ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವಿರುದ್ಧ ಪ್ರತಿ ದಾಳಿ; ಈ ವರ್ಷ ಜಯ ನಮ್ಮದೇ ಎಂದ ಉಕ್ರೇನ್‌ ಅಧ್ಯಕ್ಷ

Last Updated 24 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಕೀವ್‌, ಉಕ್ರೇನ್‌: ‘ರಷ್ಯಾ ವಿರುದ್ಧ ಪ್ರತಿ ದಾಳಿಗೆ ಎಲ್ಲ ಸಿದ್ಧತೆಗಳು ನಡೆದಿವೆ. ರಷ್ಯಾವನ್ನು ಈ ವರ್ಷ (2023) ಸೋಲಿಸಲು ಸಕಲವನ್ನೂ ಮಾಡುತ್ತೇವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಶುಕ್ರವಾರ ಪ್ರತಿಜ್ಞೆ ಮಾಡಿದರು.

ಎರಡನೇ ಮಹಾಯುದ್ಧದ ನಂತರ ಯುರೋಪಿನ ಅತಿದೊಡ್ಡ ಸಂಘರ್ಷವೆನಿಸಿರುವ ಉಕ್ರೇನ್‌– ರಷ್ಯಾ ನಡುವಿನ ಯುದ್ಧವು ಶುಕ್ರವಾರ (ಫೆ.24) ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಾಗ ‘ರಷ್ಯಾ ಮೇಲೆ ಪ್ರತಿ ಆಕ್ರಮಣ ಮಾಡುತ್ತೇವೆ. ಮುಂದಿನ ತಿಂಗಳೊಳಗೆ ಆಕ್ರಮಣಕಾರರನ್ನು ಮಣಿಸುತ್ತೇವೆ’ ಎಂದು ಝೆಲೆನ್‌ಸ್ಕಿ ಘೋಷಿಸಿದರು.

‘ನಾವು ಸಹಿಸಿಕೊಂಡಿದ್ದೇವೆ. ನಾವು ಸೋತಿಲ್ಲ. ಗೆಲುವು ಸಾಧಿಸಲು ಈ ವರ್ಷ ಎಲ್ಲವನ್ನೂ ಮಾಡುತ್ತೇವೆ’ ಎಂದು ಝೆಲೆನ್‌ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಬುಕಾ, ಇರ್ಪಿನ್‌, ಮರಿಯುಪೊಲ್‌ನಲ್ಲಿ ರಷ್ಯಾ ಎಸಗಿರುವ ಯುದ್ಧಾಪರಾಧಗಳಿಗೆ ತಕ್ಕ ಶಾಸ್ತಿ ಮಾಡುವವರೆಗೂ ವಿರಮಿಸುವುದಿಲ್ಲ’ ಎಂದು ಝೆಲೆನ್‌ಸ್ಕಿ ಗುಡುಗಿದ್ದಾರೆ.

ಶಾಂತಿ ಮಾತುಕತೆಗೆ ಚೀನಾ ಒತ್ತಾಯ: ಉಕ್ರೇನ್‌ ಮೇಲಿನ ಯುದ್ಧದ ವೇಳೆ ರಷ್ಯಾಕ್ಕೆ ನಿಕಟವಾಗಿರುವ ಚೀನಾ, ಇದೇ ವೇಳೆ 12 ಅಂಶಗಳ ಪತ್ರ ಬಿಡುಗಡೆ ಮಾಡಿದ್ದು, ಉಕ್ರೇನ್ ಮತ್ತು ರಷ್ಯಾ ಆದಷ್ಟು ಶೀಘ್ರ ಶಾಂತಿ ಮಾತುಕತೆ ಮರಳಬೇಕೆಂದು ಒತ್ತಾಯಿಸಿದೆ. ಆದರೆ, ಚೀನಾದ ಬದ್ಧತೆಯ ಬಗ್ಗೆ ಜರ್ಮನಿ ಸಂಶಯ ವ್ಯಕ್ತಪಡಿಸಿದೆ.

‘ಭದ್ರತಾ ಮಂಡಳಿಗೆ ಬೇಕು ಭಾರತದ ಪ್ರಾತಿನಿಧ್ಯ’ (ಮುಂಬೈ ವರದಿ–ಪಿಟಿಐ): ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದ್ಯದ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಭದ್ರತಾ ಮಂಡಳಿಯ ಪುನರ್‌ ರಚನೆ ಅತ್ಯಗತ್ಯ. ಇದರಲ್ಲಿ ಭಾರತಕ್ಕೆ ಹೆಚ್ಚಿನ ಪಾತ್ರವಿರಬೇಕು’ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಶುಕ್ರವಾರ ಅಭಿಪ್ರಾಯಪಟ್ಟರು.

ಎಬಿಪಿ ನೆಟ್‌ವರ್ಕ್‌ನ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವ ಸ್ಥಾನ ಮುಂದುವರಿಸಬೇಕೆ ಎನ್ನುವ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಭದ್ರತಾ ಮಂಡಳಿಯನ್ನು ಪುನರ್‌ ರಚಿಸುವುದು ಅಗತ್ಯವಾಗಿದೆ. ಭದ್ರತಾ ಮಂಡಳಿಯ ಐದು ಸದಸ್ಯ ರಾಷ್ಟ್ರಗಳಲ್ಲಿ ಈಗ ಒಂದು ರಾಷ್ಟ್ರ ಉಕ್ರೇನ್‌ನಲ್ಲಿ ಅಕ್ರಮ ಯುದ್ಧದಲ್ಲಿ ತೊಡಗಿದೆ. ಹೀಗಿರುವಾಗ ನಾವು ಏನನ್ನು ಅನುಸರಿಸುತ್ತಿದ್ದೇವೆ, ಈ ಮಂಡಳಿ ಹೇಗೆ ಕಾರ್ಯನಿರ್ವಹಿಸುತ್ತಿದೆ? ಎಂದು ಪ್ರಶ್ನಿಸುವುದು ಸಹಜ. ಜಾಗತಿಕ ಮಟ್ಟದಲ್ಲಿ ಭಾರತ ಪ್ರಮುಖ ಪಾಲುದಾರ, ವಿಶ್ವಸಂಸ್ಥೆಯಲ್ಲಿ ಭಾರತ ಹೆಚ್ಚಿನ ಪಾತ್ರ ವಹಿಸಬೇಕೆನ್ನುವುದನ್ನು ನಾನು ಖಂಡಿತವಾಗಿಯೂ ಬೆಂಬಲಿಸುತ್ತೇನೆ’ ಎಂದು ಅವರು ಹೇಳಿದರು.

ಉಕ್ರೇನ್ ಯುದ್ಧದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಾವುದೇ ನಿರ್ಣಾಯಕ ಪರಿಣಾಮ ಬೀರುವುದಿಲ್ಲ. ಹಾಗಾಗಿ, ನಾವು ತ್ವರಿತಗತಿಯಲ್ಲಿ ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡಬೇಕಾಗಿತ್ತು ಎಂದು ಟ್ರಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT