ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ್–26 ಶೃಂಗಸಭೆ: ಮೋದಿಗೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಮೂಲಕ ಭಾರತೀಯರ ಸ್ವಾಗತ

Last Updated 1 ನವೆಂಬರ್ 2021, 3:31 IST
ಅಕ್ಷರ ಗಾತ್ರ

ಗ್ಲಾಸ್ಗೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋಪ್–26 ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಲು ಗ್ಲಾಸ್ಟೋಗೆ ಬಂದಿಳಿದಿದ್ದಾರೆ. ಇದೇವೇಳೆ, ಅವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

‘ಗ್ಲಾಸ್ಗೋದಲ್ಲಿ ಬಂದಿಳಿದೆ. ಕೋಪ್26 ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ, ಅಲ್ಲಿ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ವ್ಯಕ್ತಪಡಿಸಲು ಇತರ ವಿಶ್ವ ನಾಯಕರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಗ್ಲಾಸ್ಗೋದಲ್ಲಿನ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಅವರನ್ನು ಅಲ್ಲಿನ ಭಾರತೀಯ ವಲಸೆ ಪ್ರತಿನಿಧಿಗಳ ದೊಡ್ಡ ಗುಂಪು ‘ಭಾರತ್ ಮಾತಾ ಕಿ ಜೈ’ಘೋಷಣೆಗಳೊಂದಿಗೆ ಸ್ವಾಗತಿಸಿತು.

‘ರೋಮ್‌ನಲ್ಲಿ ಫಲಪ್ರದ ಜಿ20 ಶೃಂಗಸಭೆಯ ನಂತರ ಗ್ಲಾಸ್ಗೋಗೆ ಹೊರಟೆ. ಶೃಂಗಸಭೆಯ ಸಮಯದಲ್ಲಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು, ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದು, ಆರ್ಥಿಕ ಸಹಕಾರವನ್ನು ಹೆಚ್ಚಿಸುವುದು ಮತ್ತು ಆವಿಷ್ಕಾರಕ್ಕೆ ಉತ್ತೇಜನದಂತಹ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ನಾವು ವಿಸ್ತೃತವಾದ ಚರ್ಚೆಗಳನ್ನು ನಡೆಸಲು ಸಾಧ್ಯವಾಯಿತು’ ಎಂದು ಮೋದಿ ಹಿಂದಿನ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇಟಲಿಯಲ್ಲಿ ಜಿ 20 ಶೃಂಗಸಭೆ ಬಳಿಕ ಗ್ಲಾಸ್ಗೋಗೆ ತೆರಳಿರುವ ಪ್ರಧಾನಿ, ಸೋಮವಾರ ಬೆಳಿಗ್ಗೆ ಸ್ಕಾಟ್‌ಲ್ಯಾಂಡ್ ಮೂಲದ ಸಮುದಾಯದ ಮುಖಂಡರು ಮತ್ತು ಭಾರತೀಯರೊಂದಿಗಿನ ಸಭೆಯೊಂದಿಗೆ ತಮ್ಮ ಯುರೋಪಿಯನ್ ಪ್ರವಾಸದ ಬ್ರಿಟನ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲಿದ್ದಾರೆ.

ನಂತರ ಅವರು ಗ್ಲಾಸ್ಗೋದಲ್ಲಿನ ಸ್ಕಾಟಿಷ್ ಈವೆಂಟ್ ಕ್ಯಾಂಪಸ್‌ನಲ್ಲಿ ಹವಾಮಾನ ಬದಲಾವಣೆಯ ವಿಶ್ವಸಂಸ್ಥೆಯ ಚೌಕಟ್ಟಿನ (ಯುಎನ್‌ಎಫ್‌ಸಿಸಿಸಿ) 26 ನೇ ಕೋಪ್ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಶೃಂಗಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಶೃಂಗಸಭೆಯ ಉದ್ಘಾಟನಾ ಸಮಾರಂಭದ ನಂತರ ಬೋರಿಸ್ ಜಾನ್ಸನ್ ಅವರೊಂದಿಗಿನ ಮೋದಿಯವರ ದ್ವಿಪಕ್ಷೀಯ ಸಭೆಯು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಸಾಂಸ್ಕೃತಿಕ ಕರ್ಯಕ್ರಮಗಳು ಮತ್ತು ಬ್ರಿಟನ್ ಪ್ರಧಾನ ಮಂತ್ರಿಯ ಭಾಷಣವೂ ಸೇರಿದೆ. ಶೃಂಗಸಭೆಯು ‘ಜಗತ್ತಿನ ಸತ್ಯದ ಕ್ಷಣ’ ಎಂದು ಜಾನ್ಸನ್ ಹೇಳಿದ್ದಾರೆ.

ಮೋದಿ ಮತ್ತು ಬೋರಿಸ್ ಮಾತುಕತೆ ವೇಳೆ ಹವಾಮಾನ ಪಾಲುದಾರಿಕೆ ಮತ್ತು ಈ ವರ್ಷದ ಮೇನಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಉಭಯ ನಾಯಕರು ಸಹಿ ಮಾಡಿದ ಬಲವಾದ ಬ್ರಿಟನ್-ಭಾರತ ಕಾರ್ಯತಂತ್ರದ ಪಾಲುದಾರಿಕೆಗಾಗಿ 2030 ರ ಮಾರ್ಗಸೂಚಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

‘ಎರಡೂ ಸರ್ಕಾರಗಳು ನಿಗದಿತ ಸಮಯದೊಳಗೆ ಮಾರ್ಗಸೂಚಿಯ ಅನುಷ್ಠಾನಕ್ಕೆ ಬದ್ಧವಾಗಿರುತ್ತವೆ. ಅದರಂತೆ, ನಾವು 2022 ರ ಮಾರ್ಚ್‌ನಲ್ಲಿ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಲು ನವೆಂಬರ್‌ನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಲು ನೋಡುತ್ತಿದ್ದೇವೆ. ಅಂತಿಮವಾಗಿ, ಎಲ್ಲಾ ವೇಳಾಪಟ್ಟಿಯ ಪ್ರಕಾರ ನವೆಂಬರ್ 2022ರ ವೇಳೆಗೆ ಸಮಗ್ರ ಒಪ್ಪಂದಕ್ಕೆ ಸಹಿ ಹಾಕುತ್ತೇವೆ’ಎಂದು ಬ್ರಿಟನ್‌ನಲ್ಲಿರುವ ಭಾರತದ ಹೈ ಕಮಿಷನರ್ ಗಾಯಿತ್ರಿ ಇಸ್ಸಾರ್ ಕುಮಾರ್ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಆರಂಭದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಎರಡು ಬಾರಿ ತಮ್ಮ ಭಾರತದ ಭೇಟಿಯನ್ನು ರದ್ದುಗೊಳಿಸಿದ ನಂತರ ಮೋದಿ ಮತ್ತು ಜಾನ್ಸನ್ ನಡುವಿನ ಮೊದಲ ಸಭೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT