ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ– ಉಕ್ರೇನ್‌ ಯುದ್ಧ: ಷಿ, ಪುಟಿನ್‌ ನಡುವೆ ಅಭಿಪ್ರಾಯ ವಿನಿಮಯ

Last Updated 21 ಮಾರ್ಚ್ 2023, 15:49 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ತಮ್ಮ ಭೇಟಿಯ ಮೊದಲ ದಿನವಾದ ಸೋಮವಾರ ಕೂಲಂಕುಷವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ಅಲ್ಲಿಯ ಆಡಳಿತ (ಕ್ರೆಮ್ಲಿನ್‌) ಮಂಗಳವಾರ ತಿಳಿಸಿದೆ.

ರಷ್ಯಾ– ಉಕ್ರೇನ್‌ ಯುದ್ಧದ ತೀವ್ರತೆ ತಗ್ಗಿಸಲು ಮತ್ತು ಉಕ್ರೇನ್‌ ಜೊತೆ ಕದನ ವಿರಾಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಚೀನಾ ನೀಡಿರುವ 12 ಅಂಶಗಳ ಪ್ರಸ್ತಾವದ ಕುರಿತು ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದರು. ಈ ವೇಳೆ ಗಂಭೀರ ಸಂಭಾಷಣೆಗಳು ನಡೆದವು ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಿಳಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು, ಉಭಯ ದೇಶಗಳ ನಾಯಕರು ಮಂಗಳವಾರ ಎರಡನೇ ಸುತ್ತಿನ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಸುದ್ದಿಗಾರರಿಗೆ ಹೇಳಿದರು.

ಷಿ ಅವರ ಜೊತೆ ಸೋಮವಾರದ ಚರ್ಚೆ ಕುರಿತು ಮಾಹಿತಿ ನೀಡಿದ್ದ ಪುಟಿನ್‌, ತಾವು ಚೀನಾದ ಚಿಂತನೆಗಳನ್ನು ಜಾಗರೂಕತೆಯಿಂದ ಅಭ್ಯಸಿಸಿರುವುದಾಗಿ ಮತ್ತು ಅವುಗಳನ್ನು ಗೌರವದಿಂದ ನೋಡಿರುವುದಾಗಿ ಹೇಳಿದರು. ಷಿ ಜೊತೆ ಆ ಎಲ್ಲಾ ವಿಷಯಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರು.

ಉಕ್ರೇನ್‌ ಮತ್ತು ಚೀನಾ ನಡುವೆ ಯುದ್ಧ ಆರಂಭವಾಗಿ 13 ತಿಂಗಳು ಕಳೆದಿವೆ. ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಚೀನಾ ನೀಡಿರುವ ಪ್ರಸ್ತಾವನೆಯು ಕೆಲವು ಸಾಮಾನ್ಯ ನೀತಿಗಳನ್ನು ಹೊಂದಿದೆಯೇ ಹೊರತು ಯುದ್ಧ ನಿಲ್ಲಿಸಲು ವಿಸ್ತೃತ ಯೋಜನೆ ಹೊಂದಿಲ್ಲ ಎನ್ನಲಾಗಿದೆ.

ಉಕ್ರೇನ್‌ಗೆ ಜಪಾನ್ ಪ್ರಧಾನಿ ಭೇಟಿ

ಕೀವ್‌ (ಎಪಿ): ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ರಷ್ಯಾಕ್ಕೆ ತೆರಳಿರುವ ಬೆನ್ನಲ್ಲೇ ಜಪಾನ್‌ ಪ್ರಧಾನಿ ಪೆಮಿಯೊ ಕಿಶಿದಾ ಅವರು ಮಂಗಳವಾರ ಉಕ್ರೇನ್‌ಗೆ ಧಿಡೀರ್‌ ಭೇಟಿ ನೀಡಿದರು. ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಎರಡೂ ಭೇಟಿಗಳ ಪ್ರಮುಖ ವಿಷಯವಾಗಲಿವೆ ಎನ್ನಲಾಗಿದೆ.

ಕಿಶದಾ ಅವರ ಉಕ್ರೇನ್‌ ಭೇಟಿಯ ವಿಡಿಯೊವನ್ನು ಜಪಾನ್‌ನ ಸುದ್ದಿವಾಹಿನಿ ಎನ್‌ಎಚ್‌ಕೆ ಪ್ರಸಾರ ಮಾಡಿದೆ. ಕೀವ್‌ ಸೆಂಟ್ರಲ್‌ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ಅವರನ್ನು ಕೆಲವರು ಬಂದು ಬರಮಾಡಿಕೊಳ್ಳುತ್ತಾರೆ. ಅವರು ಉಕ್ರೇನ್‌ ಅಧಿಕಾರಿಗಳು ಎಂದು ಅಂದಾಜಿಸಲಾಗಿದೆ.

ಮೇನಲ್ಲಿ ನಡೆಯಲಿರುವ ಜಿ7 ಶೃಂಗದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಕಿಶಿದಾ ಅವರು, ಕೀವ್‌ನಲ್ಲಿ ಉಕ್ರೇನ್‌ ಅಧ್ಯಕ್ಷ ವ್ಲಾದಿಮಿರ್‌ ಝೆಲೆನ್ಸ್ಕಿಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯ ಇತರ ಮಾಹಿತಿಗಳು ಬಹಿರಂಗವಾಗಿಲ್ಲ. ‌

‘ರಷ್ಯಾ ದಾಳಿ ವಿರೋಧಿಸಿ ತಮ್ಮ ತಾಯ್ನೆಲದ ಪರವಾಗಿ ಉಕ್ರೇನ್‌ ಜನರು ಅವರ ಅಧ್ಯಕ್ಷನ ನಾಯಕತ್ವದಲ್ಲಿ ತೋರಿದ ಧೈರ್ಯ ಮತ್ತು ತಾಳ್ಮೆಗೆ ಕಿಶಿದಾ ಅವರು ಗೌರವ ತೋರಲಿದ್ದಾರೆ. ಜಪಾನ್‌ ಪ್ರಧಾನಿಯಾಗಿ ಮತ್ತು ಜಿ7 ಅಧ್ಯಕ್ಷರಾಗಿ ತಾವು ಉಕ್ರೇನ್‌ ಜೊತೆ ನಿಲ್ಲುವುದಾಗಿ ಹಾಗೂ ದೃಢವಾಗಿ ಬೆಂಬಲಿಸುವ ಸಂದೇಶ ನೀಡಲಿದ್ದಾರೆ’ ಎಂದು ಕಿಶಿದಾ ಅವರ ಉಕ್ರೇನ್‌ ಭೇಟಿ ಕುರಿತು ಜಪಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಉಕ್ರೇನ್ ಭೇಟಿ ಬಳಿಕ ಅವರು ಪೊಲೆಂಡೆಗೆ ತೆರಳಲಿದ್ದಾರೆ. ಗುರುವಾರ ಅವರು ಜಪಾನ್‌ಗೆ ನಿರ್ಗಮಿಸಲಿದ್ದಾರೆ.

ಚೀನಾ ವಾಗ್ದಾಳಿ: ‘ಪರಿಸ್ಥಿತಿಯನ್ನು ಮತ್ತಷ್ಟು ಹಾಳುಮಾಡುವ ಬದಲು ಅದನ್ನು ಹತೋಟಿಗೆ ತರುವ ಕೆಲಸವನ್ನು ಜಪಾನ್‌ ಮಾಡಬೇಕು’ ಎಂದು ಚೀನಾ ಕಿಡಿಕಾರಿದೆ.

ಷಿ ಅವರು ರಷ್ಯಾಕ್ಕೆ ಭೇಟಿ ನೀಡಿದ ಸಮಯದಲ್ಲೇ ಕಿಶದಾ ಅವರು ಉಕ್ರೇನ್‌ಗೆ ತೆರಳಿರುವುದನ್ನು ವಿರೋಧಿಸಿರುವ ಚೀನಾ, ಷಿ ಅವರ ರಷ್ಯಾ ಭೇಟಿಯನ್ನು ಮರೆಮಾಡುವ ದುರುದ್ದೇಶದಿಂದಲೇ ಜಪಾನ್‌ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT