ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ನ್ಯಾಟೊ ನೆರವಾದರೆ ಅಣ್ವಸ್ತ್ರ ಯುದ್ಧ: ರಷ್ಯಾ ಎಚ್ಚರಿಕೆ

ರಷ್ಯಾ ಭದ್ರತಾ ಮಂಡಳಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ನ್ಯಾಟೊಗೆ ಬೆದರಿಕೆ
Last Updated 13 ಮೇ 2022, 5:28 IST
ಅಕ್ಷರ ಗಾತ್ರ

ಮಾಸ್ಕೊ/ಕೀವ್‌: ‘ನಮ್ಮ ವಿಶೇಷ ಸೇನಾ ಕಾರ್ಯಾಚರಣೆಗೆ ವಿರುದ್ಧವಾಗಿ ನ್ಯಾಟೊ, ಉಕ್ರೇನ್‌ ಬೆಂಬಲಕ್ಕೆ ನಿಂತರೆ ಅಣ್ವಸ್ತ್ರ ಯುದ್ಧ ಎದುರಾಗಲಿದೆ’ ಎಂದು ರಷ್ಯಾ ಭದ್ರತಾ ಮಂಡಳಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಗುರುವಾರ ನೇರ ಎಚ್ಚರಿಕೆ ನೀಡಿದ್ದಾರೆ.

‘ನ್ಯಾಟೊ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ಉಕ್ರೇನಿಗರಿಗೆ ಯುದ್ಧಾಸ್ತ್ರಗಳ ತರಬೇತಿ ಕೊಡುವುದು ನ್ಯಾಟೊ ಮತ್ತು ರಷ್ಯಾ ನಡುವೆ ನೇರ ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸಲಿದೆ. ಈ ಸಂಘರ್ಷವು ಅಣ್ವಸ್ತ್ರ ಯುದ್ಧವಾಗಿ ಬದಲಾಗಬಹುದು’ ಎಂದು ಮೆಡ್ವೆಡೆವ್ ಅವರು ಟೆಲಿಗ್ರಾಮ್‌ನಲ್ಲಿ ಎಚ್ಚರಿಕೆ ನೀಡಿರುವುದಾಗಿ ಉಕ್ರೇನಿನ ಸುದ್ದಿಸಂಸ್ಥೆ ‘ದಿ ಕೀವ್‌ ಇಂಡಿಪೆಂಡೆಂಟ್‌’ ವರದಿ ಮಾಡಿದೆ.

‘ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ತಂದು ಸುರಿಯುತ್ತಿರುವುದು ರಷ್ಯಾದೊಂದಿಗೆ ನ್ಯಾಟೊದ ಸಂಘರ್ಷದ ಸಂಭಾವ್ಯತೆಯನ್ನು ಹೆಚ್ಚಿಸಿದೆ. ಇದು ಅಣ್ವಸ್ತ್ರ ಯುದ್ಧವಾಗಿ ಬೆಳೆಯಬಹುದು. ಹಾಗಾದರೆ ‘ಅದು ಎಲ್ಲರಿಗೂ ದುರಂತದ ಸನ್ನಿವೇಶ’ವಾಗಿರಲಿದೆ’ ಎಂದು ಮೆಡ್ವೆಡೆವ್ ಹೇಳಿದ್ದಾರೆ.

ವಿಟಾಲಿ ಆತಂಕ: ಉಕ್ರೇನ್‌ ರಾಜಧಾನಿ ಕೀವ್‌ ನಗರದ ಮೇಲೆ ರಷ್ಯಾ ಯುದ್ಧತಂತ್ರದ ಅಣ್ವಸ್ತ್ರ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ನಗರದ ಮೇಯರ್‌ ವಿಟಾಲಿ ಕ್ಲಿಟ್‌ಸ್ಕೊ ಗುರುವಾರ ಆತಂಕ ವ್ಯಕ್ತಪಡಿಸಿದ್ದಾರೆ.

‘ಮಧ್ಯಪ್ರವೇಶಿಸಿದರೆ ತಕ್ಕ ಉತ್ತರ’
‘ಸೇನಾ ಕಾರ್ಯಾಚರಣೆಯಲ್ಲಿ ಯಾವುದೇ ರಾಷ್ಟ್ರ ಮಧ್ಯಪ್ರವೇಶಿಸುವ ದುಸ್ಸಾಹಸ ಮಾಡಿದರೆ, ತಕ್ಕ ಪ್ರತ್ಯುತ್ತರ ನೀಡಲು ಮಾಸ್ಕೊ ಸಿದ್ಧವಾಗಿದೆ’ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಅವರ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಕೂಡಗುರುವಾರ ಗಂಭೀರ ಎಚ್ಚರಿಕೆ ನೀಡಿದ್ದಾರೆ.

‘ರಷ್ಯಾದ ಸಶಸ್ತ್ರ ಪಡೆಗಳು ಫೆಬ್ರುವರಿ 24ರಿಂದ ಉಕ್ರೇನ್‌ನಲ್ಲಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಯಾರೇ ಅಡ್ಡಿಪಡಿಸಿದರೂ ಅಥವಾ ಮಧ್ಯಪ್ರವೇಶಿಸಿದರೂ ಇತಿಹಾಸದಲ್ಲಿ ಕಂಡರಿಯದ ಪರಿಣಾಮ ಎದುರಿಸಬೇಕಾದೀತು ಎಂದು ಪುಟಿನ್ ಎಚ್ಚರಿಕೆ ನೀಡಿದ್ದರು. ಅಧ್ಯಕ್ಷರ ಈ ಹೇಳಿಕೆ ಎಲ್ಲರಿಗೂ ನೆನಪಿರಬಹುದು. ಅಧ್ಯಕ್ಷರ ಹೇಳಿಕೆಯಂತೆ ತಕ್ಕ ಪ್ರತ್ಯುತ್ತರ ಕೊಡಲು ನಾವು ಸಿದ್ಧರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕ್ಷಿಪಣಿ ದಾಳಿ: ಮೂವರ ಸಾವು
ಚೆರ್ನಿವ್‌ನ ನೊವ್ಹೊರೊಡ್ ಸಿವರ್‌ಸ್ಕಿಯ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಪಟ್ಟಣದ ಶೈಕ್ಷಣಿಕ ಸೌಲಭ್ಯಗಳನ್ನು ಗುರಿಯಾಗಿಸಿ ಗುರುವಾರ ರಾತ್ರಿಯಿಡೀ ಹಲವು ಕ್ಷಿಪಣಿಗಳನ್ನು ರಷ್ಯಾ ಸೇನೆ ಉಡಾಯಿಸಿದೆ ಎಂದು ಉತ್ತರದ ಕಾರ್ಯಾಚರಣೆಯ ಕಮಾಂಡ್‌ ಹೇಳಿದೆ.

ಸುಮಿ ಪ್ರಾಂತ್ಯದ ಮೇಲೆ 20 ಬಾರಿ ಶೆಲ್‌ ದಾಳಿ ನಡೆಸಿದ್ದು, ನೊವಿ ವಿರ್ಕಿ ಗ್ರಾಮದಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂದು ಗವರ್ನರ್‌ ಡಿಮಿಟ್ರೊ ಝೈವಿಟ್‌ಸ್ಕಿ ತಿಳಿಸಿದ್ದಾರೆ.

***

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಅಥವಾ ಕದನ ವಿರಾಮ ಘೋಷಣೆಯ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ.
-ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT