ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಯೆಜ್‌ ಕಾಲುವೆ: ಮುಂದುವರಿದ ಹಡಗು ತೆರವು ಕಾರ್ಯಾಚರಣೆ

Last Updated 28 ಮಾರ್ಚ್ 2021, 5:51 IST
ಅಕ್ಷರ ಗಾತ್ರ

ಸುಯೆಜ್‌ (ಈಜಿಪ್ಟ್‌): ಸುಯೆಜ್‌ ಕಾಲುವೆಯಲ್ಲಿ ಎವರ್‌ಗ್ರಿನ್‌ ಕಂಪನಿಯ ಎವರ್‌ ಗ್ರಿವೆನ್‌ ಬೃಹತ್‌ ಕಂಟೇನರ್‌ ಹಡಗು ಸಿಲುಕಿಕೊಂಡು ಐದು ದಿನ ಕಳೆದರೂ ಅದನ್ನು ಬಿಡಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ನಡೆದಿವೆಯಾದರೂ, ಯಾವಾಗ ತೆರವಾಗಬಹುದು ಎಂಬುದಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿಲ್ಲ.

ಹಡಗು ಮಂಗಳವಾರ ಕಾಲುವೆಯಲ್ಲಿ ಸಿಲುಕಿಕೊಳ್ಳಲು ಬಿರುಗಾಳಿಯಷ್ಟೇ ಕಾರಣ ಎಂದು ಹೇಳಲಾಗದು ಎಂದು ಸುಯೆಜ್‌ ಕಾಲುವೆ ಪ್ರಾಧಿಕಾರದ ಮುಖ್ಯಸ್ಥರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಮಾನವ ಅಥವಾ ತಾಂತ್ರಿಕ ದೋಷವನ್ನು ತಳ್ಳಿಹಾಕುವಂತಿಲ್ಲ ಎಂದು ಲೆಫ್ಟಿನೆಂಟ್‌ ಜನರಲ್ ಒಸಾಮಾ ರಬೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಡಗನ್ನು ಯಾವಾಗ ಸ್ಥಳಾಂತರಿಸಬಹುದು ಎಂಬುದನ್ನು ಅಂದಾಜಿಸಿ ಹೇಳಲು ಸಾಧ್ಯವಿಲ್ಲ ಎಂದು ರಬೀ ಹೇಳಿದರು. ಡಚ್‌ ಸಂರಕ್ಷಣಾ ಸಂಸ್ಥೆಯು ನೀರಿನ ಉಬ್ಬರವಿಳಿತದ ಅನುಕೂಲ ಪಡೆದುಕೊಂಡು ಟಗ್‌ಬೋಟ್‌ಗಳು ಮತ್ತು ಹೂಳೆತ್ತುವ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಹಡಗನ್ನು ತೇಲಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಇದೇ ವೇಳೆ ಉತ್ತರಿಸಿದರು.

ಸಮರ್ಪಕವಾಗಿ ಹೂಳೆತ್ತಲು ಸಾಧ್ಯವಾದರೆ, ಹಡಗನ್ನು ತನ್ನ ಸರಕುಗಳೊಂದಿಗೆ ಮುಕ್ತಗೊಳಿಸಬಹುದು ಎಂಬ ಆಶಯ ವ್ಯಕ್ತಪಡಿಸಿದ ಅವರು, ‘ನಾವು ಕಠಿಣ ಪರಿಸ್ಥಿತಿಯಲ್ಲಿದ್ದೇವೆ, ಇದು ಕೆಟ್ಟ ಘಟನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಡಗಿನ ಬಳಿಯ ಮರಳು ಮತ್ತು ಮಣ್ಣನ್ನು ತೆಗೆಯುವ ಕಾರ್ಯಾಚರಣೆ ಮುಂದುವರಿದಿದ್ದು, ಸುಮಾರು 12 ಟಗ್‌ಬೋಟ್‌ಗಳು ಇದರಲ್ಲಿ ತೊಡಗಿವೆ.

ಕಾಲುವೆಯಲ್ಲಿ ಸಂಚಾರ ಸ್ಥಗಿತವಾಗಿದ್ದು, ಎರಡೂ ಬದಿಯಲ್ಲಿ ಹತ್ತಾರುಹಡಗುಗಳು ಹಿಂದಕ್ಕೂ ಹೋಗಲು ಸಾಧ್ಯವಾಗದೆ ಸಿಲುಕಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT