ಫೈಜರ್–ಬಯೋಎನ್ಟೆಕ್ ಲಸಿಕೆ ರೂಪಾಂತರ ಕೊರೊನಾವೈರಸ್ಗೂ ಪರಿಣಾಮಕಾರಿ: ಅಧ್ಯಯನ

ನ್ಯೂಯಾರ್ಕ್: ಫೈಜರ್ ಇಂಕ್–ಬಯೋಎನ್ಟೆಕ್ನ ಕೋವಿಡ್–19 ಲಸಿಕೆಯು ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ (ರೂಪಾಂತರಗೊಂಡ) ಕೊರೊನಾವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಔಷಧ ತಯಾರಿಕಾ ಕಂಪನಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಲಸಿಕೆಯು ರೂಪಾಂತರದ ವೈರಸ್ (N501Y) ಅನ್ನು ತಟಸ್ಥಗೊಳಿಸಲಿದೆ ಎಂಬ ಫೈಜರ್ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಧ್ಯಯನದ ಬಗ್ಗೆ ಇನ್ನಷ್ಟೇ ವಿಸ್ತೃತ ಪರಿಶೀಲನೆಯಾಗಬೇಕಿದೆ.
ವೈರಸ್ನ ರೂಪಾಂತರವು ಸೋಂಕು ಹರಡುವಿಕೆಯನ್ನು ಹೆಚ್ಚಿಸಬಹುದು ಮತ್ತು ಲಸಿಕೆಯ ಪ್ರತಿರೋಧ ಸಾಮರ್ಥ್ಯವನ್ನು ತಟಸ್ಥಗೊಳಿಸಬಹುದು ಎಂಬ ಕಳವಳವಿತ್ತು ಎಂದು ಫೈಜರ್ನ ಲಸಿಕೆ ಸಂಶೋದಕ ವಿಜ್ಞಾನಿ ಫಿಲ್ ಡಾರ್ಮಿಟ್ಜರ್ ಹೇಳಿದ್ದಾರೆ.
ಲಸಿಕೆ ಪಡೆದುಕೊಂಡವರ ರಕ್ತ ಪರೀಕ್ಷೆ ಮಾಡುವ ಮೂಲಕ ಈ ಅಧ್ಯಯನ ನಡೆಸಲಾಗಿದೆ. ಹೊಸ ಸ್ವರೂಪದ ವೈರಸ್ನ ಪೂರ್ಣಪ್ರಮಾಣದ ರೂಪಾಂತರವನ್ನು ಕಂಡುಕೊಳ್ಳಲು ಸಾಧ್ಯವಾಗದಿರುವುದು ಈ ಅಧ್ಯಯನದ ಮಿತಿಯಾಗಿದೆ.
ರೂಪಾಂತರ ವೈರಸ್ ವಿರುದ್ಧ ಲಸಿಕೆಯು ಪರಿಣಾಮಕಾರಿ ಎಂಬುದು ಸಾಕಷ್ಟು ಸ್ಫೂರ್ತಿ ನೀಡಿದೆ. ಈ ಹಿಂದೆ ವೈರಸ್ನ 15 ರೂಪಾಂತರಗಳ ವಿರುದ್ಧ ಪರೀಕ್ಷೆ ನಡೆಸಲಾಗಿದೆ ಎಂದೂ ಡಾರ್ಮಿಟ್ಜರ್ ಹೇಳಿದ್ದಾರೆ.
‘ಇದೀಗ ನಾವು 16ನೇ ರೂಪಾಂತರದ ವಿರುದ್ಧ ಪರೀಕ್ಷೆ ನಡೆಸಿದ್ದೇವೆ ಮತ್ತು ಅವುಗಳಲ್ಲಿ ಯಾವುದೂ ಮಹತ್ವದ ಪ್ರಭಾವ ಉಂಟು ಮಾಡಿಲ್ಲ. ಇದು ಒಳ್ಳೆಯ ವಿಚಾರ. ಆದರೆ, 17ನೇ ರೂಪಾಂತರ ಹಾಗೆ ಮಾಡುವುದಿಲ್ಲ ಎಂಬುದು ಇದರರ್ಥವಲ್ಲ’ ಎಂದು ತಿಳಿಸಿದ್ದಾರೆ.
ಲಸಿಕೆಯು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಇತರ ರೂಪಾಂತರಗಳ ವಿರುದ್ಧವೂ ಪರಿಣಾಮಕಾರಿಯೇ ಎಂಬುದನ್ನು ತಿಳಿಯಲು ಇದೇ ಮಾದರಿಯ ಪರೀಕ್ಷೆಗಳನ್ನು ನಡೆಸಲು ಅಧ್ಯಯನಕಾರರು ಯೋಜಿಸಿದ್ದಾರೆ. ಒಂದು ವಾರದಲ್ಲಿ ಅವುಗಳ ವರದಿಯೂ ಲಭ್ಯವಾಗಲಿದೆ ಎಂದು ಮಾಹಿತಿದ್ದಾರೆ.
ಹೊಸ ಸ್ವರೂಪದ ವೈರಸ್ ವಿರುದ್ಧ ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗುತ್ತಿರುವ ರೂಪಾಂತರಗೊಂಡ ವೈರಸ್ನಿಂದ ರಕ್ಷಣೆ ನೀಡಲು ಸದ್ಯದ ಲಸಿಕೆಗಳಿಗೆ ಸಾಧ್ಯವಾಗದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.