ಸೋಮವಾರ, ಏಪ್ರಿಲ್ 19, 2021
32 °C

ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ ಸಂಸತ್‌ ಮುಂದೆ ಪ್ರತಿಭಟನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ಯಾನ್‌ಬೆರಾ: ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆಸ್ಟ್ರೇಲಿಯಾ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ದ ಆರೋಪ ಕೇಳಿ ಬಂದಿದ್ದು ಇದನ್ನು ವಿರೋಧಿಸಿ ಕ್ಯಾನ್‌ಬೆರಾ ಸೇರಿದಂತೆ ಹಲವು ನಗರಗಳಲ್ಲಿ ಜನರು ಪ್ರತಿಭಟನೆ ನಡೆಸಿದರು.

ಕ್ಯಾನ್‌ಬೆರಾದಲ್ಲಿರುವ ಸಂಸತ್‌ ಭವನದ ಮುಂದೆ ಸೋಮವಾರ ನೂರಾರು ಪ್ರತಿಭಟನಕಾರರು ಸೇರಿ ಪ್ರತಿಭಟಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು, ಅವರೆಲ್ಲರೂ ಕಪ್ಪು ಬಣ್ಣದ ಬಟ್ಟೆ ಧರಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಕಾರರು ‘ಮಹಿಳೆಯರಿಗೆ ನ್ಯಾಯ ಸಿಗಬೇಕು’ ಮತ್ತು ‘ಪುರುಷರೇ ತಪ್ಪೊಪ್ಪಿಕೊಳ್ಳಿ ’ ಎಂಬ ಘೋಷಣೆಗಳನ್ನು ಕೂಗಿದರು.

ಸಂಸತ್‌ ಭವನದ ಮುಂದೆ ಜಮಾಯಿಸಿರುವ ಪ್ರತಿಭಟನಕಾರರನ್ನುದ್ಧೇಶಿಸಿ ಪ್ರಧಾನಿ ಅವರು ಮಾತನಾಡಬೇಕು ಎಂದು ಅವರು ಆಗ್ರಹಿಸಿದರು. ಆದರೆ ಇದನ್ನು ನಿರಾಕರಿಸಿದ ಪ್ರಧಾನಿ, ತಮ್ಮ ಕಚೇರಿಯಲ್ಲಿ ಪ್ರತಿಭಟನಕಾರರೊಂದಿಗೆ ಚರ್ಚೆ ನಡೆಸಲು ಸಿದ್ಧ ಎಂದು ಹೇಳಿದರು. ಆದರೆ ಆ ಸಭೆ ನಡೆಯಲಿಲ್ಲ.

‘ನಾವು ಮುಚ್ಚಿದ ಬಾಗಿಲಿನ ಹಿಂದೆ ಮಾತನಾಡಲು ಸಿದ್ಧರಿಲ್ಲ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜನೈನ್ ಹೆಂಡ್ರಿ ಅವರು ತಿಳಿಸಿದರು.

ಸರ್ಕಾರಿ ಅಧಿಕಾರಿಗಳಿಂದ ಮಹಿಳೆಯರ ಮೇಲಾದ ಅತ್ಯಾಚಾರವನ್ನು ಖಂಡಿಸಿ ಸಿಡ್ನಿ, ಮೆಲ್ಬರ್ನ್, ಬ್ರಿಸ್ಬೇನ್ ಮತ್ತು ಹೊಬರ್ಟ್‌ನಲ್ಲೂ ‍ಪ್ರತಿಭಟನೆಗಳು ನಡೆಯಿತು.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಅಟಾರ್ನಿ ಜನರಲ್‌ ಕ್ರಿಶ್ಚಿಯನ್ ಪೋರ್ಟರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. 1988ರಲ್ಲಿ 17 ವಯಸ್ಸಿನ ಪೋರ್ಟರ್‌, 16 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. ಈ ಸಂಬಂಧ ಸಂತ್ರಸ್ತೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆದರೆ ಕಳೆದ ವರ್ಷ ದೂರನ್ನು ವಾಪಸ್‌ ಪಡೆದ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾದರು.

ಆದರೆ ಪೋರ್ಟರ್‌ ಅವರು ಈ ಎಲ್ಲಾ ಆರೋ‍‍ಪಗಳನ್ನು ತಳ್ಳಿ ಹಾಕಿದ್ದಾರೆ.

ಇನ್ನೊಂದೆಡೆ 2019ರಲ್ಲಿ ಆಗಿನ ರಕ್ಷಣಾ ಸಚಿವೆ ಲಿಂಡಾ ರೆನಾಲ್ಡ್ಸ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ಮೇಲೆ ಹಿರಿಯ ಅಧಿಕಾರಿಯೊಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

‘ನನಗೆ ವೃತ್ತಿಜೀವನ ಮತ್ತು ಅತ್ಯಾಚಾರದ ಬಗ್ಗೆ ದೂರು ಸಲ್ಲಿಸುವ ನಡುವೆ ಆಯ್ಕೆಯನ್ನು ಮಾಡಬೇಕಾಗಿತ್ತು. ನಾನು ಜನವರಿಯಲ್ಲಿ ಸರ್ಕಾರಿ ಕೆಲಸವನ್ನು ತ್ಯಜಿಸಿ, ಘಟನೆಯ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದೆ’ ಎಂದು ಸಂತ್ರಸ್ತೆ  ಹೇಳಿದ್ದರು.

ಲಿಂಡಾ ರೆನಾಲ್ಡ್ಸ್ ಅವರು ಸಂತ್ರಸ್ತೆಗೆ ಬೆಂಬಲ ನೀಡುವಲ್ಲಿ ವಿಫಲರಾಗಿದ್ದರು ಎಂದೂ ಪ್ರತಿಭಟನಕಾರರು ಟೀಕಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು