ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌, ಚೀನಾ ಎದುರಿಸಲು ಭಾರತ ರಷ್ಯನ್‌ ಎಸ್‌-400 ಕ್ಷಿಪಣಿ ನಿಯೋಜನೆ: ಪೆಂಟಗನ್‌‌

Last Updated 18 ಮೇ 2022, 6:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಭಾರತವು ರಷ್ಯಾದ ಎಸ್‌-400 ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆಯನ್ನು ಮುಂದಿನ ತಿಂಗಳಲ್ಲಿ ನಿಯೋಜಿಸಲು ಉದ್ದೇಶಿಸಿದೆ ಎಂದು ಪೆಂಟಗನ್‌ ವರದಿ ಮಾಡಿದೆ.

ಭಾರತೀಯ ಸೇನಾ ವ್ಯವಸ್ಥೆಯ ಆಧುನೀಕರಣವನ್ನು ವಿಸ್ತರಿಸುವ ಭಾಗವಾಗಿ ವಾಯು, ನೆಲ, ಜಲ ಹಾಗೂ ಪರಮಾಣು ಶಕ್ತಿಗಳ ಕಾರ್ಯತಂತ್ರಗಳಿಗೆ ಭಾರತ ಒತ್ತು ನೀಡಿದೆ ಎಂದು ಪೆಂಟಗನ್‌ನ ಉನ್ನತ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾದಿಂದ ಎಸ್‌-400 ಕ್ಷಿಪಣಿಗಳ ಖರೀದಿ ಪ್ರಕ್ರಿಯೆಯು ಕಳೆದ ವರ್ಷ ಡಿಸೆಂಬರ್‌ನಿಂದ ಆರಂಭಗೊಂಡಿದೆ. ಪಾಕಿಸ್ತಾನ ಮತ್ತು ಚೀನಾ ವಿರುದ್ಧದ ಕಾರ್ಯಾಚರಣೆಗೆ ನೂತನ ವ್ಯವಸ್ಥೆಯನ್ನು ಜೂನ್‌ ತಿಂಗಳಲ್ಲಿ ನಿಯೋಜಿಸಲು ಭಾರತ ಮುಂದಾಗಿದೆ ಎಂದು ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿಯ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ಸ್ಕಾಟ್‌ ಬೆರಿಯರ್‌ ತಿಳಿಸಿದ್ದಾರೆ.

ಉಕ್ರೇನ್‌ ಮೇಲಿನ ರಷ್ಯಾ ಅತಿಕ್ರಮಣ ವಿಚಾರವಾಗಿ ಭಾರತ ತಟಸ್ಥ ನೀತಿಯನ್ನು ಕಾಪಾಡಿಕೊಂಡಿದ್ದು, ಶಾಂತಿಗೆ ಕರೆ ನೀಡುವುದನ್ನು ಮುಂದುವರಿಸಿದೆ ಎಂದು ಇದೇ ವೇಳೆ ಸ್ಕಾಟ್‌ ಬೆರಿಯರ್‌ ಹೇಳಿದ್ದಾರೆ.

ಅಫ್ಘಾನಿಸ್ತಾನ ಸರ್ಕಾರ ಪತನಗೊಂಡ ಬಳಿಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ, ಪ್ರಮುಖವಾಗಿ ಲಷ್ಕರ್‌-ಎ-ತೈಬಾ ಮತ್ತು ಜೈಶ್‌-ಎ-ಮೊಹಮ್ಮದ್‌ ಸಂಘಟನೆಗಳಿಂದ ಎದುರಾಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತ ತನ್ನ ಸೇನಾ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದೆ ಎಂದೂ ಸ್ಕಾಟ್‌ ಬೆರಿಯರ್‌ ವಿವರಿಸಿದ್ದಾರೆ.

ಭಾರತವು ರಷ್ಯಾದಿಂದ ಎಸ್–400ಕ್ಷಿಪಣಿ ತಂತ್ರಜ್ಞಾನ ಪಡೆಯುವ ತೀರ್ಮಾನವನ್ನು ತಾನು ಬೆಂಬಲಿಸುವುದಿಲ್ಲ. ಭಾರತದ ಮೇಲೆ ನಿರ್ಬಂಧ ಕ್ರಮಗಳನ್ನು ಹೇರುವ ಮೊದಲು ತಾನು ‘ಪ್ರಮುಖ ಭೌಗೋಳಿಕ ಕಾರ್ಯತಂತ್ರಗಳನ್ನು ಪರಿಗಣಿಸಲಾಗುವುದು’ ಎಂದು ಅಮೆರಿಕ ಈ ಹಿಂದೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT