ಶನಿವಾರ, ಮೇ 28, 2022
22 °C
ಶ್ರೀಲಂಕಾ ಹಿಂಸಾಚಾರ: ಮೃತರ ಸಂಖ್ಯೆ 8ಕ್ಕೆ ಏರಿಕೆ

ನೌಕಾನೆಲೆಯಲ್ಲಿ ಆಶ್ರಯ ಪಡೆದ ಮಹಿಂದಾ ಕುಟುಂಬ: ಶ್ರೀಲಂಕಾದಲ್ಲಿ ಭಾರಿ ಪ್ರತಿಭಟನೆ

ಪಿಟಿಐ/ಎಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ (ಪಿಟಿಐ/ಎಪಿ/ರಾಯಿಟರ್ಸ್‌): ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಕುಟುಂಬದ ಕೆಲ ಸದಸ್ಯರು ಟ್ರಿಂಕಾಮಲೈನಲ್ಲಿರುವ ನೌಕಾನೆಲೆಯಲ್ಲಿ ಆಶ್ರಯ ಪಡೆದಿರುವ ಸುದ್ದಿ ಹಬ್ಬುತ್ತಿದ್ದಂತೆಯೇ, ನೌಕಾನೆಲೆಯ ಮುಂದೆ ಮಂಗಳವಾರ ಭಾರಿ ಪ್ರತಿಭಟನೆ ನಡೆಯಿತು.

ಸೋಮವಾರ ಮಹಿಂದಾ ರಾಜಪಕ್ಸ ಬೆಂಬಲಿಗರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಇದರ ಬೆನ್ನಲ್ಲೇ, ರಾಜಪಕ್ಸ ಹಾಗೂ ಕುಟುಂಬದ ಸದಸ್ಯರು ಕೊಲೊಂಬೊದಲ್ಲಿನ ಅಧಿಕೃತ ನಿವಾಸವನ್ನು ತೊರೆದು, ನೌಕಾನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.

ಈ ನಡುವೆ, ಎಎಫ್‌ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ರಾಜಪಕ್ಸ ಅವರ ಮಗ ನಮಲ್, ‘ತಮ್ಮ ತಂದೆ ಹಾಗೂ ಕುಟುಂಬದ ಯಾವ ಸದಸ್ಯರೂ ದೇಶ ತೊರೆಯುವುದಿಲ್ಲ’ ಎಂದು ‌ಸ್ಪಷ್ಟಪಡಿಸಿದ್ದಾರೆ.’

ಇನ್ನೊಂದೆಡೆ, ವಾರಂಟ್ ಇಲ್ಲದೇ ಜನರನ್ನು ಬಂಧಿಸುವುದು ಸೇರಿದಂತೆ ತುರ್ತು ಕ್ರಮ ಕೈಗೊಳ್ಳುವ ಸಂಬಂಧ, ಸೇನೆ ಹಾಗೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ದೇಶದಾದ್ಯಂತ ಕರ್ಫ್ಯೂ ಹೇರಲಾಗಿದೆ.

ಮಾಜಿ ಪ್ರಧಾನಿ ರಾಜಪಕ್ಸ ಬೆಂಬಲಿಗರು ಹಾಗೂ ಪ್ರತಿಭಟನಕಾರರ ನಡುವಿನ ಸಂಘರ್ಷದಿಂದಾಗಿ ಮೃತಪಟ್ಟವರ ಸಂಖ್ಯೆ ಮಂಗಳವಾರ 8ಕ್ಕೆ ಏರಿದೆ.

ರಾಜ‍ಪಕ್ಸ ಅವರ ಅಧಿಕೃತ ನಿವಾಸ ‘ಟೆಂಪ್‌ ಟ್ರೀಸ್‌’ಗೆ ನುಗ್ಗಲು ಸೋಮವಾರ ಪ್ರತಿಭಟನಕಾರರು ಯತ್ನಿಸುತ್ತಿದ್ದಲೇ ಇದ್ದರು. ಅವರನ್ನು ಚದುರಿಸಲು ಪೊಲೀಸರು ರಾತ್ರಿಯಿಡಿ ಆಶ್ರುವಾಯು ಬಳಸುತ್ತಿದ್ದುದು ವರದಿಯಾಗಿದೆ. ಈ ಪ್ರತಿಭಟನೆ ನಡುವೆಯೇ ರಾಜಪಕ್ಸ ಅವರು ಮಂಗಳವಾರ ನಸುಕಿನಲ್ಲಿ ತಮ್ಮ ನಿವಾಸ ತೊರೆದು, ಟ್ರಿಂಕಾಮಲೈನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಆರ್ಥಿಕ ಬಿಕ್ಕಟ್ಟಿಗೆ ನಲುಗಿರುವ ದ್ವೀಪರಾಷ್ಟ್ರದಲ್ಲಿ ಪ್ರತಿಭಟನೆ ತೀವ್ರಸ್ವರೂಪ ಪಡೆಯತ್ತಿದೆ. ಪ್ರತಿಭಟನಕಾರರು ಹಾಗೂ ಮಹಿಂದಾ ರಾಜಪಕ್ಸ ಬೆಂಬಲಿಗರ ನಡುವೆ ಸೋಮವಾರ ನಡೆದ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ, ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮಹಿಂದಾ ರಾಜಪಕ್ಸ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮನೆಗೆ ಪ್ರತಿಭಟನಕಾರರ ಗುಂಪೊಂದು ಬೆಂಕಿ ಹಚ್ಚಿತ್ತು. ಮೆದುಮುಲನ ಎಂಬಲ್ಲಿರುವ ರಾಜಪಕ್ಸ ಅವರ ತಂದೆ ಡಿ.ಎ.ರಾಜಪಕ್ಸ ಸ್ಮಾರಕವೂ ಬೆಂಕಿಗೆ ಆಹುತಿಯಾಗಿದೆ. ಇಬ್ಬರ ಮನೆಗಳು ಹಾಗೂ ಸ್ಮಾರಕ ಸುಡುತ್ತಿರುವ ದೃಶ್ಯಗಳನ್ನು ವಿಡಿಯೊದಲ್ಲಿ ಸೆರೆಯಾಗಿವೆ.

ಅಧಿವೇಶನ ಕರೆಯಲು ಸ್ಪೀಕರ್ ಮನವಿ
ನಿಲ್ಲದ ಪ್ರತಿಭಟನೆಗಳು, ವ್ಯಾಪಕ ಹಿಂಸಾಚಾರ ಸೇರಿದಂತೆ ದೇಶದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಕೂಡಲೇ ಸಂಸತ್‌ ಅಧಿವೇಶನ ಕರೆಯುವಂತೆ ಸ್ಪೀಕರ್‌ ಮಹಿಂದಾ ಯಪಾ ಅಬೇವರ್ದೆನೆ ಅವರು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಮನವಿ ಮಾಡಿದ್ದಾರೆ.

‘ಮೇ 17ರಂದು ಅಧಿವೇಶನ ನಿಗದಿಯಾಗಿದೆ. ಆದರೆ, ಈಗ ಪ್ರಧಾನಿ ಇಲ್ಲ ಹಾಗೂ ಸರ್ಕಾರವೂ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ, ಅಧ್ಯಕ್ಷ ಗೊಟಬಯ ಅವರು ಅಧಿವೇಶನವನ್ನು ಮತ್ತೊಮ್ಮೆ ಕರೆಯಬೇಕಾಗುತ್ತದೆ’ ಎಂದು ಸಂಸತ್‌ನ ಅಧಿಕಾರಿಗಳು ಹೇಳಿದ್ದಾರೆ.

ಓದಿ... ಶ್ರೀಲಂಕಾ ಹಿಂಸಾಚಾರ | ರಾಜಕಾರಣಿಗಳ ಮನೆಗಳಿಗೆ ಬೆಂಕಿ: 8 ಸಾವು, 200 ಜನರಿಗೆ ಗಾಯ

ಮಹಿಂದಾ ಬಂಧನಕ್ಕೆ ಹೆಚ್ಚಿದ ಒತ್ತಡ
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಹಿಂಸೆ ನಡೆಸಲು ಪ್ರಚೋದನೆ ನೀಡಿದ ಆರೋಪವನ್ನು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಎದುರಿಸುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಮಹಿಂದಾ ಹಾಗೂ ಅವರ ಸಂಪುಟದಲ್ಲಿ ಸಚಿವರಾಗಿದ್ದವರನ್ನು ಬಂಧಿಸುವಂತೆ ಒತ್ತಾಯಿಸಿ ವಕೀಲರ ಗುಂಪೊಂದು ಪೊಲೀಸ್‌ ಮುಖ್ಯಸ್ಥರಿಗೆ ದೂರು ನೀಡಿದೆ.

ಓದಿ... ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು