ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟಿಗೇಟ್ ಹಗರಣ: ಕ್ಷಮೆ ಕೇಳಿ ದಂಡ ಪಾವತಿಸಿದ ನಾರಾಯಣಮೂರ್ತಿ ಅಳಿಯ

Last Updated 13 ಏಪ್ರಿಲ್ 2022, 12:20 IST
ಅಕ್ಷರ ಗಾತ್ರ

ಲಂಡನ್: ಜೂನ್ 2020ರಲ್ಲಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಷಮೆಯಾಚಿಸಿರುವ ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಕ್ ಅವರು ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಗಳು ವಿಧಿಸಿದ ದಂಡವನ್ನೂ ಪಾವತಿಸಿರುವುದಾಗಿ ಹೇಳಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಾವೂ ಸಹ ಕ್ಷಮೆಯಾಚಿಸಿದ್ದು, ದಂಡವನ್ನೂ ಪಾವತಿಸಿರುವುದಾಗಿ ಪ್ರಧಾನಿ ಬೋರಿಸ್ ಜಾನ್ಸನ್ ದೃಢಪಡಿದ ಬಳಿಕ ಮಂಗಳವಾರ ಸಂಜೆ ನೀಡಿದ ತಮ್ಮ ಹೇಳಿಕೆಯಲ್ಲಿ ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಕ್ಷಮೆಯಾಚಿಸಿದ್ದಾರೆ.

2020-2021ರ ಅವಧಿಯಲ್ಲಿ ಕೊರೊನಾ ವೈರಸ್ ಮಾರ್ಗಸೂಚಿ ಉಲ್ಲಂಘಿಸಿ ವೈಟ್‌ಹಾಲ್‌ನಲ್ಲಿರುವ ಡೌನಿಂಗ್ ಸ್ಟ್ರೀಟ್ ಮತ್ತು ಇತರ ಬ್ರಿಟನ್ನಿನ ಸರ್ಕಾರಿ ಕಚೇರಿಗಳಲ್ಲಿ ಸುಮಾರು 12 ಪಾರ್ಟಿಗಳು ನಡೆದಿವೆ ಎನ್ನಲಾಗುತ್ತಿರುವ ‘ಪಾರ್ಟಿಗೇಟ್ ಹಗರಣ’ಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

‘ಜೂನ್ 19 ರಂದು ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಪಾರ್ಟಿಗೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್ ಪೊಲೀಸರು ನೀಡಿದ ನಿಗದಿತ ಪೆನಾಲ್ಟಿ ನೋಟಿಸ್ ಅನ್ನು ನಾನು ಸ್ವೀಕರಿಸಿದ್ದೇನೆ’ಎಂದು ಸುನಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಕ್ಷಮೆಯಾಚಿಸುತ್ತಿರುವುದಾಗಿ ಹೇಳಿದ್ದಾರೆ.

‘ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮೊದಲು ಸರ್ಕಾರದ ಕಚೇರಿಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಮಾಡಿದ ಈ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ದಂಡವನ್ನು ಪಾವತಿಸಿದ್ದೇನೆ‘ ಎಂದು ಅವರು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಉನ್ನತ ರಾಜಕೀಯ ಕಚೇರಿಯಲ್ಲಿದ್ದುಕೊಂಡು ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದು ಮತ್ತು ಭಾರತೀಯ ಮೂಲದ ಪತ್ನಿ ಅಕ್ಷತಾ ಮೂರ್ತಿ ಅವರ ಅನುಚಿತ ತೆರಿಗೆ ಉಳಿತಾಯದ ಆರೋಪಗಳ ಬಳಿಕ ಸುನಕ್ ವಿರುದ್ಧ ಪಾರ್ಟಿಗೇಟ್ ಆರೋಪ ಕೇಳಿಬಂದಿತ್ತು.

ಆ ಬಳಿಕ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ತಾನು ಕಾನೂನುಬದ್ಧವಾಗಿ ಅನುಮತಿಸಲಾದ ತೆರಿಗೆ ವಿನಾಯಿತಿಯನ್ನು ಬಿಟ್ಟು ಸಂಪೂರ್ಣ ತೆರಿಗೆಗಳನ್ನು ಪಾವತಿಸಲು ನಿರ್ಧರಿಸುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT