ಶನಿವಾರ, ಜುಲೈ 2, 2022
25 °C

ಇಮ್ರಾನ್ ಖಾನ್ ಬಂಧಿಸಿದರೆ ಮತ್ತೊಂದು ಶ್ರೀಲಂಕಾ ಆಗಲಿದೆ ಪಾಕಿಸ್ತಾನ: ಮಾಜಿ ಸಚಿವ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಿದರೆ ದೇಶವು, ಮತ್ತೊಂದು ಶ್ರೀಲಂಕಾವಾಗಿ ಬದಲಾಗಲಿದೆ ಎಂದು ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಖ್‌ ರಶೀದ್ ಅಹ್ಮದ್‌ ಎಚ್ಚರಿಸಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ದಿಕ್ಕು ತೋಚದಂತಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ರಶೀದ್ ಹೇಳಿರುವುದಾಗಿ ಅಲ್ಲಿನ 'ಜಿಯೋ ನ್ಯೂಸ್‌' ಸುದ್ದಿ ವಾಹಿನಿ ವರದಿಮಾಡಿದೆ.

ಸರ್ಕಾರವು ಖಾನ್‌ ಅವರನ್ನು ಬಂಧಿಸಿದರೆ ಪರಿಸ್ಥಿತಿಯನ್ನು ಎದುರಿಸಲು ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷವು ಈಗಾಗಲೇ ಕಾರ್ಯತಂತ್ರ ರೂಪಿಸಿದೆ. ಆದರೆ, ದೇಶವು ರಾಜಕೀಯ ಬಿಕ್ಕಟ್ಟಿಗೆ ಸಿಲುಕುತ್ತದೆ. ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಇರುವಂತಹ ಕೆಟ್ಟ ಸ್ಥಿತಿಗೆ ಪಾಕಿಸ್ತಾನವೂ ಸಾಕ್ಷಿಯಾಗಲಿದೆ ಎಂದು ರಶೀದ್‌ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 

ಅವಿಶ್ವಾಸ ನಿರ್ಣಯದ ಮೂಲಕ ಪಿಟಿಐ ನೇತೃತ್ವದ ಸರ್ಕಾರವನ್ನು ಉರುಳಿಸಿದ ರಾಜಕೀಯ ಪಕ್ಷಗಳ ಒಕ್ಕೂಟ 'ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್‌' (ಪಿಡಿಎಂ) ವಿರುದ್ಧವೂ ರಶೀದ್‌ ಕಿಡಿಕಾರಿದ್ದಾರೆ. ಖಾನ್ ಅವರು ಸದ್ಯ ಪದಚ್ಯುತಗೊಂಡಿದ್ದರೂ, ದೇಶದ ಹೀರೋ ಆಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರು ಪಂಜಾಬ್‌ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ಇತ್ತೀಚೆಗೆ ನಡೆದ ರ‍್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ್ದರು. ತಮ್ಮ ಹತ್ಯೆಗೆ ಸಂಚು ನಡೆದಿದೆ. ತಾವೇನಾದರೂ ಕೊಲೆಯಾದರೆ ಅದಕ್ಕೆ ಕಾರಣ ಯಾರು ಎಂಬುದನ್ನು ವಿಡಿಯೊದಲ್ಲಿ ದಾಖಲಿಸಿದ್ದೇನೆ. ಜನರಿಗೆ ಸತ್ಯ ಗೊತ್ತಾಗಲಿದೆ ಎಂದು ಹೇಳಿದ್ದರು.

ಮೂರೂವರೆ ವರ್ಷ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ಏಪ್ರಿಲ್‌ನಲ್ಲಿ ಪದಚ್ಯುತಗೊಂಡಿದ್ದರು. ಅದಾದ ಬಳಿಕ, ಶೆಹಬಾಜ್ ಷರೀಫ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇವನ್ನೂ ಓದಿತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು