ಮಂಗಳವಾರ, ಆಗಸ್ಟ್ 16, 2022
30 °C

ಕೊರೊನಾಗೆ ಒಂದು ವರ್ಷ: ಈಗ ಹೇಗಿದೆ ಚೀನಾದ ವುಹಾನ್ ಮಾರುಕಟ್ಟೆ?

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Wuhan market

ವುಹಾನ್: ಸುಮಾರು 6 ವರ್ಷಗಳ ಹಿಂದಿನಿಂದಲೂ ಚೀನಾದ ವುಹಾನ್ ಮಾರುಕಟ್ಟೆಯ ರೆಸ್ಟೋರೆಂಟ್ ಒಂದರ ಮಾಲೀಕ, 38ರ ವಯಸ್ಸಿನ ಲಾಯ್ ಯುನ್ ಅವರು ಮನೆಯಿಂದ ನಡಿಗೆಯ ಮೂಲಕವೇ 10 ನಿಮಿಷಗಳಲ್ಲಿ ಮಾರುಕಟ್ಟೆ ತಲುಪುತ್ತಿದ್ದರು. ‘ಮಕ್ಕಳನ್ನು ಶಾಲೆಗೆ ಕಳುಹಿಸಿ, ಬೆಳಗ್ಗಿನ ಉಪಾಹಾರ ಸೇವಿಸಿ ನಡೆದುಕೊಂಡೇ ಮಾರುಕಟ್ಟೆ ತಲುಪುತ್ತಿದ್ದೆ. ಅದು ಬಹಳ ಆರಾಮದಾಯಕವಾಗಿತ್ತು’ ಎನ್ನುತ್ತಾರವರು.

ಆದರೆ, 2019ರ ಡಿಸೆಂಬರ್‌ 31ರ ಬಳಿಕ ಮಾರುಕಟ್ಟೆಯ ಚಿತ್ರಣ ಬದಲಾಯಿತು. ಮಾರುಕಟ್ಟೆಯಲ್ಲಿ ಕೆಲವರಿಗೆ ನ್ಯುಮೋನಿಯಾ ಮಾದರಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಎರಡು ವಾರಗಳ ವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಯಿತು. ನಂತರ 76 ದಿನಗಳ ಲಾಕ್‌ಡೌನ್‌ ಘೋಷಿಸಲಾಯಿತು. ಜನರು ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಲಾಯಿತು.

ಕೊರೊನಾ ಮೊದಲು ಪತ್ತೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ಈವರೆಗೆ ವಿಶ್ವದಾದ್ಯಂತ ಸೋಂಕಿನಿಂದ 15 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವುಹಾನ್‌ನ ಸುತ್ತಲಿನ ನಗರಗಳೆಲ್ಲ ಈಗ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಮಾರುಕಟ್ಟೆ ಮಾತ್ರ ಖಾಲಿಯಾಗಿದೆ. ವೈರಸ್‌ನ ಮೂಲಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದ, ರಾಜಕೀಯ ಟೀಕೆಗಳ ಸಂಕೇತವಾಗಿಯೇ ವುಹಾನ್ ಉಳಿದುಕೊಂಡಿದೆ.

ಇದನ್ನೂ ಓದಿ: 

ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಇನ್ನಷ್ಟೇ ವುಹಾನ್‌ಗೆ ಭೇಟಿ ನೀಡಬೇಕಿದೆ. ವೈರಸ್‌ನ ಮೂಲ ಪತ್ತೆಹಚ್ಚುವ ಕಾರ್ಯಕ್ಕೆ ಇನ್ನಷ್ಟು ವರ್ಷಗಳು ಬೇಕಾಗಬಹುದು ಮತ್ತು ಅನಿಶ್ಚಿತ ಫಲಿತಾಂಶ ನಿರೀಕ್ಷಿಸಬಹುದು ಎಂದು ಚೀನಾ ಮತ್ತು ಇತರ ದೇಶಗಳ ಆರೋಗ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಕೊರೊನಾ ವೈರಸ್‌ನ ಕೇಂದ್ರ ಬಿಂದು ವುಹಾನ್ ಎಂಬುದನ್ನು ಅಲ್ಲಿನ ನಿವಾಸಿಗಳು ಒಪ್ಪಿಕೊಳ್ಳುತ್ತಿಲ್ಲ. ಒಂದು ಡಜನ್‌ಗೂ ಹೆಚ್ಚು ನಿವಾಸಿಗಳು, ಉದ್ಯಮಿಗಳು ಕೊರೊನಾ ವೈರಸ್‌ ವುಹಾನ್‌ನಿಂದಲೇ ಹರಡಿದೆ ಎಂಬುದನ್ನು ಒಪ್ಪುವುದಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಅದು ಖಂಡಿತವಾಗಿಯೂ ವುಹಾನ್‌ನಿಂದ ಹರಡಿಲ್ಲ. ಖಂಡಿತವಾಗಿಯೂ ಹೊರಗಿನಿಂದ ಬಂದ ಇನ್ನೊಬ್ಬ ವ್ಯಕ್ತಿಯ ಮೂಲಕ ಅದು ಹರಡಿದೆ ಅಥವಾ ಖಂಡಿತವಾಗಿಯೂ ಅದು ಹೊರಗಿನಿಂದ ತಂದ ಉತ್ಪನ್ನದಿಂದ ಬಂದಿದೆ’ ಎನ್ನುತ್ತಾರೆ ವುಹಾನ್ ಜನ.

ಇದನ್ನೂ ಓದಿ: 

ಇತ್ತೀಚೆಗೆ ಚೀನಾದ ರಾಜತಾಂತ್ರಿಕ ಅಧಿಕಾರಿಗಳೂ ಇದೇ ಮಾತುಗಳನ್ನಾಡಿದ್ದು, ಬೇರೆ ದೇಶಗಳತ್ತ ಬೊಟ್ಟು ಮಾಡಲು ಪ್ರಯತ್ನಿಸಿದ್ದಾರೆ.

ಮುಂದುವರಿದ ನಿರ್ಬಂಧ

ಸದ್ಯ ವುಹಾನ್ ಮಾರುಕಟ್ಟೆ ಪ್ರದೇಶದ ಮೇಲೆ ನಿರ್ಬಂಧ ಮುಂದುವರಿದಿದೆ. ಲಾಕ್‌ಡೌನ್ ಘೋಷಿಸುವ ಮುನ್ನ ನೂರಾರು ಸಂಖ್ಯೆಯಲ್ಲಿ ಜನರಿಂದ ಗಿಜಿಗಿಡುತ್ತಿದ್ದ ಮಾಂಸ, ಸಾಗರೋತ್ಪನ್ನ ಹಾಗೂ ತರಕಾರಿ ಮಾರುಕಟ್ಟೆಯೀಗ ಬಿಕೋ ಎನ್ನುತ್ತಿದೆ. ಮಾರುಕಟ್ಟೆಯ ಎರಡನೇ ಮಹಡಿಯಲ್ಲಿರುವ ಕನ್ನಡಕ ಮತ್ತು ಕನ್ನಡಕದ ಉಪಕರಣ ಮಾರಾಟ ಮಾಡುವ ಅಂಗಡಿಯನ್ನು ಜೂನ್‌ನಿಂದ ತೆರೆಯಲಾಗಿದೆ.

ಈ ವಾರ, ಪತ್ರಕರ್ತರಿಗೆ ವಿಡಿಯೊ ಮತ್ತು ಫೋಟೊ ತೆಗೆಯದಂತೆ ಸಿಬ್ಬಂದಿ ನಿರ್ಬಂಧ ವಿಧಿಸಿದ್ದು ವುಹಾನ್ ಬಗ್ಗೆ ಮತ್ತೆ ಸುದ್ದಿಯಾಗುವಂತೆ ಮಾಡಿತ್ತು.

ಇದನ್ನೂ ಓದಿ: 

‘ಬಹುಶಃ ಕೆಲವು ಜನರು ಈ ಮಾರುಕಟ್ಟೆ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ಹೊಂದಿದ್ದಾರೆ, ಆದರೆ ಈಗ ಅದು ಕೇವಲ ಖಾಲಿ ಕಟ್ಟಡವಷ್ಟೆ. ಖಾಲಿ ಕಟ್ಟಡದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ’ ಎಂದು ಅಂಗಡಿಯ ಸಹಾಯಕರೊಬ್ಬರು ಪ್ರಶ್ನಿಸಿದ್ದಾರೆ.

ವುಹಾನ್‌ನಲ್ಲಿ ಮೇ ತಿಂಗಳ ಬಳಿಕ ಈವರೆಗೆ ಹೊಸದಾಗಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಆದರೂ ಮಾರುಕಟ್ಟೆ ಅವಲಂಬಿಸಿ ಜೀವನ ನಡೆಸುತ್ತಿದ್ದವರು ಇನ್ನೂ ಸಂಕಷ್ಟ ಎದುರಿಸುತ್ತಿದ್ದಾರೆ.

ಲಾಯ್ ಯುನ್ ಅವರ ಜಪಾನೀಸ್ ರೆಸ್ಟೋರೆಂಟ್‌ ಜೂನ್‌ನಿಂದ ಮರಳಿ ಕಾರ್ಯಾರಂಭ ಮಾಡಿದೆ. ಆದರೂ ‘ಆಮದು ಮಾಡಿಕೊಂಡಿರುವ ಸಾಗರೋತ್ಪನ್ನದ ಬಗ್ಗೆ ಇರುವ ಭಯ ಹಾಗೂ ಮತ್ತೆ ಯಾವಾಗ ಲಾಕ್‌ಡೌನ್ ಜಾರಿಯಾಗುತ್ತೋ ಎಂಬ ಭೀತಿಯಿಂದ ಜನ ಬರುತ್ತಿಲ್ಲ. ಇದರಿಂದ ತಯಾರಿಕಾ ವೆಚ್ಚವೂ ಐದುಪಟ್ಟು ಹೆಚ್ಚಿದೆ’ ಎಂದು ಅವರು ಹೇಳಿದ್ದಾರೆ.

‘ಏನಿದ್ದರೂ ಮುಂದಿನ ವರ್ಷದ ವರೆಗೆ ಜೀವನ ತಳ್ಳುವುದು ನಮ್ಮ ಗುರಿಯಷ್ಟೆ’ ಎನ್ನುತ್ತಾರವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು