ಗುರುವಾರ , ಸೆಪ್ಟೆಂಬರ್ 23, 2021
21 °C
ಅಫ್ಗಾನಿಸ್ತಾನ: ಅಮೆರಿಕದ ಸೇನೆ ಹಿಂತೆಗೆತ ಬಳಿಕ ಮೊದಲ ವಿದೇಶಿ ವಾಣಿಜ್ಯ ವಿಮಾನ ಸಂಚಾರ

ನಾಳೆಯಿಂದ ಕಾಬೂಲ್‌ಗೆ ಪಾಕ್‌ ವಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್ (ಎಎಫ್‌ಪಿ/ಪಿಟಿಐ/ರಾಯಿಟರ್ಸ್): ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಪಾಕಿಸ್ತಾನವು ಸೋಮವಾರದಿಂದ ವಿಮಾನ ಹಾರಾಟ ಆರಂಭಿಸಲಿದೆ.

ಅಫ್ಗಾನಿಸ್ತಾವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ಮೇಲೆ ಅಧಿಕೃತವಾಗಿ ವಾಣಿಜ್ಯ ವಿಮಾನ ಸಂಚಾರ ಆರಂಭಿಸುತ್ತಿರುವ ಮೊದಲ ದೇಶ ಪಾಕಿಸ್ತಾನವಾಗಿದೆ. 

ಅಫ್ಗನ್‌ನಿಂದ ವಿವಿಧ ದೇಶಗಳ ನಾಗರಿಕರ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕಾಬೂಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತೀವ್ರವಾಗಿ ಹಾನಿಗೊಂಡಿದೆ. ಸಾವಿರಾರು ಜನರು ಜಮಾವಣೆಗೊಂಡಿದ್ದರಿಂದ ನಿಲ್ದಾಣದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಆಗಸ್ಟ್ 30ರಂದು ಅಮೆರಿಕದ ಪಡೆಗಳು ವಿಮಾನ ಹಾರಾಟವನ್ನು ಕೊನೆಗೊಳಿಸಿದವು.

ವಿಮಾನ ಹಾರಾಟ ನಡೆಸಲು ತಾಂತ್ರಿಕ ಅನುಮತಿಗಾಗಿ ಕಾಯುತ್ತಿರುವುದಾಗಿ ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನದ (ಪಿಐಎ) ವಕ್ತಾರ ಅಬ್ದುಲ್ಲಾ ಹಫೀಸ್ ಖಾನ್ ತಿಳಿಸಿದ್ದಾರೆ. ‘ನಮ್ಮ ಮೊದಲ ವಾಣಿಜ್ಯ ಉದ್ಧೇಶದ ವಿಮಾನವು ಸೆ. 13ರಂದು ಕಾಬೂಲ್‌ಗೆ ಹಾರಾಟ ನಡೆಸಲಿದೆ’ ಎಂದಿದ್ದಾರೆ. ಬೇಡಿಕೆಯನ್ನು ಆಧರಿಸಿ ವಿಮಾನಗಳ ಹಾರಾಟ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಈ ಸಂಬಂಧ ವಿವಿಧ ಏಜೆನ್ಸಿಗಳು ಹಾಗೂ ಪತ್ರಕರ್ತರಿಂದ ಈವರೆಗೆ 73 ಮನವಿಗಳು ಬಂದಿವೆ ಎಂದು ಅವರು ಹೇಳಿದ್ದಾರೆ. ಅಫ್ಗಾನಿಸ್ತಾನವು ಕಳೆದ ವಾರ ದೇಶೀಯ ವಿಮಾನ ಸಂಚಾರವನ್ನು ಆರಂಭಿಸಿದೆ.

ಕತಾರ್ ಏರ್‌ವೇಸ್‌ನಿಂದ ತೆರವು ಕಾರ್ಯ

ಕಳೆದ ಮೂರು ದಿನಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಿಂದ 250ಕ್ಕೂ ಹೆಚ್ಚು ವಿದೇಶಿಗರನ್ನು ತೆರವು ಮಾಡಲಾಗಿದೆ. ಕತಾರ್‌ ಏರ್‌ವೇಸ್‌ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ. 

ಅಮೆರಿಕದ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ನೆರವಾದ ಕತಾರ್ ಸರ್ಕಾರವನ್ನು ಹಾಗೂ ತೆರವು ಕಾರ್ಯಾಚರಣೆಗೆ ನೆರವು ನೀಡಿದ ತಾಲಿಬಾನ್ ಆಡಳಿತವನ್ನು ಅಮೆರಿಕದ ವಿಶೇಷ ಪ್ರತಿನಿಧಿ ಝಲ್ಮೆ ಖಲೀಲ್‌ಜಾದ್ ಶ್ಲಾಘಿಸಿದ್ಧಾರೆ.

‘ದೇಶ ತೊರೆಯಲು ಇಚ್ಛಿಸುವ ನಾಗರಿಕರು, ವಿದೇಶಿಗರನ್ನು ಕರೆತರುವ ನಿಟ್ಟಿನಲ್ಲಿ ಕತಾರ್, ತಾಲಿಬಾನ್ ಹಾಗೂ ಇತರರ ಜೊತೆ ಸಂಪರ್ಕದಲ್ಲಿ ಇರಲಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ, ಅಮೆರಿಕದ ನಾಗರಿಕರು ಮತ್ತು ಹಸಿರು ಕಾರ್ಡ್ ಹೊಂದಿರುವವರು ಸೇರಿದಂತೆ ನೂರಾರು ಅಫ್ಗಾನ್ ಜನರು ಮಜರ್-ಎ-ಷರೀಫ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಯಾಣ ದಾಖಲೆಗಳನ್ನು ಮುಂದಿಟ್ಟುಕೊಂಡು ತಾಲಿಬಾನ್ ಅವರಿಗೆ ತಡೆ ನೀಡಿದ್ದು, ಸ್ಥಳಾಂತರಗೊಳ್ಳಲು ಅವರೆಲ್ಲ ಕಾಯುತ್ತಿದ್ದಾರೆ.

ತಾಲಿಬಾನ್ ಬೆಂಬಲಿಸಿದ ಮಹಿಳೆಯರು

ಕಾಬೂಲ್ ವಿಶ್ವವಿದ್ಯಾಲಯದ ಉಪನ್ಯಾಸ ರಂಗಮಂದಿರದಲ್ಲಿ ಸೇರಿದ್ದ 300ಕ್ಕೂ ಹೆಚ್ಚು ಮಹಿಳೆಯರು ಲಿಂಗ ಪ್ರತ್ಯೇಕತೆಯ ತಾಲಿಬಾನ್‌ನ ಕಠಿಣ ನೀತಿಗಳಿಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಿದರು.

ಶಿಕ್ಷಣ ಪಡೆಯುವ ಮಹಿಳೆಯರು ಅನುಸರಿಸಬೇಕಾದ ಕಟ್ಟುನಿಟ್ಟಾದ ಹೊಸ ಉಡುಗೆ ನೀತಿಗಳಿಗೆ ಅನುಗುಣವಾಗಿ, ಮುಖವನ್ನು ಪೂರ್ಣವಾಗಿ ಮುಚ್ಚುವ ಮುಸುಕುಗಳನ್ನು ಧರಿಸಿದ್ದ ಅವರು, ತಾಲಿಬಾನ್ ಧ್ವಜಗಳನ್ನು ಹಿಡಿದಿದ್ದರು. 

ಕಳೆದ ಬಾರಿಯ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಹಕ್ಕುಗಳು ಮೊಟಕುಗೊಂಡಿದ್ದವು. ಈ ಬಾರಿ ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಶಿಕ್ಷಣ ಪ್ರಾಧಿಕಾರ ಹೇಳಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು