ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ರವಿ ಬಂಧನ ಖಂಡಿಸಿದ ಪಾಕ್‌ ಪ್ರಧಾನಿ ಇಮ್ರಾನ್‌ ಪಕ್ಷ

Last Updated 15 ಫೆಬ್ರುವರಿ 2021, 12:03 IST
ಅಕ್ಷರ ಗಾತ್ರ

ನವದೆಹಲಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸುವವರಿಗಾಗಿ ಸಿದ್ಧಪಡಿಸಲಾಗಿದ್ದ ಟೂಲ್‌ಕಿಟ್‌ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿರುವುದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷ 'ಪಾಕಿಸ್ತಾನ್‌ತೆಹ್ರಿಕ್‌ ಇ ಇನ್ಸಾಫ್‌' ಸೋಮವಾರ ಖಂಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ 'ತೆಹ್ರಿಕ್‌ ಇ ಇನ್ಸಾಫ್‌', 'ಮೋದಿ ಮತ್ತು ಆರ್‌ಎಸ್‌ಎಸ್ ಆಡಳಿತಕ್ಕೊಳಪಟ್ಟಿರುವ ಭಾರತವು ಜಮ್ಮು ಕಾಶ್ಮೀರದಲ್ಲಿ ಮಾಡಿದಂತೆಯೇ ತನ್ನ ವಿರೋಧಿಗಳ ದನಿ ಅಡಗಿಸುವ ಕೆಲಸದಲ್ಲಿ ನಂಬಿಕೆ ಇಟ್ಟಿದೆ. ಕ್ರಿಕೆಟರ್‌ಗಳನ್ನು ಮತ್ತು ಬಾಲಿವುಡ್‌ ಸೆಲೆಬ್ರೆಟಿಗಳನ್ನು ತನ್ನ ಪರವಾದ ಅಭಿಪ್ರಾಯ ಸೃಷ್ಟಿಗೆ ಬಳಸಿಕೊಳ್ಳುತ್ತಿದೆ. ಈಗ ಟ್ವಿಟರ್‌ ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ ರವಿ ಅವರನ್ನು ಬಂಧಿಸಿದೆ,' ಎಂದು ಹೇಳಿದೆ.

ಈ ಅಭಿಪ್ರಾಯದ ಜೊತೆಗೆ #IndiaHijackTwitter ಎಂಬ ಹ್ಯಾಷ್‌ ಟ್ಯಾಗ್‌ ಅನ್ನೂ ಪಿಟಿಐ ಬಳಸಿದೆ. ಇನ್ನೊಂದು ಕಡೆ ಜಮ್ಮು ಕಾಶ್ಮೀರವನ್ನು 'ಭಾರತ ಅಕ್ರಮವಾಗಿ ಆಕ್ರಮಿಸಿದ ಜಮ್ಮು ಕಾಶ್ಮೀರ (ಐಐಒಜೆಕೆ)' ಎಂದೂ 'ತೆಹ್ರಿಕ್‌ ಇ ಇನ್ಸಾಫ್‌' ದಾಖಲಿಸಿದೆ.

ಯಾರು ಈ ದಿಶಾ ರವಿ?

ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು 2018ರಲ್ಲಿ ಸ್ಥಾಪಿಸಿದ ‘ಫ್ರೈಡೇ ಫಾರ್‌ ಫ್ಯೂಚರ್‌’ ಹೆಸರಿನ ಸಂಘಟನೆಯ ಸಹ ಸಂಸ್ಥಾಪಕಿ ದಿಶಾ ರವಿ. ರವಿ ಅವರು 2019 ರಲ್ಲಿ 'ಫ್ರೈಡೇ ಫಾರ್ ಫ್ಯೂಚರ್‌'ನ ಭಾರತ ಘಟಕ ಪ್ರಾರಂಭಿಸಿದರು. ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರದಲ್ಲಿ ನೆಲೆಸಿರುವ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಹವಾಮಾನ ಸಂಬಂಧಿತ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಪ್ರತಿ ಶುಕ್ರವಾರವೂ ಹೋರಾಟ ಮಾಡುತ್ತಿದ್ದರು. ಕೆಲವು ಬಾರಿ ಅವರ ಹೋರಾಟಕ್ಕೆ ಯಾರೂ ಬರುತ್ತಿರಲಿಲ್ಲ. ಹೀಗಾಗಿ, ಅವರೊಬ್ಬರೇ ರಸ್ತೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗಳ ಪ್ರಚಾರಕ್ಕೆ ಹಾಗೂ ಪ್ರತಿಭಟನೆಗೆ ಜನರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು. ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಗಳಲ್ಲೂ ಇವರು ಪಾಲ್ಗೊಳ್ಳುತ್ತಿದ್ದರು. ದಿಶಾ ಅವರ ತಂದೆ ಕ್ರೀಡಾ ಕೋಚ್‌ ಆಗಿದ್ದು, ತಾಯಿ ಗೃಹಿಣಿ.

ದಿಶಾ ರವಿ ಬಂಧನ ಏಕೆ?

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿದ ಆರೋಪವನ್ನು ದಿಶಾ ರವಿ ಅವರ ಮೇಲೆ ಹೊರಿಸಲಾಗಿದೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಲು ತಾನು ಬಯಸಿದ್ದೆ. ಅದಕ್ಕಾಗಿ ಟೂಲ್‌ಕಿಟ್‌ನ ಎರಡು ಸಾಲನ್ನು ತಿದ್ದಿ ಕೊಟ್ಟಿದ್ದೆ ಎಂದು ದಿಶಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.

ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿ ಫೆ. 4ರಂದು ದೆಹಲಿಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದರ ಆಧಾರದಲ್ಲಿ ದಿಶಾ ಅವರನ್ನು ಬಂಧಿಸಲಾಗಿದೆ.

ಏನಿದು ಟೂಲ್‌ ಕಿಟ್‌?

ಟೂಲ್‌ಕಿಟ್‌ ಎನ್ನುವುದು ಸಾಮಾಜಿಕ ಮಾಧ್ಯಮ ದಾಖಲೆ. ಸಮಸ್ಯೆ ಮತ್ತು ಅದರ ವಿರುದ್ಧದ ಹೋರಾಟದ ಯೋಜನೆ, ರೂಪುರೇಷೆಗಳನ್ನು ವಿವರಿಸುತ್ತದೆ. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸ್ವೀಡನ್‌ನ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗ್‌ ಬೆಂಬಲ ನೀಡಿದಾಗ ಇಂಥದ್ದೊಂದು ಟೂಲ್‌ ಕಿಟ್‌ ಅನ್ನು ಅವರು ಟ್ವಿಟರ್‌ನಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದರು. 'ಭಾರತದ ವಿರುದ್ಧ ಬಲವಾದ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ರೂಪಿಸಲಾಗುತ್ತಿದೆ ಎಂಬುದಕ್ಕೆ ಟೂಲ್‌ಕಿಟ್ ಸಾಕ್ಷಿಯಾಗಿದೆ,' ಎಂದು ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಆರೋಪಿಸಿತ್ತು.

ಈ ಟೂಲ್‌ಕಿಟ್‌ನ ಹಿಂದೆ ಖಲಿಸ್ತಾನ ಪ್ರತ್ಯೇಕತಾವಾದಿಗಳು ಇದ್ದಾರೆ ಎಂದು ದೆಹಲಿ ಪೊಲೀಸರು ಆರಂಭದಲ್ಲಿ ಹೇಳಿದ್ದರು. ನಂತರ ಖಲಿಸ್ತಾನಿಗಳ ಪರ ಇರುವ "ಪೊಯೆಟಿಕ್ ಜಸ್ಟೀಸ್ ಫೌಂಡೇಶನ್" ಇದೆ ಎಂಬ ಮಾಹಿತಿ ಹೊರಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT