ಶನಿವಾರ, ಮೇ 21, 2022
23 °C

ಭಾರತವನ್ನು ಬೆಂಬಲಿಸುವ ಶಕ್ತಿಶಾಲಿ ದೇಶವು ಪಾಕ್ ಬಗ್ಗೆ ಕೋಪಗೊಂಡಿದೆ: ಇಮ್ರಾನ್

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ರಷ್ಯಾಕ್ಕೆ ಭೇಟಿ ನೀಡಿದ್ದರಿಂದ ಭಾರತವನ್ನು ಬೆಂಬಲಿಸುವ 'ಶಕ್ತಿಶಾಲಿ ರಾಷ್ಟ್ರ'ವು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಖಾನ್, ಸ್ವತಂತ್ರ ವಿದೇಶಾಂಗ ನೀತಿಯು ದೇಶಕ್ಕೆ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದರು. ಪಾಕಿಸ್ತಾನವು ತನ್ನ ಗರಿಷ್ಠ ಸಾಮರ್ಥ್ಯವನ್ನು ಮುಟ್ಟಲು ಸಾಧ್ಯವಾಗದಿರುವುದು ಇತರ ಶಕ್ತಿಶಾಲಿ ರಾಷ್ಟ್ರಗಳ ಮೇಲಿನ ಅವಲಂಬನೆ ಸಿಂಡ್ರೋಮ್ ಎಂದರು.

‘ಸ್ವತಂತ್ರ ವಿದೇಶಾಂಗ ನೀತಿ ಇಲ್ಲದ ದೇಶವು ತನ್ನ ಜನರ ಹಿತಾಸಕ್ತಿಗಳನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುವುದಿಲ್ಲ’ಎಂದು ಹೇಳಿದ ಅವರು, ‘ವಿದೇಶಿ ನೆರವಿಗಾಗಿ ಇತರ ದೇಶಗಳ ಇಚ್ಛೆಗೆ ಮಣಿಯುವ ಬದಲು ರಾಷ್ಟ್ರದ ಹಿತಾಸಕ್ತಿಗಳನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಂಡು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ’ಎಂದು ಹೇಳಿದರು.

ತಮ್ಮ ಇತ್ತೀಚಿನ ರಷ್ಯಾ ಭೇಟಿಯ ಬಗ್ಗೆ ‘ಪ್ರಬಲ ದೇಶ’ಅಸಮಾಧಾನ ವ್ಯಕ್ತಪಡಿಸಿದೆ ಎಂದು ಪರೋಕ್ಷವಾಗಿ ಅಮೆರಿಕವನ್ನು ಉದ್ದೇಶಿಸಿ ಖಾನ್ ವಾಗ್ದಾಳಿ ನಡೆಸಿದ್ದಾರೆ ಎಂದು ಎಪಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಮತ್ತೊಂದೆಡೆ, ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ತನ್ನ ಮಿತ್ರರಾಷ್ಟ್ರವಾದ ಭಾರತವನ್ನು ಅದು(ಅಮೆರಿಕ) ಬೆಂಬಲಿಸುತ್ತಿದೆ’ಎಂದು ಅವರು ಹೇಳಿದರು.

ಇದನ್ನೂ ಓದಿ.. ರಾಜೀನಾಮೆ ಕೊಡಲ್ಲ: ಪಾಕ್‌ ಪ್ರಧಾನಿ

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ವಿರುದ್ಧ ‘ಬೆದರಿಕೆ’ಪತ್ರ ಮತ್ತು ‘ವಿದೇಶಿ-ಧನಸಹಾಯದ ಸಂಚು’ಕುರಿತು ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ಹಂಗಾಮಿ ರಾಯಭಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿದ ಒಂದು ದಿನದ ನಂತರ ಖಾನ್ ಈ ಹೇಳಿಕೆ ನೀಡಿದ್ದಾರೆ.

ಗುರುವಾರ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ ಅಮೆರಿಕದ ರಾಜತಾಂತ್ರಿಕರನ್ನು ಕರೆಸಲಾಯಿತು.

ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಾಕಿಸ್ತಾನದ ಕೆಲ ಗಣ್ಯರು ರಾಷ್ಟ್ರವನ್ನು ಬಲಿಪೀಠಕ್ಕೆ ಎಸೆದಿದ್ದಾರೆ ಮತ್ತು ಅದರ ಸ್ವಾಭಿಮಾನವನ್ನು ಪಣಕ್ಕಿಟ್ಟಿದ್ದಾರೆ ಎಂದು ಖಾನ್ ಹೇಳಿದರು.

ಕಳೆದ ತಿಂಗಳು, ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸಲು ರಷ್ಯಾಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) ನಿರ್ಣಯದಲ್ಲಿ ಪಾಕಿಸ್ತಾನ ಮತದಾನದಿಂದ ದೂರವಿತ್ತು. ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳಬೇಕೆಂದು ಒತ್ತಾಯಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು