ಶನಿವಾರ, ಮಾರ್ಚ್ 25, 2023
28 °C

ಬಾಲ ಕಾರ್ಮಿಕ ಪದ್ಧತಿ ಪಾಲಿಸುತ್ತಿದೆಯೇ ಉತ್ತರ ಕೊರಿಯಾ? ಮಾಧ್ಯಮಗಳು ಹೇಳಿದ್ದೇನು?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪೊಂಗ್ಯಾಂಗ್‌: ಸರ್ಕಾರಿ ಗಣಿ ಮತ್ತು ತೋಟಗಳಲ್ಲಿ ಹದಿಹರೆಯದ ಅನಾಥ ಮಕ್ಕಳು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

ನೂರಾರು ಮಕ್ಕಳು ಪ್ರಜ್ಞಾಪೂರ್ಕವಾಗಿ ಮತ್ತು ಧೈರ್ಯದಿಂದ ದೇಶಕ್ಕಾಗಿ ದೈಹಿಕ ಶ್ರಮದಾನದಲ್ಲಿ ತೊಡಗಿದ್ದಾರೆ ಎಂದು 'ಕೊರಿಯನ್‌ ಸೆಂಟ್ರಲ್‌ ನ್ಯುಸ್‌ ಏಜೆನ್ಸಿ' (ಕೆಸಿಎನ್‌ಎ) ವರದಿ ಮಾಡಿದೆ.

ಹೀಗೆ ಕೆಲಸದಲ್ಲಿ ತೊಡಗಿರುವವರ ವಯಸ್ಸಿನ ಬಗ್ಗೆ ಸ್ಪಷ್ಟನೆ ಇಲ್ಲವಾದರೂ, ಅವರೆಲ್ಲರೂ ಹದಿಹರೆಯದವರು ಎಂಬುದು ಮಾಧ್ಯಮಗಳು ಬಿಡುಗಡೆ ಮಾಡಿರುವ ಫೋಟೊಗಳಿಂದ ಬಹಿರಂಗವಾಗಿದೆ.

'ಉತ್ತರ ಕೊರಿಯಾ ಬಲವಂತದ ಬಾಲ ಕಾರ್ಮಿಕ ಪದ್ಧತಿಯನ್ನು ಪಾಲಿಸುತ್ತಿದೆ.' ಎಂದು ಮಾನವ ಹಕ್ಕುಗಳ ಸಂಘಟನೆಗಳು ಬಹಳ ಹಿಂದಿನಿಂದಲೂ ಆರೋಪಿಸಿವೆ. ಆದರೆ, ಉತ್ತರ ಕೊರಿಯಾ ಇದನ್ನು ನಿರಾಕರಿಸುತ್ತಲೇ ಬಂದಿದೆ.

ಮಾನವ ಹಕ್ಕುಗಳ ಪಾಲನೆ ಕುರಿತು 2020ರಲ್ಲಿ ಅಮೆರಿಕ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಉತ್ತರ ಕೊರಿಯಾದಲ್ಲಿ ಬಾಲ ಕಾರ್ಮಿಕ ಪದ್ಧತಿಯು ಕೆಟ್ಟ ಸ್ವರೂಪದಲ್ಲಿದೆ ಎನ್ನಲಾಗಿತ್ತು.

ಕೆಲವೊಮ್ಮೆ ಶಾಲಾ ಮಕ್ಕಳನ್ನು ರಸ್ತೆಗಳಲ್ಲಿ ಹಿಮ ತೆರವು ಮಾಡಲು, ವಿಶೇಷ ಯೋಜನೆಗಳನ್ನು ಪೂರ್ಣಗೊಳಿಸಲು ಬಳಸಿಕೊಳ್ಳಲಾಗುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

ದಕ್ಷಿಣ ಕೊರಿಯಾದ ಯುದ್ಧ ಕೈದಿಗಳು ಉತ್ತರ ಕೊರಿಯಾದ ಕಲ್ಲಿದ್ದಲು ಗಣಿಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಬಗ್ಗೆ ಬಿಬಿಸಿ ಇತ್ತೀಚೆಗೆ ವರದಿ ಮಾಡಿದೆ.

2.6 ಕೋಟಿ ಜನಸಂಖ್ಯೆಯ ಉತ್ತರ ಕೊರಿಯಾ ಕಿಮ್‌ ಕುಟುಂಬದ ಆಳ್ವಿಕೆಗೆ ಒಳಪಟ್ಟಿದೆ. 'ದೇಶ ಕಠಿಣ ದಿನಗಳನ್ನು ಎದುರಿಸಲು ಸಿದ್ಧವಾಗಿರಬೇಕು,' ಎಂದು ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹೇಳಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ 2020 ರಲ್ಲಿ ತನ್ನ ಗಡಿಗಳನ್ನು ಮುಚ್ಚಿದೆ. ಅದರ ಆರ್ಥಿಕ ಜೀವಸೆಲೆಯಾದ ಚೀನಾದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು