ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ವಿಧಿಸಿರುವ ಪಟ್ಟಿಯಲ್ಲಿ ದಾವೂದ್‌ ಹೆಸರು; ಆತ ನಮ್ಮ ದೇಶದಲ್ಲಿಲ್ಲ: ಪಾಕ್

ಎಫ್‌ಎಟಿಎಫ್‌ಗೆ ಮಣಿದ ಸರ್ಕಾರ: ಭಯೋತ್ಪಾದನೆ ಸಂಘಟನೆಗಳು ಮತ್ತು ನಾಯಕರ ಆಸ್ತಿ ಮುಟ್ಟುಗೋಲಿಗೆ ಆದೇಶ
Last Updated 23 ಆಗಸ್ಟ್ 2020, 10:21 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಭಯೋತ್ಪಾದನೆ ಸಂಘಟನೆಗಳ ಮೇಲೆ ಹೊಸದಾಗಿ ವಿಧಿಸಿರುವ ನಿರ್ಬಂಧಗಳ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರು ಇರುವುದನ್ನು ಪಾಕಿಸ್ತಾನ ದೃಢಪಡಿಸಿದೆ.

ನಿಷೇಧಿತ 88 ಭಯೋತ್ಪಾದನೆ ಸಂಘಟನೆಗಳು ಮತ್ತು ಈ ಸಂಘಟನೆಗಳ ನಾಯಕರ ಬಗ್ಗೆ ವಿಶ್ವಸಂಸ್ಥೆ ಒದಗಿಸಿದ ವಿವರಗಳ ಅನ್ವಯ ಈ ಕ್ರಮ ಕೈಗೊಂಡಿರುವುದಾಗಿ ಪಾಕಿಸ್ತಾನ ಪ್ರತಿಪಾದಿಸಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ಮತ್ತೆ ಹಿಂಜರಿದಿದೆ.

ಈ ಬಗ್ಗೆ ಭಾನುವಾರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ‘ನಿರ್ಬಂಧ ವಿಧಿಸಿರುವ ಪಟ್ಟಿಯಲ್ಲಿರುವ ಕೆಲವು ವ್ಯಕ್ತಿಗಳು ನಮ್ಮ ದೇಶದಲ್ಲಿದ್ದಾರೆ ಎನ್ನುವ ಕುರಿತು ಪ್ರಕಟವಾಗಿರುವ ವರದಿಗಳು ಆಧಾರರಹಿತ ಮತ್ತು ತಪ್ಪು ದಾರಿಗೆ ಎಳೆಯುವಂತಿವೆ’ ಎಂದು ಹೇಳಿದೆ.

ದಾವೂದ್‌ ಇಬ್ರಾಹಿಂ, ಜಮಾತ್‌–ಉದ್‌–ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್‌ ಹಾಗೂ ಜೈಷ್‌–ಇ–ಮೊಹಮ್ಮದ್‌ (ಜೆಇಎಂ) ಮುಖ್ಯಸ್ಥ ಮಸೂದ್‌ ಅಜರ್‌ ಸೇರಿದಂತೆ 88 ಭಯೋತ್ಪಾದನೆ ಸಂಘಟನೆಗಳು ಮತ್ತು ಈ ಸಂಘಟನೆಗಳ ನಾಯಕರ ವಿರುದ್ಧ ಶುಕ್ರವಾರ ಕಠಿಣ ಹಣಕಾಸು ನಿರ್ಬಂಧಗಳನ್ನು ವಿಧಿಸಿತ್ತು.

ಈ ಸಂಘಟನೆಗಳು ಮತ್ತು ಸಂಘಟನೆಗಳ ನಾಯಕರ ಎಲ್ಲ ಚರ ಮತ್ತು ಸ್ಥಿರ ಆಸ್ತಿಗಳು ಹಾಗೂ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕಿಸ್ತಾನ ಸರ್ಕಾರ ಆದೇಶಿಸಿದೆ.

ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದಕರ ಹಣಕಾಸು ವಹಿವಾಟಿನ ಮೇಲೆ ನಿಗಾ ಇಡುವ ಪ್ಯಾರಿಸ್‌ ಮೂಲದ ಹಣಕಾಸು ಕ್ರಿಯಾ ಕಾರ್ಯ ಪಡೆ(ಎಫ್‌ಎಟಿಎಫ್‌) ಎಚ್ಚರಿಕೆ ನೀಡಿದ್ದರಿಂದ ಪಾಕಿಸ್ತಾನ ಈ ಕ್ರಮಗಳನ್ನು ಕೈಗೊಂಡಿದೆ. 2019ರ ಅಂತ್ಯದ ಒಳಗೆ ಭಯೋತ್ಪಾದನೆ ಸಂಘಟನೆಗಳು ಮತ್ತು ನಾಯಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಎಫ್‌ಎಟಿಎಫ್‌ ಗಡುವು ನೀಡಿತ್ತು. ಕೋವಿಡ್‌–19 ಕಾರಣಕ್ಕೆ ಈ ಗಡುವು ವಿಸ್ತರಿಸಲಾಗಿತ್ತು. ಒಂದು ವೇಳೆ ಪಾಕಿಸ್ತಾನ ಕ್ರಮಕೈಗೊಳ್ಳದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ತಿಳಿಸಿತ್ತು.

2003ರಲ್ಲಿ ಅಮೆರಿಕ ದಾವೂದ್‌ ಇಬ್ರಾಹಿಂನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವ ಈತನನ್ನು ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನಕ್ಕೆ ಹಲವು ಬಾರಿ ಒತ್ತಾಯಿಸಿದೆ. ಕರಾಚಿಯ ದಕ್ಷಿಣ ಭಾಗದಲ್ಲಿ ದಾವೂದ್‌ ನೆಲೆಸಿದ್ದಾನೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT