ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಬಿಕ್ಕಟ್ಟು: ಇಮ್ರಾನ್‌ ಸರ್ಕಾರಕ್ಕೆ ಇಂದು ಅಗ್ನಿಪರೀಕ್ಷೆ

ವಿದೇಶಿ ಸಂಚು: ತನಿಖೆಗೆ ಆಯೋಗ ರಚನೆ
Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ನಡೆದಿರುವ ವಿದೇಶಿ ಸಂಚಿನ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಸರ್ಕಾರವು ಶುಕ್ರವಾರ ತನಿಖಾ ಆಯೋಗ ರಚಿಸಿದೆ.

ಬಹುಮತ ಕಳೆದುಕೊಂಡಿರುವ ಇಮ್ರಾನ್‌ ಖಾನ್‌ ಅವರ ನೇತೃತ್ವದ ಸರ್ಕಾರವು ಸಂಸತ್ತಿನಲ್ಲಿಶನಿವಾರ ಬಹುಮತ ಸಾಬೀತು ಮಾಡಬೇಕಿದೆ. ಆದರೆ ಅದರ ಮುನ್ನಾ ದಿನ, ಸರ್ಕಾರವು ತನಿಖೆಗೆ ಆಯೋಗ ರಚನೆ ಮಾಡಿದೆ.

ಖಾನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ವಿದೇಶಿ ಸಂಚು ನಡೆದಿದೆ. ಹೀಗಾಗಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಬಾರದು ಎಂಬ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಹೀಗಿದ್ದೂ, ವಿಶ್ವಾಸಮತ ಸಾಬೀತಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

‘ಈ ಸಂಚಿನಲ್ಲಿ ವಿದೇಶಿ ಏಜೆಂಟರು ಮತ್ತು ದೇಶದ ಹಲವು ನಾಯಕರು ಭಾಗಿಯಾಗಿದ್ದಾರೆ. ಈ ಸಂಚನ್ನು ಬಯಲಿಗೆ ಎಳೆಯಲು ನಿವೃತ್ತ ಲೆಫ್ಟಿನೆಂಟ್‌ ಜನರಲ್ ತಾರಿಕ್ಖಾನ್ ನೇತೃತ್ವದಲ್ಲಿ ಆಯೋಗ ರಚಿಸಿದ್ದೇವೆ’ ಎಂದು ವಾರ್ತಾ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.

‘ಆಡಳಿತ ಮೈತ್ರಿಕೂಟವನ್ನು ತೊರೆದವರಲ್ಲಿ ಎಂಟು ಮಂದಿ, ವಿದೇಶಿ ರಾಯಬಾರಿಗಳು ಮತ್ತು ವಿದೇಶಿ ಏಜೆಂಟರ ಸಂಪರ್ಕದಲ್ಲಿ ಇದ್ದಾರೆ ಎಂಬುದು ಗೊತ್ತಾಗಿದೆ.ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನಮ್ಮ ಬಳಿ ಇವೆ. ತನಿಖಾ ಆಯೋಗವು ಇವನ್ನೆಲ್ಲಾ ಪರಿಶೀಲಿಸಲಿದೆ’ ಎಂದು ಚೌಧರಿ ಹೇಳಿದ್ದಾರೆ.

ಪ್ರಧಾನಿಯಾಗಲು ಶಹಬಾಜ್ ಸಿದ್ಧತೆ

ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನ್ನು ಮತ್ತು ಆಡಳಿತಾರೂಢ ಮೈತ್ರಿಕೂಟದ ಮಿತ್ರಪಕ್ಷಗಳನ್ನು ಒಗ್ಗೂಡಿಸಿರುವ ಪಿಎಂಎಲ್‌ನಾಯಕ ಶಹಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸೋದರನಾದ ಶಹಬಾಜ್, ಇಮ್ರಾನ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ತಂದ ಮುಂದಾಳು. ಇಮ್ರಾನ್ ಸರ್ಕಾರ ಈಗಾಗಲೇ ಬಹುಮತ ಕಳೆದುಕೊಂಡಿದೆ. ಶನಿವಾರ ಸರ್ಕಾರವು ಬಹುಮತ ಸಾಬೀತು ಮಾಡದೇ ಇದ್ದರೆ, ಪತನವಾಗಲಿದೆ.

ನಂತರ ಎಲ್ಲಾ ವಿರೋಧ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಶಹಬಾಜ್‌ ತಯಾರಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT