ಮಂಗಳವಾರ, ಆಗಸ್ಟ್ 9, 2022
23 °C

ವಿಶ್ವದ ಅತಿದೊಡ್ಡ ಉಗ್ರ ಸಂಘಟನೆ ರಷ್ಯಾ: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಆಕ್ರೋಶ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೀವ್‌: ರಷ್ಯಾ ದೇಶ ವಿಶ್ವದ ಅತಿದೊಡ್ಡ ಉಗ್ರ ಸಂಘಟನೆಯಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಉಕ್ರೇನ್‌ನ ಪ್ರಮುಖ ನಗರವಾದ ಕ್ರೆಮೆನ್ಚುಕ್‌ನ ಶಾಪಿಂಗ್‌ ಮಾಲ್‌ ಮೇಲೆ ರಷ್ಯಾ ಸೇನೆ ಸೋಮವಾರ ಸಂಜೆ ನಡೆಸಿದ ಕ್ಷಿಪಣಿ ದಾಳಿಯನ್ನು ಖಂಡಿಸಿ ಅವರು ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಳಿ ಕುರಿತು ತಾವು ಮಾತನಾಡಿರುವ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಝೆಲೆನ್‌ಸ್ಕಿ, 'ರಷ್ಯಾ ದೇಶವು ವಿಶ್ವದ ಅತಿದೊಡ್ಡ ಭಯೋತ್ಪಾದಕ ಸಂಘಟನೆಯಾಗಿದೆ. ಇದು ಸತ್ಯ ಮತ್ತು ಇದು ಅಧಿಕೃತವಾಗಿ ದಾಖಲಾಗಬೇಕು. ರಷ್ಯಾದಿಂದ ತೈಲ ಖರೀದಿಸುವುದು ಅಥವಾ ಸರಬರಾಜು ಮಾಡುವುದು, ರಷ್ಯಾದ ಬ್ಯಾಂಕುಗಳೊಂದಿಗೆ ಸಂಪರ್ಕದಲ್ಲಿರುವುದು, ತೆರಿಗೆ ಕಟ್ಟುವುದು ಮತ್ತು ಅಬಕಾರಿ ಸುಂಕ ಪಾವತಿಸುವುದು ಭಯೋತ್ಪಾದಕರಿಗೆ ಹಣ ನೀಡಿದಂತೆಯೇ ಎಂಬುದನ್ನು ಪ್ರಪಂಚದ ಪ್ರತಿಯೊಬ್ಬರೂ ತಿಳಿಯಬೇಕು' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 

'ಕ್ರೆಮೆನ್ಚುಕ್‌ನ ಶಾಪಿಂಗ್‌ ಸೆಂಟರ್‌ ಮೇಲೆ ರಷ್ಯಾ ನಡೆಸಿದ ಈ ದಾಳಿಯು ಯುರೋಪ್‌ ಇತಿಹಾಸದಲ್ಲಿಯೇ ಅತ್ಯಂತ ಲಜ್ಜೆಗೇಡಿ ಭಯೋತ್ಪಾದಕ ಕೃತ್ಯಗಳಲ್ಲಿ ಒಂದಾಗಿದೆ. ಶಾಂತಿಯುತವಾಗಿದ್ದ ನಗರದ ಸಾಮಾನ್ಯ ಶಾಪಿಂಗ್‌ ಮಾಲ್‌ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಜನಸಾಮಾನ್ಯ ಇದ್ದರು. ರಷ್ಯಾ ದಾಳಿಯ ಎಚ್ಚರಿಕೆ ಲಭಿಸುವ ಮುನ್ನ ಸಾವಿರಾರು ಜನರು ಅದರೊಳಗೆ ಇದ್ದರು. ಅದೃಷ್ಟವಶಾತ್‌, ಸಾಕಷ್ಟು ಜನರನ್ನು ಸರಿಯಾದ ಸಮಯಕ್ಕೆ ಹೊರಗೆ ಕರೆತರಲು ಸಾಧ್ಯವಾಯಿತು. ಆದರೂ, ಸಿಬ್ಬಂದಿ ಸೇರಿದಂತೆ ಇನ್ನಷ್ಟು ಜನರು ಅಲ್ಲೇ ಉಳಿದಿದ್ದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಇದೇನು ಅಚಾನಕ್ಕಾಗಿ ಸಂಭವಿಸಿದ ದುರಂತವಲ್ಲ. ರಷ್ಯಾದ ಯೋಜಿತ ದಾಳಿ' ಎಂದು ಆರೋಪಿಸಿರುವ ಝೆಲೆನ್‌ಸ್ಕಿ, ಸಂತ್ರಸ್ತರ ಸಂಖ್ಯೆಯನ್ನು ಊಹಿಸುವುದೂ ಅಸಾಧ್ಯ ಎಂದಿದ್ದಾರೆ.

ದಾಳಿ ವೇಳೆ ಕನಿಷ್ಠ 16 ಮಂದಿ ಮೃತಪಟ್ಟಿದ್ದು 59 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಲ್ಲಿನ ತುರ್ತು ಸೇವೆಗಳ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಲ್‌ ಹೊತ್ತಿ ಉರಿಯುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು