಾಣವನ್ನು ನಾವು ಉಳಿಸಿದ್ದೇವೆ. ಕುಸಿದು ಹೋಗಿದ್ದ ಆರ್ಥಿಕತೆಯನ್ನು ಮತ್ತೆ ಪುನಃಶ್ಚೇತನಗೊಳಿಸಿದ್ದೇವೆ. ಬೈಡನ್‌ ಅಧಿಕಾರಕ್ಕೆ ಬಂದರೆ, ಕೋವಿಡ್‌ ಲಸಿಕೆ ಅಭಿವೃದ್ಧಿಯನ್ನು ಮುಂದೂಡಲಿದ್ದಾರೆ. ಈ ಮೂಲಕ ಪಿಡುಗನ್ನು ಇನ್ನಷ್ಟು ಕಾಲ ವಿಸ್ತರಿಸಿ, ಇಡೀ ದೇಶವನ್ನೇ ಮುಚ್ಚಲಿದ್ದಾರೆ. ಜನರ ಮೇಲೆ ತೆರಿಗೆ ಹೊರೆ ಹೊರಿಸಿ, ನಿರ್ಬಂಧಗಳಿಂದ ನಿಮ್ಮನ್ನು ನಿಯಂತ್ರಿಸಲಿದ್ದಾರೆ’ ಎಂದು ಟ್ರಂಪ್‌ ಆರೋಪಿಸಿದರು.

ಬೈಡನ್‌–ಕಮಲಾ ಪರ ಡಿಜಿಟಲ್‌ ಅಭಿಯಾನ

ಭಾರತೀಯ ಸಂಜಾತ ಲೇಖಕ ದೀಪಕ್‌ ಚೋಪ್ರಾ, ನಟಿ ಸಕೀನಾ ಜೆಫ್ರಿ ಸೇರಿದಂತೆ ದಕ್ಷಿಣ ಏಷ್ಯಾದ ಪ್ರಮುಖರು, ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ ಹಾಗೂ ಸೆನೆಟರ್‌ ಕಮಲಾ ಹ್ಯಾರಿಸ್‌ ಪರವಾಗಿ ಡಿಜಿಟಲ್‌ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ತಂಡದಲ್ಲಿ ವಕೀಲೆ ಮೀರಾ ಹ್ಯಾರಿಸ್‌, ಲೇಖಕಿ ನೀನಾ ದವುಲುರಿ, ಮಿಸ್‌ ಅಮೆರಿಕ ವಿಜೇತೆ ಆಸಿಫ್‌ ಮಾಂಡ್ವಿ ಮತ್ತಿತರರಿದ್ದಾರೆ. ಅಭಿಯಾನದ ಅಂಗವಾಗಿ ಸರಣಿ ವಿಡಿಯೊಗಳನ್ನು ಬಿಡುಗಡೆ ಮಾಡಲಾಗಿದ್ದು, ದಕ್ಷಿಣ ಏಷ್ಯಾದ ಜನರು ಬೈಡನ್‌ ಹಾಗೂ ಕಮಲಾ ಪರವಾಗಿ ಮತ ಚಲಾಯಿಸಬೇಕು ಎಂದು ಕೋರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು