ಮಾಸ್ಕೊ/ಕೀವ್ (ಎಪಿ): ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣದ ನಡುವೆಯೇ, ಅಮೆರಿಕ ಸೇರಿ ಪಶ್ಚಿಮದ ರಾಷ್ಟ್ರಗಳು ಈ ಸಂಘರ್ಷದಲ್ಲಿ ನೇರ ಭಾಗಿಯಾಗುವುದರ ವಿರುದ್ಧ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಲು ರಷ್ಯಾ ಬುಧವಾರ ಅಣ್ವಸ್ತ್ರ ಕ್ಷಿಪಣಿ ಪಡೆಗಳ ತಾಲೀಮು ಆರಂಭಿಸಿದೆ.
ಈ ತಾಲೀಮಿನ ಭಾಗವಾಗಿ ಸೈಬೀರಿಯಾದ ಮೂರು ಪ್ರದೇಶಗಳಲ್ಲಿ ಯಾರ್ಸ್ ಅಣ್ವಸ್ತ್ರ ಕ್ಷಿಪಣಿಗಳ ಉಡಾವಣೆಯ ಮೊಬೈಲ್ ಲಾಂಚರ್ ನಿಯೋಜಿಸಲಾಗಿದೆ. ಯಾರ್ಸ್ ಅಣ್ವಸ್ತ್ರ ಸಜ್ಜಿತ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು ಸುಮಾರು 11 ಸಾವಿರ ಕಿ.ಮೀ ದೂರದ ಗುರಿ ತಲುಪುತ್ತದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧತಂತ್ರದ ಅಣ್ವಸ್ತ್ರಗಳನ್ನು ಬೆಲಾರೂಸ್ ಮತ್ತು ರಷ್ಯಾದ ನೆರೆಯ ಮತ್ತು ಮಿತ್ರ ರಾಷ್ಟ್ರಗಳ ರಕ್ಷಣೆಗೆ ನಿಯೋಜಿಸುವ ಯೋಜನೆ ಘೋಷಿಸಿದ ಕೆಲವೇ ದಿನಗಳಲ್ಲಿ ಅಣ್ವಸ್ತ್ರ ಕ್ಷಿಪಣಿ ಪಡೆಗಳ ಬೃಹತ್ ತಾಲೀಮು ಆರಂಭವಾಗಿದೆ.
ಈ ತಾಲೀಮಿನಲ್ಲಿ 300 ಸೇನಾ ವಾಹನಗಳು ಮತ್ತು ಮೂರು ಸಾವಿರ ತುಕಡಿಗಳು ಪಾಲ್ಗೊಂಡಿದ್ದವು.
ರಷ್ಯಾ ಗೆಲುವು ಅಪಾಯಕಾರಿ: ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರು ಉಕ್ರೇನ್‌ಗೂ ಭೇಟಿ ನೀಡಲಿ. ಅವರನ್ನು ಸ್ವಾಗತಿಸಲು ಸಿದ್ಧವಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ಆಹ್ವಾನ ನೀಡಿದ್ದಾರೆ.
ಇತ್ತೀಚೆಗಷ್ಟೇ ರಷ್ಯಾಕ್ಕೆ ಭೇಟಿ ನೀಡಿ ವ್ಲಾಡಿಮಿರ್ ಪುಟಿನ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಷಿ ಜಿನ್ ಪಿಂಗ್ ಅವರಿಗೆ ಝೆಲೆನ್‌ಸ್ಕಿ ಅವರು ‘ದಿ ಅಸೋಸಿಯೇಟೆಡ್ ಪ್ರೆಸ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಹ್ವಾನ ಕೊಟ್ಟಿದ್ದಾರೆ.
ಉಕ್ರೇನ್, ಸ್ವೀಕಾರಾರ್ಹವಲ್ಲದ ರಾಜಿ ಮಾಡಿಕೊಳ್ಳುವಂತೆ ಅಗತ್ಯವಿರುವ ಒಪ್ಪಂದಕ್ಕೆ ಬರುವಂತೆ ಮಾಡಲು ಪುಟಿನ್ ಅಂತರರಾಷ್ಟ್ರೀಯ ಬೆಂಬಲ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಝೆಲೆನ್‌ಸ್ಕಿ ಬುಧವಾರ ಎಚ್ಚರಿಸಿದ್ದಾರೆ.
ಉಕ್ರೇನ್ ಪ್ರಮುಖ ಪೂರ್ವ ನಗರದಲ್ಲಿ ಗೆಲುವು ಸಾಧಿಸದೇ ರಷ್ಯಾ ಏನಾದರೂ ಗೆಲುವು ಸಾಧಿಸಿದರೆ ಅದು ಮುಂದೆ ಅತ್ಯಂತ ಅಪಾಯ ಸೃಷ್ಟಿಸಲಿದೆ. ಬಖ್ಮಟ್ ಪಟ್ಟಣವು ರಷ್ಯಾ ಪಡೆಗಳಿಗೆ ಶರಣಾದರೆ, ಪುಟಿನ್ ಈ ವಿಜಯವನ್ನು ಪಶ್ಚಿಮಕ್ಕೆ, ಅವರ ಸಮಾಜಕ್ಕೆ, ಚೀನಾಕ್ಕೆ, ಇರಾನ್‌ಗೆ ಮಾರಾಟ ಮಾಡುತ್ತಾರೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.