ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶದ ಲಸಿಕಾ ವಿಜ್ಞಾನಿಗೆ ಮ್ಯಾಗ್ಸೆಸೆ ಪ್ರಶಸ್ತಿ

ಅಭಿವೃದ್ಧಿಗೆ ಶ್ರಮಿಸಿದ ನಾಲ್ವರಿಗೆ ಮತ್ತು ಒಂದು ಸಂಸ್ಥೆಗೆ ಪ್ರಶಸ್ತಿ ಪ್ರಕಟ
Last Updated 31 ಆಗಸ್ಟ್ 2021, 15:33 IST
ಅಕ್ಷರ ಗಾತ್ರ

ಮನಿಲಾ: ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ನಾಲ್ವರಿಗೆ ಮತ್ತು ಒಂದು ಸಂಸ್ಥೆಯನ್ನು 2021ನೇ ಸಾಲಿನ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಾಲರಾ ವಿರುದ್ಧ ಕಡಿಮೆ ದರದ ಲಸಿಕೆ ಅಭಿವೃದ್ಧಿಪಡಿಸಿದ ಬಾಂಗ್ಲಾದೇಶದ ವಿಜ್ಞಾನಿ ಫಿರ್ದೌಸಿ ಖಾದ್ರಿ (70), ಪಾಕಿಸ್ತಾನದ ಮೈಕ್ರೊಫೈನಾನ್ಸ್‌ ಪ್ರವರ್ತಕ ಮುಹಮ್ಮದ್‌ ಅಮ್ಜದ್‌ ಸಾಖಿಬ್‌ (64), ಫಿಲಿಪ್ಪಿನ್ಸ್‌ನ ಮೀನುಗಾರ ರಾಬರ್ಟೊ ಬಲ್ಲೋನ್‌ (53) ಮತ್ತು ಅಮೆರಿಕದ ಸ್ಟೆವನ್‌ ಮನ್ಸಿ ಹಾಗೂ ಇಂಡೊನೇಷ್ಯಾದ ಸಾಕ್ಷ್ಯಚಿತ್ರ ನಿರ್ಮಿಸುವ ’ವಾಚ್‌ಡಾಕ್‌’ಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಕಾಲರಾ ಮತ್ತು ಟೈಫಾಯ್ಡ್‌ಗೆ ಕೈಗೆಟಕುವ ದರದ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಖಾದ್ರಿ ಮಹತ್ವದ ಪಾತ್ರವಹಿಸಿದ್ದಾರೆ. ಖಾದ್ರಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಮನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ಪ್ರತಿಷ್ಠಾನವು ತಿಳಿಸಿದೆ. ಢಾಕಾದ ಅತಿಸಾರ ಕಾಯಿಲೆ ಕುರಿತಾದ ಅಂತರರಾಷ್ಟ್ರೀಯ ಸಂಶೋಧನಾ ಕೇಂದ್ರದಲ್ಲಿ ಖಾದ್ರಿ ಕಾರ್ಯನಿರ್ಹಿಸುತ್ತಿದ್ದಾರೆ.

ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ ಜಿಲ್ಲೆಯಲ್ಲಿ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿಯೂ ಸಾಮೂಹಿಕ ಲಸಿಕೆ ಅಭಿಯಾನ ಕೈಗೊಳ್ಳುವ ಮೂಲಕ ಕಾಲರಾ ಹಬ್ಬುವುದನ್ನು ಖಾದ್ರಿ ನಿಯಂತ್ರಿಸಿದ್ದರು. ’ನನಗೆ ಅಪಾರ ಸಂತೋಷವಾಗಿದೆ’ ಎಂದು ಖಾದ್ರಿ ಪ್ರತಿಕ್ರಿಯಿಸಿದ್ದಾರೆ.

ಮೈಕ್ರೊ ಫೈನ್ಸಾನ್ಸ್‌ ಯೋಜನೆಯ ಮೂಲಕ ನೆರವಾಗುತ್ತಿರುವ ಪಾಕಿಸ್ತಾನದ ಮುಹಮ್ಮದ್‌ ಅಮ್ಜದ್‌ ಸಾಖಿಬ್‌ ಅವರು ಲಕ್ಷಾಂತರ ಬಡಕುಟುಂಬಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

‘ಅಖುವಾಟ್‌’ ಸಂಸ್ಥೆ ಮೂಲಕ ಈ ಯೋಜನೆ ಆರಂಭಿಸಿ ಎರಡು ದಶಕಗಳಾಗಿವೆ. ಈಗ ದೇಶದ ಬೃಹತ್‌ ಮೈಕ್ರೊಫೈನಾನ್ಸ್‌ ಸಂಸ್ಥೆಯಾಗಿ ಬೆಳೆದಿದ್ದು, 90 ಕೋಟಿ ಡಾಲರ್‌ (₹6569.7075 ಕೋಟಿ) ಸಾಲ ವಿತರಿಸಿದೆ ಮತ್ತು ಶೇಕಡ 100ರಷ್ಟು ಸಾಲ ಮರುಪಾವತಿಯಾಗಿದೆ ಎಂದು ಫೌಂಡೇಷನ್‌ ತಿಳಿಸಿದೆ.

ಫಿಲಿಪ್ಪಿನ್ಸ್‌ನ ಮೀನುಗಾರ ರಾಬರ್ಟೊ ಬಲ್ಲೋನ್‌ ಅವರು ಸಂಕಷ್ಟದಲ್ಲಿದ್ದ ಮೀನುಗಾರಿಕೆ ಉದ್ಯಮಕ್ಕೆ ಪುನಶ್ಚೇತನ ನೀಡುವ ಮೂಲಕ ಮಹತ್ವದ ಕಾರ್ಯ ಕೈಗೊಂಡಿದ್ದಾರೆ. ಸರ್ಕಾರದ ನೆರವಿನೊಂದಿಗೆ ಬಲ್ಲೋನ್‌ ಮತ್ತು ಇತರ ಮೀನುಗಾರರು 500 ಹೆಕ್ಟೇರ್‌ ಪ್ರದೇಶದಲ್ಲಿ ಕಾಂಡ್ಲಾ ವನ ಅಭಿವೃದ್ಧಿಪಡಿಸಿದ್ದಾರೆ.

ನಿರಾಶ್ರಿತರಿಗೆ ನೆರವು ನೀಡುವ ಕಾರ್ಯದಲ್ಲಿ ಅಮೆರಿಕದ ಸ್ಟೆವನ್‌ ಮನ್ಸಿ ತೊಡಗಿಸಿಕೊಂಡಿದ್ದಾರೆ. ನೈಸರ್ಗಿಕ ವಿಪತ್ತುಗಳಿಂದ ಸಂತ್ರಸ್ತರಾದವರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿರುವ ಇಂಡೊನೇಷ್ಯಾದ ‘ವಾಚ್‌ಡಾಕ್‌’ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪರಿಸರ ಕುರಿತ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿದೆ.

1957ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. 2020ರಲ್ಲಿ ಕೊರೊನಾ ವೈರಸ್‌ ಕಾರಣಕ್ಕೆ ವರ್ಚುವಲ್ ವ್ಯವಸ್ಥೆ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT