ಮಂಗಳವಾರ, ಮಾರ್ಚ್ 21, 2023
23 °C

ಶ್ರಮಿಕರ ನೆರವಿಗೆ ತುರ್ತು ಕ್ರಮ ಕೈಗೊಂಡಿದ್ದೆ– ಲಿಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ಪಿಟಿಐ): ಶ್ರಮಿಕ ಕುಟುಂಬಗಳ ನೆರವಿಗೆ ಮತ್ತು ಸಾವಿರಾರು ವ್ಯವಹಾರಗಳು ದಿವಾಳಿಯಾಗುವುದನ್ನು ತಪ್ಪಿಸಲು ತಮ್ಮ ಸರ್ಕಾರ ತುರ್ತು ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿತ್ತು ಎಂದು ನಿರ್ಗಮಿತ ಪ್ರಧಾನಿ ಲಿಜ್‌ ಟ್ರಸ್‌ ಮಂಗಳವಾರ ಹೇಳಿದರು.

ರಾಜ ಮೂರನೇ ಚಾರ್ಲ್ಸ್‌ ಅವರಿಗೆ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸಲು ಬಕಿಂಗ್‌ಹ್ಯಾಮ್‌ ಅರಮನೆಗೆ ಹೋಗುವ ಮೊದಲು 10 ಡೌನಿಂಗ್ ಸ್ಟ್ರೀಟ್‌ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಕ್ಯಾಬಿನೆಟ್ ಸಭೆಯ ನಂತರ ಅವರು ಮಾತನಾಡಿದರು.

ಇಂಧನ ಸ್ವಾವಲಂಬನೆಯನ್ನು ಮರಳಿ ಪಡೆಯಲಾಗಿದೆ. ಇನ್ನು ಮುಂದೆ ವಿದೇಶಿ ಶಕ್ತಿಗಳನ್ನು ಅವಲಂಬಿಸಬೇಕಾಗಿಲ್ಲ ಎಂದು ಅವರು ಹೇಳಿದರು.     

ರಾಣಿ ಎರಡನೇ ಎಲಿಜಬೆತ್ ಸಾವಿನ ಶೋಕ ಮತ್ತು ರಾಜ ಮೂರನೇ ಚಾರ್ಲ್ಸ್‌ ಅವರನ್ನು ಸ್ವಾಗತಿಸುವ ಸಂದರ್ಭ ಪ್ರಧಾನಿಯಾಗಿದ್ದದ್ದು ನನ್ನ ಪಾಲಿಗೆ ಬಹುದೊಡ್ಡ ಗೌರವ ಎಂದು ಟ್ರಸ್‌ ಹೇಳಿದರು. 

ರಿಷಿಗೆ ಪ್ರತಿ ಹಂತದಲ್ಲೂ ಯಶಸ್ಸು ಬಯಸುವೆ: ದೇಶದ ಒಳಿತಿಗಾಗಿ ನೂತನ ಪ್ರಧಾನಿ ರಿಷಿ ಸುನಕ್‌ ಅವರಿಗೆ ಪ್ರತಿ ಹಂತದಲ್ಲೂ ಯಶಸ್ಸು ಬಯಸುತ್ತೇನೆ ಎಂದು ಲಿಜ್‌ ಟ್ರಸ್‌ ವಿದಾಯ ಭಾಷಣದಲ್ಲಿ ಹೇಳಿದರು.

‘ನಮ್ಮ ದೇಶ ನಿರಂತರ ಬಿರುಗಾಳಿಯೊಂದಿಗೆ ಸೆಣಸುತ್ತಲೇ ಇದೆ. ಬ್ರಿಟನ್‌ ಮತ್ತು ಬ್ರಿಟಿಷ್‌ ಜನರ ಮೇಲೆ ನಾನು ನಂಬಿಕೆ ಇರಿಸಿದ್ದೇನೆ. ಮುಂದೆ ಉಜ್ವಲ ದಿನಗಳು ಖಂಡಿತಾ ಬರಲಿವೆ. ನಾನು ನನ್ನ ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವೆ’ ಎಂದು ಹೇಳಿದರು.

ಸುನಕ್‌ ಆಯ್ಕೆ ಮಹತ್ವದ ಮೈಲಿಗಲ್ಲು: ಬೈಡನ್‌  

ವಾಷಿಂಗ್ಟನ್‌ : ಭಾರತ ಸಂಜಾತ  ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿರುವುದು ಬೆರಗಿನ ವಿಷಯ ಮತ್ತು ಇದೊಂದು ಮಹತ್ವದ ಮೈಲಿಗಲ್ಲು ಕೂಡ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಹಬ್ಬದ ಆಚರಣೆಯಲ್ಲಿ ಮಾತನಾಡಿದ ಅವರು, ಬ್ರಿಟನ್‌ ದೇಶವನ್ನು ಮುನ್ನಡೆಸುವ ಅವಕಾಶವನ್ನು ರಿಷಿ ಗಿಟ್ಟಿಸಿರುವುದು ವಲಸಿಗ ಭಾರತೀಯ ಸಮುದಾಯದ ಸಾಧನೆ ಎಂದು ಬಣ್ಣಿಸಿದರು. 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು