ಶುಕ್ರವಾರ, ಮೇ 27, 2022
23 °C
ಇಮ್ರಾನ್‌ ಖಾನ್‌ ನಾಗರಿಕ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ: ಪಾಕ್‌ ಪ್ರಧಾನಿ ಶಹಬಾಝ್‌

ಸೇನೆ ವಿರುದ್ಧ ಹೇಳಿಕೆ: ಇಮ್ರಾನ್ ಖಾನ್‌ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದೇಶದಲ್ಲಿ ನಾಗರಿಕ ಯುದ್ಧಕ್ಕೆ ಕುಮ್ಮಕ್ಕು ನೀಡಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಪ್ರಧಾನಿ ಶಹಬಾಝ್‌ ಷರೀಫ್‌ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಸೇನೆ, ನ್ಯಾಯಾಂಗದಂತಹ ಪ್ರಧಾನ ರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸುಳ್ಳು ಕತೆ ಕಟ್ಟಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ದೇಶದ ಪ್ರಮುಖ ಸಂಸ್ಥೆಯನ್ನು ರಾಜಕೀಯಕ್ಕೆ ಎಳೆತರುವ’ ತೀವ್ರವಾದ ಮತ್ತು ಉದ್ದೇಶಪೂರ್ವಕ‘ ಪ್ರಯತ್ನಗಳು ನಡೆಯುತ್ತಿವೆ ಎಂದು ಪಾಕಿಸ್ತಾನ ಸೇನೆಯು ತನ್ನ ಟೀಕಾಕಾರರಿಗೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಷರೀಫ್‌ ಈ ಹೇಳಿಕೆ ನೀಡಿದ್ದಾರೆ.

ಕಳೆದ ತಿಂಗಳು ಅವಿಶ್ವಾಸ ನಿರ್ಣಯದ ಮೂಲಕ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲಾಗಿದೆ. ಆದರೆ ಸರ್ಕಾರ ಉರುಳಿಸುವ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಖಾನ್‌ ಆರೋಪಿಸಿದ್ದಾರೆ. ಈ ಮಧ್ಯೆ, ಸರ್ಕಾರ ಉಳಿಸಲು ಸೇನೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಖಾನ್‌ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ. ಅಲ್ಲದೆ ದೇಶದ ವಿವಿಧ ಕಡೆಗಳಲ್ಲಿ ರ್ಯಾಲಿ ನಡೆಸುತ್ತಿರುವ ಇಮ್ರಾನ್‌ ಖಾನ್‌, ’ನೂತನ ಸರ್ಕಾರ ವಿಶ್ವಾಸಘಾತುಕ ಮತ್ತು ಭ್ರಷ್ಟ ಸರ್ಕಾರ‘ ಎಂದು ಆರೋಪಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, ’ಇಮ್ರಾನ್‌ ಖಾನ್‌ ಅವರು ಇತ್ತೀಚೆಗೆ ನಡೆಸಿದ ರ‍್ಯಾಲಿಯನ್ನು ದೇಶದ ಸೇನೆ ’ಪಾಕಿಸ್ತಾನದ ವಿರುದ್ಧದ ಪಿತೂರಿ‘ ಎಂದು ಬಣ್ಣಿಸಿದೆ. ರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸುಳ್ಳುಕತೆ ಕಟ್ಟುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗಳ್ಳಲಾಗುತ್ತದೆ‘ ಎಂದು ಎಚ್ಚರಿಸಿದ್ದಾರೆ.

ಇಮ್ರಾನ್‌ ಖಾನ್ ಅವರ ಕೆಲಸವನ್ನು ಪಿತೂರಿ ಎಂದೇ ಪರಿಗಣಿಸಲಾಗುತ್ತದೆ. ಇದು ರಾಜಕೀಯ ಎದುರಾಳಿ ವಿರುದ್ಧ ಅಲ್ಲ, ದೇಶದ ವಿರುದ್ಧವಾಗಿದೆ. ಒಬ್ಬ ವ್ಯಕ್ತಿಯ ಅಹಂ, ದಾರ್ಷ್ಟ್ಯ ಮತ್ತು ನಿರ್ಲಜ್ಜ ಸುಳ್ಳುಗಳಿಗೆ ಪಾಕಿಸ್ತಾನ ಶರಣಾಗುವುದೂ ಇಲ್ಲ, ರಾಜಿಯಾಗುವುದೂ ಇಲ್ಲ. ಪಾಕಿಸ್ತಾನದ ಪ್ರಜೆಗಳು, ಸಂವಿಧಾನ ಮತ್ತು ಇಲ್ಲಿನ ಪ್ರಧಾನ ಸಂಸ್ಥೆಗಳು ’ಇಮ್ರಾನ್‌ ನಾಝಿಯ‘ ಗುಲಾಮರಲ್ಲ ಅಥವಾ ಇವುಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲೂ ಸಾಧ್ಯವಿಲ್ಲ. ಇಮ್ರಾನ್‌ ಖಾನ್‌ ಪಾಕಿಸ್ತಾನದ ಹಿಟ್ಲರ್ ಆಗಲು ಅವಕಾಶ ನೀಡುವುದಿಲ್ಲ ಎಂದು ಕಟುವಾಗಿ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು