ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟಿಯಲ್ಲಿ ಭೂಕಂಪ: ಮೃತರ ಸಂಖ್ಯೆ 304ಕ್ಕೆ ಏರಿಕೆ

ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ: 1800ಕ್ಕೂ ಹೆಚ್ಚು ಮಂದಿಗೆ ಗಾಯ
Last Updated 15 ಆಗಸ್ಟ್ 2021, 6:17 IST
ಅಕ್ಷರ ಗಾತ್ರ

ಲೆಸ್ ಕೇಯ್ಸ್: ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 304ಕ್ಕೆ ಏರಿಕೆಯಾಗಿದ್ದು, ಕನಿಷ್ಠ 1,800 ಮಂದಿಗೆ ಗಾಯಗಳಾಗಿವೆ.

‘ಇಲ್ಲಿನ ನೈರುತ್ಯ ಭಾಗದಲ್ಲಿ ಶನಿವಾರ 7.2 ತೀವ್ರತೆಯಲ್ಲಿ ಭೂಕಂಪಿಸಿದ್ದು, ರಾಜಧಾನಿ ಪೋರ್ಟ್–ಔ–ಪ್ರಿನ್ಸ್‌ನಿಂದ ಪಶ್ಚಿಮಕ್ಕೆ 125 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ’ ಎಂದು ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ತಿಳಿಸಿದೆ.

ಈ ಭೂಕುಸಿತದಿಂದಾಗಿ ಕರಾವಳಿ ನಗರ ಲೆಸ್‌ ಕೇಯ್ಸ್‌ನಲ್ಲಿ ಭಾರಿ ಹಾನಿ ಉಂಟಾಗಿದೆ. ಇಲ್ಲಿ ಶನಿವಾರ ತಡರಾತ್ರಿ ಆರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭಯದಿಂದ ಹಲವರು ರಸ್ತೆಯಲ್ಲಿ ರಾತ್ರಿ ಕಳೆದಿದ್ದಾರೆ.

ಗಾಯಗೊಂಡವರನ್ನು ಲೆಸ್‌ ಕೇಯ್ಸ್‌ನಿಂದ ಪೋರ್ಟ್–ಔ–ಪ್ರಿನ್ಸ್‌ಗೆ ಸ್ಥಳಾಂತರಿಸಲು ಮಾಜಿ ಸೆನೆಟರ್‌ವೊಬ್ಬರು ಖಾಸಗಿ ವಿಮಾನವನ್ನು ಬಾಡಿಗೆ ಪಡೆದುಕೊಂಡಿದ್ದಾರೆ.

‘ಇಲ್ಲಿನ ಆಸ್ಪತ್ರೆಗಳು ಭರ್ತಿಯಾಗಿವೆ. ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ. ಸಂತ್ರಸ್ತರಿಗೆ ನೆರವು ನೀಡಲು ಸರ್ಕಾರ ಧಾವಿಸಿದೆ’ ಎಂದು ಹೈಟಿಯ ಪ್ರಧಾನಿ ಏರಿಯಲ್ ಹೆನ್ರಿ ಅವರು ಹೇಳಿದ್ದಾರೆ.

ಹೈಟಿಯಾದ್ಯಂತ ಒಂದು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವ ಪ್ರಧಾನಿ ಹೆನ್ರಿ ಅವರು, ‘ಭೂಕಂಪದಿಂದ ಉಂಟಾದ ಹಾನಿಯ ಪ್ರಮಾಣದ ಸಂಪೂರ್ಣ ಮಾಹಿತಿ ಲಭ್ಯವಾಗುವವರೆಗೆ ಅಂತರರಾಷ್ಟ್ರೀಯ ನೆರವಿನ ಮೊರೆ ಹೋಗುವುದಿಲ್ಲ. ಅವಶೇಷಗಳಡಿ ಸಿಲುಕಿರುವವರನ್ನು ಆದಷ್ಟು ಬೇಗ ರಕ್ಷಿಸಬೇಕಾಗಿದೆ’ ಎಂದರು.

‘ಶನಿವಾರ ರಾತ್ರಿ ವೇಳೆಗೆ 304 ಮಂದಿ ಮೃತಪಟ್ಟಿದ್ದು, ಹಲವರನ್ನು ರಕ್ಷಣಾ ಸಿಬ್ಬಂದಿ ಅವಶೇಷಗಳಡಿಯಿಂದ ಹೊರತೆಗೆದಿದ್ದಾರೆ. ಈ ಭೂಕಂಪದಲ್ಲಿ 860 ಮನೆಗಳು ಸಂಪೂರ್ಣವಾಗಿ ನಾಶಗೊಂಡಿದ್ದರೆ, 700 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

‘ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಹೈಟಿಗೆ ತಕ್ಷಣವೇ ನೆರವು ಒದಗಿಸುವಂತೆ ಆದೇಶಿಸಿದ್ದಾರೆ. ಇದಕ್ಕಾಗಿ ಯುಎಸ್‌ಎಐಡಿ ಆಡಳಿತಾಧಿಕಾರಿ ಸಮಂತಾ ಪವರ್‌ ಅವರನ್ನು ಹಿರಿಯ ಅಧಿಕಾರಿಯನ್ನಾಗಿ ನೇಮಿಸಿದ್ದಾರೆ. ಯುಎಸ್‌ಎಐಡಿಯು ಭೂಕಂಪದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿ, ನೆರವು ಒದಗಿಸಲಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT