ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಾಂಗ ಸಚಿವರ ಸಭೆ: ಇಂಡೊ–ಪೆಸಿಫಿಕ್ ರಾಷ್ಟ್ರಗಳ ಸಾರ್ವಭೌಮತೆ ರಕ್ಷಣೆಗೆ ಪಣ

ಮೆಲ್ಬರ್ನ್‌ನಲ್ಲಿ ‘ಕ್ವಾಡ್‌‘ನ ವಿದೇಶಾಂಗ ಸಚಿವರ ಸಭೆ
Last Updated 11 ಫೆಬ್ರುವರಿ 2022, 12:47 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಇಂಡೊ–ಪೆಸಿಫಿಕ್ ರಾಷ್ಟ್ರಗಳ ಸಾರ್ವಭೌಮತೆ ರಕ್ಷಿಸಲು ಹಾಗೂ ಈ ಪ್ರದೇಶಕ್ಕೆ ಒದಗಿರುವ ಬೆದರಿಕೆಗಳನ್ನು ಒಗ್ಗಟ್ಟಿನಿಂದ ಎದುರಿಸಲು ಕ್ವಾಡ್‌ ರಾಷ್ಟ್ರಗಳು ಶುಕ್ರವಾರ ಶಪಥ ಮಾಡಿದವು.

ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌, ‘ಕ್ವಾಡ್‌’ನ ಸದಸ್ಯ ರಾಷ್ಟ್ರಗಳಾಗಿವೆ. ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದ ಕ್ವಾಡ್‌ ಸಭೆಯಲ್ಲಿ ಈ ರಾಷ್ಟ್ರಗಳ ವಿದೇಶಾಂಗ ಸಚಿವರಾದ ಎಸ್‌.ಜೈಶಂಕರ್‌, ಆ್ಯಂಟೊನಿ ಬ್ಲಿಂಕೆನ್, ಮರೈಸ್ ಪೇನ್ ಹಾಗೂ ಯೊಶಿಮಸಾ ಹಯಾಶಿ ಈ ವಿಷಯಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು.

ಸಭೆ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೇನ್, ‘ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿನ ರಾಷ್ಟ್ರಗಳ ಸಾರ್ವಭೌಮತೆ ರಕ್ಷಣೆ, ಮುಕ್ತ ವಾತಾವರಣ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಕ್ವಾಡ್‌ನ ವಿದೇಶಾಂಗ ಸಚಿವರು ಪುನರುಚ್ಚರಿಸಿದರು ಎಂದು ತಿಳಿಸಿದರು.

‘ಕ್ವಾಡ್‌ ಸದಸ್ಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿದೆ ಎಂಬುದನ್ನು ಈ ಸಭೆಯಲ್ಲಿನ ಮಾತುಕತೆಗಳು ಹೇಳುತ್ತವೆ. ಸದಸ್ಯ ರಾಷ್ಟ್ರಗಳ ಕಾರ್ಯತಂತ್ರಗಳು, ಪರಸ್ಪರ ಸಹಕಾರದಿಂದಾಗಿ ಕ್ವಾಡ್‌ ಸಂಘಟನೆ ಮತ್ತಷ್ಟೂ ಸದೃಢಗೊಳ್ಳಲಿದೆ’ ಎಂದು ಸಚಿವ ಜೈಶಂಕರ್‌ ಹೇಳಿದರು.

ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾಕ್ಕೆ ಕ್ವಾಡ್‌ ನಾಯಕರು ಈ ಸಭೆ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾತುಕತೆ: ಕ್ವಾಡ್ ಸಭೆಗೂ ಮುನ್ನ, ಸಚಿವ ಎಸ್.ಜೈಶಂಕರ್ ಅವರು, ಆಸ್ಟ್ರೇಲಿಯಾ ರಕ್ಷಣಾ ಸಚಿವ ಪೀಟರ್ ಡಟಾನ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಭಾರತ–ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಸಭೆ ಶನಿವಾರ (ಫೆ.12) ನಡೆಯಲಿದೆ.

‘ರಕ್ಷಣೆ ಹಾಗೂ ಭದ್ರತಾ ವಿಷಯಗಳೇ ಉಭಯ ದೇಶಗಳ ಬಾಂಧವ್ಯದ ಆಧಾರಸ್ತಂಭಗಳು’ ಎಂದು ಜೈಶಂಕರ್ ಹೇಳಿದ್ದಾರೆ.

ತನ್ನ ಏಳಿಗೆ ತಡೆಯುವುದೇ ಕ್ವಾಡ್‌ ಉದ್ದೇಶ: ಚೀನಾ

‘ತನ್ನ ಏಳಿಗೆಯನ್ನು ತಡೆಯುವ ಸಲುವಾಗಿಯೇ ಅಮೆರಿಕ, ಭಾರತ, ಜಪಾನ್‌ ಹಾಗೂ ಆಸ್ಟ್ರೇಲಿಯಾ ‘ಕ್ವಾಡ್‌’ ರಚಿಸಿಕೊಂಡಿವೆ. ಸಂಘರ್ಷ ನಡೆಸುವುದೇ ಈ ಮೈತ್ರಿಯ ಉದ್ದೇಶವಾಗಿದ್ದು, ಇಂಥ ಪ್ರಯತ್ನಗಳು ವಿಫಲವಾಗಲಿವೆ’ ಎಂದು ಚೀನಾ ಶುಕ್ರವಾರ ಪ್ರತಿಕ್ರಿಯಿಸಿದೆ.

‘ಅಂತರರಾಷ್ಟ್ರೀಯ ಒಪ್ಪಂದಗಳು ಹಾಗೂ ಸಹಕಾರವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಈ ಸಭೆಯನ್ನು ನಡೆಸಲಾಗಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಂಡೊ–ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿ ಹಲವು ರಾಷ್ಟ್ರಗಳೊಂದಿಗೆ ಚೀನಾ ತಗಾದೆ ತೆಗೆದಿದೆ. ಅಲ್ಲದೇ, ಕ್ವಾಡ್‌ ಅನ್ನು ಅದು ಸ್ಥಾಪನೆಗೊಂಡ ದಿನದಿಂದಲೇ ವಿರೋಧಿಸುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT