ಮಂಗಳವಾರ, ಅಕ್ಟೋಬರ್ 20, 2020
23 °C
ಇಂಗ್ಲೆಂಡ್‌

ಹೊರಗೆ ತಿನ್ನಲು ಉತ್ತೇಜನ, ಅದರಿಂದಲೇ ಹೆಚ್ಚಿರಬಹುದು ಸೋಂಕು: ಬೋರಿಸ್ ಜಾನ್ಸನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌

ಲಂಡನ್‌: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್‌ ಸರ್ಕಾರ ಘೋಷಿಸಿದ ಕೊಡುಗೆಗಳಿಂದ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಮತ್ತಷ್ಟು ವ್ಯಾಪಿಸಿದೆ!

ಜನರು ಮನೆಯಿಂದ ಹೊರಬಂದು ಖರೀದಿಯಲ್ಲಿ ತೊಡಗುವುದು ಹಾಗೂ ಖರ್ಚು ಮಾಡಲು ಪ್ರೇರೇಪಿಸಲು ಸರ್ಕಾರ 'ಈಟ್‌ ಔಟ್‌ ಟು ಹೆಲ್ಪ್ ಔಟ್' ಕಾರ್ಯಕ್ರಮ ಆರಂಭಿಸಿತು. ರೆಸ್ಟೊರೆಂಟ್‌ಗಳು ಹಾಗೂ ಕೆಫೆಗಳಿಗೆ ಜನರು ಬಂದು ಊಟ, ತಿಂಡಿ ತಿನ್ನಲು ಉತ್ತೇಜಿಸಲು ಪ್ರತಿ ವ್ಯಕ್ತಿ ಖರೀದಿಸುವ ಒಂದು ಊಟಕ್ಕೆ ಸರ್ಕಾರ ಬಿಲ್‌ ಮೊತ್ತದಲ್ಲಿ 10 ಪೌಂಡ್‌ವರೆಗೂ (ಅಂದಾಜು ₹950) ಪಾವತಿ ಮಾಡಿದೆ.

ಊಟದ ಮೇಲೆ ಸಬ್ಸಿಡಿ ನೀಡುವ ಸರ್ಕಾರದ ಕ್ರಮದಿಂದಾಗಿ ಹೆಚ್ಚು ಜನರು ಹೊರಗೆ ಓಡಾಡಲು, ತಿನ್ನಲು ಶುರು ಮಾಡಿದ್ದಾರೆ. ಅದರಿಂದಾಗಿಯೂ ಇಂಗ್ಲೆಂಡ್‌ನಲ್ಲಿ ಕೋವಿಡ್‌ ವ್ಯಾಪಿಸಿರಬಹುದು ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಅಭಿಪ್ರಾಯ ಪಟ್ಟಿದ್ದಾರೆ.

ಸೆಪ್ಟೆಂಬರ್‌ನಿಂದ ದೇಶದಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ರಾತ್ರಿ 10ರಿಂದ ಕರ್ಫ್ಯೂ ವಿಧಿಸಲಾಗಿದೆ. ಪಬ್‌ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಮಾಸ್ಕ್‌ ಧರಿಸುವುದಕ್ಕೆ ಸಂಬಂಧಿಸದಂತೆ ನಿಯಮಗಳನ್ನು ಕಠಿಣಗೊಳಿಸಲಾಗಿದೆ.

ಆತಿಥ್ಯ ಸೇವೆಗಳನ್ನು ನೆಚ್ಚಿಕೊಂಡಿರುವ ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸಲು 'ಹೊರಗೆ ತಿಂದು ಸಹಾಯ ಮಾಡಿ' ಕಾರ್ಯಕ್ರಮ ನಡೆಸಲಾಯಿತು, ಆದರೆ ಅದರಿಂದ ಸೋಂಕಿನ ಮೇಲೆ ಪರಿಣಾಮ ಬೀರಿರಬಹುದು ಎಂದು ಪ್ರಧಾನಿ ಜಾನ್ಸನ್‌ ಬಿಬಿಸಿ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ಕೋವಿಡ್‌–19 ದೃಢಪಟ್ಟ 12,872 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ ಸೋಂಕಿನಿಂದ 49 ಮಂದಿ ಮೃತಪಟ್ಟಿದ್ದಾರೆ. ವರ್ಡೊಮೀಟರ್‌ ವೆಬ್‌ಸೈಟ್‌ ಪ್ರಕಾರ, ಇಂಗ್ಲೆಂಡ್‌ನಲ್ಲಿ ಒಟ್ಟು 4,80,017 ಪ್ರಕರಣಗಳಿದ್ದು, ಈವರೆಗೂ 42,317 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು