ಶುಕ್ರವಾರ, ಡಿಸೆಂಬರ್ 2, 2022
22 °C
ಉಕ್ರೇನ್‌ ರೈಲು ನಿಲ್ದಾಣದ ಮೇಲೆ ರಷ್ಯಾ ಕ್ಷಿಪಣಿ ದಾಳಿ; 25 ನಾಗರಿಕರ ಸಾವು

ಸೇನಾಪಡೆಯ ಗಾತ್ರ ಹೆಚ್ಚಿಸಲು ಪುಟಿನ್‌ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ/ ಪೊಕ್ರೊವ್‌ಸ್ಕ್‌ : ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ತಮ್ಮ ಸೇನಾ ಪಡೆಗಳ ಗಾತ್ರ ಹೆಚ್ಚಿಸಲು ನಿರ್ಧರಿಸಿದ್ದು, 2023ರ ವೇಳೆಗೆ ದೇಶದ ಶಸಸ್ತ್ರ ಪಡೆಗಳ ಸಂಖ್ಯೆಯನ್ನು 1.37 ಲಕ್ಷದಷ್ಟು ಹೆಚ್ಚಿಸಲು ಸೇನೆಗೆ ಗುರುವಾರ ಆದೇಶ ನೀಡಿದ್ದಾರೆ. 

ಪುಟಿನ್ ಅವರು ಗುರುವಾರ ಸಹಿಹಾಕಿದ ಆದೇಶ, ಸೇನಾ ಪಡೆಗಳ ಗಾತ್ರವನ್ನು ಯಾವ ರೀತಿ ಹೆಚ್ಚಿಸಬೇಕೆನ್ನುವುದನ್ನು ವಿವರಿಸಿಲ್ಲ. ಆದರೆ, ಉಕ್ರೇನ್‌ನಲ್ಲಿ ಕೈಗೊಂಡಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಸ್ವಯಂಪ್ರೇರಿತ ಗುತ್ತಿಗೆ ಸೈನಿಕರು ಮಾತ್ರ ಪಾಲ್ಗೊಳ್ಳುತ್ತಾರೆ ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್ ಹೇಳಿದೆ. ಉಕ್ರೇನ್‌ ಆಕ್ರಮಣಕ್ಕೆ ಬೃಹತ್‌ ಸಂಖ್ಯೆಯಲ್ಲಿ ಸೈನಿಕರನ್ನು ಸಜ್ಜುಗೊಳಿಸುತ್ತಿರುವ ಆರೋಪಗಳನ್ನು ರಷ್ಯಾ ತಳ್ಳಿಹಾಕಿದೆ.

ರಷ್ಯಾ ಕ್ಷಿಪಣಿ ದಾಳಿಗೆ 25 ನಾಗರಿಕರ ಸಾವು: 

ಉಕ್ರೇನ್‌ ಸ್ವಾತಂತ್ರ್ಯ ದಿನದಂದೇ ಉಕ್ರೇನಿನ ರೈಲು ನಿಲ್ದಾಣ ಗುರಿಯಾಗಿಸಿ ರಷ್ಯಾ ಬುಧವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ 11 ವರ್ಷದ ಬಾಲಕ ಸೇರಿ 25 ನಾಗರಿಕರು ಮೃತಪಟ್ಟಿದ್ದಾರೆ.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ರಷ್ಯಾದಿಂದ ಭೀಕರ ದಾಳಿ ನಡೆಯುವ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೇ, ನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದ ಚಾಪ್ಲೀನ್‌ ಪಟ್ಟಣದಲ್ಲಿನ ರೈಲು ನಿಲ್ದಾಣದ ಮೇಲೆ ಕ್ಷಿಪಣಿ ದಾಳಿಯಾಗಿದೆ. ಘಟನೆಯಲ್ಲಿ 31 ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ಉಪ ಮುಖ್ಯಸ್ಥ ಕಿರಿಲೊ ತೈಮೊಶೆಂಕೊ ಗುರುವಾರ ತಿಳಿಸಿದರು.

ಉಕ್ರೇನ್‌ ಬಿಕ್ಕಟ್ಟು: ರಷ್ಯಾ ವಿರುದ್ಧ ಭಾರತ ಮತ

ವಾಷಿಂಗ್ಟನ್‌ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಬುಧವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ವಿಡಿಯೊ ಟೆಲಿ ಕಾನ್ಫರೆನ್ಸ್‌ ಮೂಲಕ ಭಾಷಣಕ್ಕೆ ಅವಕಾಶ ನೀಡಲು ನಡೆಸಿದ ‘ಔಪಚಾರಿಕ ಮತದಾನ’ದಲ್ಲಿ ಭಾರತ ಇದೇ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿತು.

ಝೆಲೆನ್‌ಸ್ಕಿ ಅವರ ವರ್ಚುವಲ್‌ ಪಾಲ್ಗೊಳ್ಳುವಿಕೆ ಪರ 13 ರಾಷ್ಟ್ರಗಳು ಮತ ಚಲಾಯಿಸಿದವು. ರಷ್ಯಾ ವಿರುದ್ಧ ಮತ ಹಾಕಿತು. ಚೀನಾ ತಟಸ್ಥವಾಗಿ ಉಳಿಯಿತು.

15 ಸದಸ್ಯ ರಾಷ್ಟ್ರಗಳಿರುವ ಭದ್ರತಾ ಮಂಡಳಿಯ ಆಹ್ವಾನದ ಮೇರೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮೀರ್‌ ಝೆಲೆನ್‌ಸ್ಕಿ ವಿಡಿಯೊ ಟೆಲಿ ಕಾನ್ಫರೆನ್ಸ್‌ ಮೂಲಕ ಸಭೆ ಉದ್ದೇಶಿ ಮಾತನಾಡಿದರು.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಭಾರತ ಖಂಡಿಸಿಲ್ಲ. ಸಂಘರ್ಷ ಶಮನಕ್ಕೆ ರಾಜತಾಂತ್ರಿಕತೆ ಮತ್ತು ಮಾತುಕತೆಯ ಮಾರ್ಗಕ್ಕೆ ಎರಡೂ ರಾಷ್ಟ್ರಗಳು ಮರಳಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದ ಭಾರತ, ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗೊಳಿಸುವ ಎಲ್ಲ ರಾಜತಾಂತ್ರಿಕ ಪ್ರಯತ್ನಗಳಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು