ಮಂಗಳವಾರ, ಡಿಸೆಂಬರ್ 1, 2020
24 °C

ಅಮೆರಿಕದ ಹಲವೆಡೆ ಪ್ರತಿಭಟನೆ: ಟ್ರಂಪ್-ಬೈಡನ್ ಬೆಂಂಬಲಿಗರ ಮಾತಿನ ಚಕಮಕಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಫೀನಿಕ್ಸ್/ಫಿಲಡೆಲ್ಫಿಯಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ನಡೆಯುತ್ತಿ ರುವ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇಬ್ಬರು ನಾಯಕರ ಬೆಂಬಲಿಗರೂ ಪರಸ್ಪರ ಮಾತಿನ ಚಕಮಕಿಗೆ ಮುಂದಾದ ಘಟನೆಯೂ ನಡೆದಿದೆ. ಮತ್ತೊಂದೆಡೆ ಟ್ರಂಪ್ ಬೆಂಬಲಿಗರು ಬಂದೂಕುಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದು ವರದಿಯಾಗಿದೆ.

ಬಹುತೇಕ ಎಲ್ಲಾ ಪ್ರತಿಭಟನೆಗಳು ಶಾಂತಿಯುತ ವಾಗಿ ನಡೆದವು. ಟ್ರಂಪ್ ಬೆಂಬಲಿಗರು ಎಣಿಕೆ ಕೇಂದ್ರಗಳ ಎದುರು ಪೋಸ್ಟರ್‌ಗಳನ್ನು ಪ್ರದರ್ಶಿಸಿ, ‘ಮತಎಣಿಕೆ ಮುಗಿದಿದೆ’ ಎಂದು ಘೋಷಣೆ ಕೂಗಿ ದ್ದಾರೆ. ಬೈಡನ್‌ ಬೆಂಬಲಿಗರು ಇದಕ್ಕೆ ಪ್ರತಿಯಾಗಿ, ‘ಚುನಾವಣೆ ಇನ್ನೂ ಮುಗಿದಿಲ್ಲ’ ಎಂದು ಘೋಷಣೆ ಕೂಗಿದ್ದಾರೆ. ಆರಿಜೋನಾದ ಎಣಿಕೆ ಕೇಂದ್ರವೊಂದರ ಎದುರು ಎರಡೂ ಗುಂಪುಗಳು ಜೋರು ದನಿಯಲ್ಲಿ ಬೈದಾಡಿಕೊಂಡಿವೆ. ಟ್ರಂಪ್ ಬೆಂಬಲಿಗರು ಭಾರಿ ಶಸ್ತ್ರಾಸ್ತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಪೆನ್ಸಿಲ್ವೇನಿಯಾದ ಮತ ಎಣಿಕೆ ಕೇಂದ್ರವೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಫೀನಿಕ್ಸ್‌ನಲ್ಲಿ ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನೆ ವೇಳೆ, ಟ್ರಂಪ್‌ ಅವರನ್ನು ಹಂದಿಯಂತೆ ಚಿತ್ರಿಸಿರುವ ಪೋಸ್ಟರ್ ಪ್ರದರ್ಶಿಸಿದ್ದಾನೆ. ಆ ವ್ಯಕ್ತಿಯನ್ನು ಟ್ರಂಪ್ ಬೆಂಬಲಿಗನೊಬ್ಬ ಬೆನ್ನಟ್ಟಿ ಹೋಗಿದ್ದಾನೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ.

ಬೈಡನ್ ಭದ್ರತೆ ಹೆಚ್ಚಳ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡನ್ ಅವರ ಮುನ್ನಡೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಅಮೆರಿಕದ ಸೀಕ್ರೆಟ್ ಸರ್ವಿಸ್‌ ಏಜೆನ್ಸಿಯು, ಬೈಡನ್ ಅವರ ಭದ್ರತೆಯನ್ನು ಹೆಚ್ಚಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ತವರು ರಾಜ್ಯ ಡೆಲ್‌ವರ್‌ನ ವಿಲ್ಮಿಂಗ್ಟನಲ್ಲಿ, ಬೈಡನ್ ಅವರ ಚುನಾವಣಾ ಕೇಂದ್ರ ಕಚೇರಿ ಇದೆ. ಈ ಕಚೇರಿಗೆ ಭದ್ರತೆ ನೀಡಲಾಗಿದೆ. ಬೈಡನ್ ಅವರಿಗೆ ಈಗಾಗಲೇ ನೀಡಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶುಕ್ರವಾರ (ಭಾರತೀಯ ಕಾಲಮಾನ ಶನಿವಾರ ಬೆಳಗ್ಗೆ) ಬೈಡನ್‌ ಅವರ ಗೆಲುವಿನ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಸೀಕ್ರೆಟ್ ಸರ್ವಿಸ್‌ ಸಂಸ್ಥೆಯು ಶ್ವೇತಭವನ, ಸರ್ಕಾರದ ಉನ್ನತಾಧಿಕಾರಿಗಳು ಮತ್ತು ವಿದೇಶಿ ಗಣ್ಯರಿಗೆ ಭದ್ರತೆ ನೀಡುವ ಕೆಲಸ ಮಾಡುತ್ತದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯ ಉಮೇದುವಾರಿಕೆಯಲ್ಲಿ ಜಯಗಳಿಸಿದಾಗ ಬೈಡನ್‌ ಅವರಿಗೆ ಈ ಸಂಸ್ಥೆಯು ಭದ್ರತೆ ನೀಡಿತ್ತು. ಆ ಭದ್ರತೆಯನ್ನು ಹೆಚ್ಚಿಸುವಂತೆ ಅವರು ಮನವಿ ಮಾಡಿಕೊಳ್ಳಬಹುದಿತ್ತು. ಆದರೆ ಅವರು ಮನವಿ ಮಾಡಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಒಂದೊಮ್ಮೆ ಬೈಡನ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಅಂದಿನಿಂದ ಅವರು ಅಧಿಕಾರ ಸ್ವೀಕರಿಸುವವರೆಗೆ (ಜನವರಿ 20) ಸೀಕ್ರೆಟ್ ಸರ್ವಿಸ್, ಅವರಿಗೆ ಪೂರ್ಣ ಭದ್ರತೆಯನ್ನು ಒದಗಿಸುತ್ತದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು