ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳ ಪರ ‘ಸುಪ್ರೀಂ’ ಉದ್ದೇಶಪೂರ್ವಕ ತೀರ್ಪು: ಒಲಿ ಆರೋಪ

Last Updated 13 ಜುಲೈ 2021, 14:45 IST
ಅಕ್ಷರ ಗಾತ್ರ

ಕಠ್ಮಂಡು: ‘ವಿರೋಧ ಪಕ್ಷಗಳ ಪರವಾಗಿ ಸುಪ್ರೀಂ ಕೋರ್ಟ್ ಉದ್ದೇಶಪೂರ್ವಕವಾಗಿ ತೀರ್ಪು ನೀಡುತ್ತಿದೆ’ ಎಂದು ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಆರೋಪಿಸಿದ್ದು, ‘ಈ ರೀತಿಯ ತೀರ್ಪು, ಬಹುಪಕ್ಷಗಳಿರುವ ಸಂಸದೀಯ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಒಲಿ, ‘ಜನರಿಂದ ಆಯ್ಕೆಯಾಗಿದ್ದರೂ ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಏಕೆಂದರೆ ಸುಪ್ರೀಂ ಕೋರ್ಟ್, ನೇಪಾಳಿ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹದ್ದೂರ್ ದೇವುಬಾ ಅವರನ್ನು ಎರಡು ದಿನದೊಳಗೆ ಪ್ರಧಾನಿಯನ್ನಾಗಿ ನೇಮಕ ಮಾಡಬೇಕೆಂದು ಆದೇಶ ನೀಡಿದೆ’ ಎಂದರು.

‘ಆಟ ಆಡುವುದು ಆಟಗಾರನ ಕರ್ತವ್ಯ. ಅಲ್ಲಿ ಆಟ ನ್ಯಾಯಯುತವಾಗಿ ಸಾಗಲು ರೆಫರಿ ಇದ್ದಾನೆ. ಆತ ಯಾವುದೇ ಒಂದು ತಂಡವನ್ನು ಗೆಲ್ಲಲು ಸಹಾಯ ಮಾಡಬಾರದು’ ಎಂದು ನೇಪಾಳಿ ಭಾಷೆಯಲ್ಲಿ ಅವರು ಮಾರ್ಮಿಕವಾಗಿ ನುಡಿದರು.

‘ಸುಪ್ರೀಂ ಕೋರ್ಟ್ ಉದ್ದೇಶಪೂರ್ವಕವಾಗಿ ವಿರೋಧ ಪಕ್ಷಗಳ ಪರವಾಗಿ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಬಳಸಲಾದ ನಿಯಮಗಳು ಮತ್ತು ಭಾಷೆಯು ಬಹುಪಕ್ಷೀಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇದು ತಾತ್ಕಾಲಿಕ ಸಂತೋಷದ ವಿಷಯವಾಗಿದ್ದು, ಇದರ ಪರಿಣಾಮವು ದೀರ್ಘಕಾಲ ಇರಲಿದೆ’ ಎಂದು ಒಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಸ್ಥಳೀಯ ‘ರಿಪಬ್ಲಿಕಾ’ ಪತ್ರಿಕೆಯು ವರದಿ ಮಾಡಿದೆ.

‘ನಮ್ಮ ಪಕ್ಷವು ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೆ ತರುತ್ತದೆ. ಆದರೆ, ಇದು ಬಹು ಪಕ್ಷಗಳಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶಪಡಿಸುವುದು ಖಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT