ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಧರ್ಮಗಳಿಗಷ್ಟೇ ಕಾಳಜಿ: ವಿಶ್ವಸಂಸ್ಥೆ ಕ್ರಮಕ್ಕೆ ಭಾರತ ವಿರೋಧ

Last Updated 3 ಡಿಸೆಂಬರ್ 2020, 19:13 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಆಯ್ದ ಮೂರು ಧರ್ಮಗಳ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿರುವ ವಿಶ್ವ ಸಂಸ್ಥೆಯ ಕ್ರಮವನ್ನು ವಿರೋಧಿಸಿದ ಭಾರತವು, ‘ಹಿಂದೂ, ಬೌದ್ಧ ಹಾಗೂ ಸಿಖ್ಖ್‌ ಧರ್ಮಗಳ ವಿರುದ್ಧ ನಡೆಯುತ್ತಿರುವ ಹಿಂಸೆಗಳನ್ನು ಗುರುತಿಸುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ’ ಎಂದಿದೆ.

‘ಶಾಂತಿ ಸಂಸ್ಕೃತಿ’ ವಿಚಾರವನ್ನು ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆದ ಅಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಸಮಿತಿಯ ಕಾರ್ಯದರ್ಶಿ ಆಶಿಷ್‌ ಶರ್ಮಾ ಅವರು ವಿಶ್ವಸಂಸ್ಥೆಯ ನಿಲುವನ್ನು ತೀವ್ರವಾಗಿ ಟೀಕಿಸಿದರು.

‘ಶಾಂತಿ ಸಂಸ್ಕೃತಿಯನ್ನು ಯಹೂದಿ, ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳಿಗೆ ಸೀಮಿತಗೊಳಿಸಬಾರದು. ಇಂಥ ಸೀಮಿತತೆ ಇರುವವರೆಗೂ ಜಗತ್ತಿನಲ್ಲಿ ನಿಜಾರ್ಥದಲ್ಲಿ ಶಾಂತಿಯ ಸಂಸ್ಕೃತಿ ನೆಲೆನಿಲ್ಲಲು ಸಾಧ್ಯವಿಲ್ಲ. ಈ ನೀತಿ ಅನುಸರಿಸಿದರೆ, ಅಮೆರಿಕದ ರಾಜಕೀಯ ವಿಜ್ಞಾನಿ ಸ್ಯಾಮ್ಯುಯಲ್‌ ಹಂಟಿಂಗ್ಟನ್‌ ಅವರು ಹೇಳಿದಂತೆ ಜಗತ್ತಿನಲ್ಲಿ ‘ನಾಗರಿಕತೆಗಳ ಸಂಘರ್ಷ’ವನ್ನು ಮಾತ್ರ ಕಾಣಲು ಸಾಧ್ಯವಾದೀತು ಎಂದು ಶರ್ಮಾ ಹೇಳಿದರು.

ಕ್ರೈಸ್ತರು ಹಾಗೂ ಯಹೂದಿಗಳ ವಿರುದ್ಧದ ದಾಳಿ ಮತ್ತು ಇಸ್ಲಾಮೊಫೋಬಿಯಾವನ್ನು ಖಂಡಿಸಲೇಬೇಕು. ಆದರೆ, ಬೌದ್ಧರು, ಹಿಂದೂಗಳು ಹಾಗೂ ಸಿಖ್ಖರ ವಿರುದ್ಧವೂ ಹಿಂಸೆಗಳು ನಡೆಯುತ್ತಿವೆ ಎಂಬುದನ್ನು ಗುರುತಿಸಲು ಈ ಸಂಸ್ಥೆ ವಿಫಲವಾಗಿದೆ ಎಂದರು. ಅಫ್ಗಾನಿಸ್ತಾನದಲ್ಲಿ ಮೂಲಭೂತವಾದಿಗಳು ಬಮಿನಾನ್‌ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ಗುರುದ್ವಾರಾದ ಮೇಲೆ ಬಾಂಬ್‌ ಹಾಕಿ 25 ಸಿಕ್ಖರನ್ನು ಹತ್ಯೆ ಮಾಡಿದ್ದು ಹಾಗೂ ವಿವಿಧ ರಾಷ್ಟ್ರಗಳಲ್ಲಿ ಈ ಹಿಂದೂ ಹಾಗೂ ಬೌದ್ಧರ ದೇವಾಲಯಗಳನ್ನು ನಾಶಮಾಡಿರುವ ಘಟನೆಗಳನ್ನು ಶರ್ಮಾ ತಮ್ಮ ಭಾಷಣದ ಸಂದರ್ಭದಲ್ಲಿ ಉಲ್ಲೇಖಿಸಿದರು.

‘ಮೂರು ಧರ್ಮಗಳ ವಿರುದ್ಧದ ಹಿಂಸಾಕೃತ್ಯಗಳನ್ನು ಖಂಡಿಸಿದವರು ಅಷ್ಟೇ ಪ್ರಬಲವಾಗಿ ಇತರ ಧರ್ಮಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ನಾವಿಲ್ಲಿ ನಾಗರಿಕತೆಗಳ ಒಗ್ಗೂಡುವಿಕೆಯ ಬಗ್ಗೆ ಮಾತನಾಡಬೇಕೇ ವಿನಾ ಸಂಘರ್ಷ ಸೃಷ್ಟಿಸಲು ಶ್ರಮಿಸಬಾರದು. ಆದ್ದರಿಂದ ಇಲ್ಲಿರುವ ಸದಸ್ಯರು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಮಾತನಾಡಬೇಕು. ಧರ್ಮಾಧಾರಿತ ಹಿಂಸಾಚಾರದ ಬಗ್ಗೆ ನಿರ್ಣಯ ಅಂಗೀಕರಿಸುವಾಗ ಈ ಮೂರು ಧರ್ಮಗಳನ್ನೂ ಸೇರಿಸಬೇಕು ಎಂದು ನಾವು ಬಯಸುತ್ತೇವೆ’ ಎಂದರು.

ವಿಶ್ವ ಸಂಸ್ಥೆಯ ನಿರ್ಣಯಗಳು ಈ ಮೂರು ಧರ್ಮಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಉಳಿದ ಧರ್ಮಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಇತರ ಕೆಲವು ರಾಷ್ಟ್ರಗಳೂ ಆಕ್ಷೇಪ ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT