ಕೋವಿಡ್ ಪ್ರಕರಣಗಳ ಏರಿಕೆಯಿಂದ ಉತ್ತರ ಕೊರಿಯಾ 'ಕ್ಷೋಭೆ' ಎದುರಿಸುತ್ತಿದೆ: ಕಿಮ್

ಸೋಲ್: ಉತ್ತರ ಕೊರಿಯಾದಲ್ಲಿ ಶನಿವಾರ ಕೋವಿಡ್‌ನಿಂದಾಗಿ 21 ಮಂದಿ ಮೃತಪಟ್ಟಿದ್ದಾರೆ. ಸುಮಾರು 1.74 ಲಕ್ಷಕ್ಕೂ ಹೆಚ್ಚು ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಕುರಿತು ಮಾತನಾಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಕೊರೊನಾವೈರಸ್ ಹರಡುವಿಕೆಯಿಂದ ದೇಶವು 'ಕ್ಷೋಭೆ' ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ. ಈ ಕುರಿತು ಪರಿಶೀಲನೆಗಾಗಿ ಕಿಮ್, ಶನಿವಾರ ಪಾಲಿಟ್‌ಬ್ಯೂರೊ ಸಭೆ ನಡೆಸಿದ್ದಾರೆ. ಇದಾದ ಬಳಿಕ, ದೇಶದಲ್ಲಿ ಹೊಸದಾಗಿ ವರದಿಯಾಗಿರುವ ಕೋವಿಡ್ ಸಂಬಂಧಿತ ಪ್ರಕರಣಗಳ ಬಗ್ಗೆ ಸರ್ಕಾರಿ ಸುದ್ದಿ ಮಾಧ್ಯಮಗಳು ಮಾಹಿತಿ ಪ್ರಕಟಿಸಿವೆ ಎಂದು 'ಯೋನ್‌ಹಾಪ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಭೆಯಲ್ಲಿ ಮುಖ್ಯವಾಗಿ, ತುರ್ತು ವೈದ್ಯಕೀಯ ಸೇವೆಗಳ ಸರಬರಾಜು ಮತ್ತು ವಿತರಣೆ ಕುರಿತಂತೆ ಚರ್ಚಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಸುದ್ದಿ ಮಾಧ್ಯಮಗಳು ಪ್ರಕಟಿಸಿವೆ.
ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ: 21 ಸಾವು
'ರಾಷ್ಟ್ರೀಯ ತುರ್ತು ಸಾಂಕ್ರಾಮಿಕ ತಡೆಗಟ್ಟುವಿಕೆ' ಪ್ರಧಾನ ಕಚೇರಿಯಿಂದ ಸದ್ಯದ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡ ಕಿಮ್, ದೇಶ ಸ್ಥಾಪನೆಯಾದ ಬಳಿಕ ದೊಡ್ಡ ಕ್ಷೋಭೆ ಎದುರಿಸುತ್ತಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಚೀನಾ ಸೇರಿದಂತೆ ಇತರ ರಾಷ್ಟ್ರಗಳಿಂದ ಕಲಿಯಬೇಕು ಎಂದು ಕಿಮ್ ಆಗ್ರಹಿಸಿದ್ದಾರೆ. ಹಾಗೆಯೇ, ಕೊರೊನಾವೈರಸ್ ಅನ್ನು ಶೀಘ್ರವೇ ನಿಯಂತ್ರಿಸಬಹುದು ಎಂಬ ನಂಬಿಕೆ ಇರಿಸುವಂತೆ ಕರೆ ನೀಡಿರುವ ಅವರು, ಇದೇನು ತಡೆಯಲು ಅಸಾಧ್ಯವಾದುದ್ದಲ್ಲ. ಏಕೆಂದರೆ, ಹಲವು ಪ್ರದೇಶಗಳಲ್ಲಿ ಈಗಾಗಲೇ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಏಪ್ರಿಲ್ ಅಂತ್ಯದಿಂದ ಮೇ 13ರ ವರೆಗೆ ಉತ್ತರ ಕೊರಿಯಾದಲ್ಲಿ 5,24,440 ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಇದರಲ್ಲಿ 2,43,630 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಉಳಿದ 2,80,810 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏತನ್ಮಧ್ಯೆ, ಉತ್ತರ ಕೊರಿಯಾದಲ್ಲಿ ಇದುವರೆಗೆ ಕೊರೊನಾವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿದೆ.
ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ಗುರುವಾರ ವರದಿಯಾಗಿದೆ ಎಂದು ಉತ್ತರ ಕೊರಿಯಾ ಖಚಿತಪಡಿಸಿತ್ತು.
ಇವನ್ನೂ ಓದಿ
* ಉತ್ತರ ಕೊರಿಯಾ: ಕೋವಿಡ್ ಪ್ರಕರಣ ಪತ್ತೆ ಬೆನ್ನಲ್ಲೇ ಆರು ಮಂದಿ ಸಾವು
* ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಪ್ರಕರಣ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ
* ರಿಯಾಲಿಟಿ ಶೋ ಕೊರಿಯೊಗ್ರಾಫರ್ ಟೀನಾ ಸಿಧು ಅನುಮಾನಾಸ್ಪದ ಸಾವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.