ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲೆ ಭಾರಿ ಕ್ಷಿಪಣಿ ದಾಳಿ

120 ಕ್ಷಿಪಣಿಗಳನ್ನು ಉಡಾಯಿಸಿದ ರಷ್ಯಾ; ಸುಮಾರು 59 ಕ್ಷಿಪಣಿ ಹೊಡೆದುರುಳಿಸಿದ ಉಕ್ರೇನ್‌
Last Updated 29 ಡಿಸೆಂಬರ್ 2022, 16:48 IST
ಅಕ್ಷರ ಗಾತ್ರ

ಕೀವ್‌/ಮಾಸ್ಕೊ/ಬೆಲರೂಸ್‌ (ಎಪಿ/ರಾಯಿಟರ್ಸ್‌/ಎಎಫ್‌ಪಿ): ಉಕ್ರೇನ್‌ನ ಅಭೇದ್ಯ ಕೋಟೆ, ರಾಜಧಾನಿ ಕೀವ್‌ ನಗರ ಸಹಿತ ದೇಶದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಾವರಗಳು ಮತ್ತು ಪ್ರಮುಖ ಮೂಲಸೌಕರ್ಯಗಳು ಗುರುವಾರ ರಷ್ಯಾದ ಭಾರಿ ಕ್ಷಿಪಣಿಗಳ ದಾಳಿಗೆ ಗುರಿಯಾದವು.

ರಷ್ಯಾ ಪಡೆಗಳ ಈ ಭೀಕರ ದಾಳಿ ತೀವ್ರ ಚಳಿಗಾಲದಿಂದ ತತ್ತರಿಸಿರುವ ಯುದ್ಧಪೀಡಿತ ದೇಶದ ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸಿದೆ. ಶೇ 40ರಷ್ಟು ವಿದ್ಯುತ್‌, ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ಪ್ರಾದೇಶಿಕ ಆಡಳಿತದ ಪ್ರಕಾರ,ಕೀವ್‌ನಲ್ಲಿ ವಾಯು ದಾಳಿಯ ರಕ್ಷಣಾ ವ್ಯವಸ್ಥೆಗಳನ್ನು ಗುರುವಾರ ಸಕ್ರಿಯಗೊಳಿಸಲಾಯಿತು. ನಗರದಲ್ಲಿ ಸ್ಫೋಟಗಳ ಶಬ್ಧ ಕೇಳಿಬಂದಿತು.ಹಾರ್ಕಿವ್‌ ಮತ್ತು ಪೋಲೆಂಡ್‌ ಗಡಿಯ ಸಮೀಪದ ಲುವಿವ್, ಕೆರ್ಸಾನ್‌ ಹಾಗೂ ಒಡೆಸ್ಸಾ ನಗರಗಳಲ್ಲಿ ಹಲವು ಬಾರಿ ಸ್ಫೋಟಗಳು ನಡೆದವು. ಕೀವ್‌, ಸುಮಿ ಮತ್ತು ಮೇಲೆ ತೂರಿ ಬಂದ ಬಹುತೇಕ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ.

ವಾಯು ದಾಳಿಯ ಎಚ್ಚರಿಕೆಯ ಸೈರನ್‌ಗಳು ದೇಶದಾದ್ಯಂತ ಧ್ವನಿಸಿದವು. ರಷ್ಯಾ ಪಡೆಗಳು ಸುಮಾರು 120 ಕ್ಷಿಪಣಿಗಳನ್ನು ಒಂದೇ ದಿನದಲ್ಲಿ ಉಡಾಯಿಸಿವೆ. ತಕ್ಷಣಕ್ಕೆ ಸಾವು–ನೋವಿನ ವರದಿ ಸಿಕ್ಕಿಲ್ಲ.ನಿರ್ಣಾಯಕ ಮೂಲಸೌಕರ್ಯ ನಾಶಪಡಿಸುವ ಮತ್ತು ನಾಗರಿಕರ ಸಾಮೂಹಿಕ ಹತ್ಯೆಯ ಗುರಿಯನ್ನು ರಷ್ಯಾ ಹೊಂದಿದೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಸಲಹೆಗಾರ ಮಿಖಾಯಿಲೊ ಪೊಡೊಲಿಯಾಕ್‌ ದೂರಿದರು.

ಬೆಳಿಗ್ಗೆ ಕಾರ್ಯತಂತ್ರದ ವಿಮಾನ ಮತ್ತು ಹಡಗುಗಳಿಂದ ವಾಯು ಮತ್ತು ಸಮುದ್ರದ ಮೂಲಕ ಕ್ರೂಸ್ ಕ್ಷಿಪಣಿಗಳ ದಾಳಿ ನಡೆಯಿತು. ಸುಮಾರು 59 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ.ರಷ್ಯಾ ಪಡೆಗಳು ಬುಧವಾರ ರಾತ್ರಿಯಿಡೀ ಆಯ್ದ ಪ್ರದೇಶಗಳ ಮೇಲೆಸ್ಫೋಟಕ ಡ್ರೋನ್‌ಗಳಿಂದ ದಾಳಿ ಮಾಡಿವೆ ಎಂದು ಉಕ್ರೇನ್‌ ವಾಯುಪಡೆ ಹೇಳಿದೆ.

ದೇಶದ ಬ್ರೆಸ್ಟ್ ಗಡಿ ಪ್ರದೇಶದಲ್ಲಿ ಉಕ್ರೇನ್‌ನ ಎಸ್ -300 ಕ್ಷಿಪಣಿಯನ್ನು ತಮ್ಮ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಗುರುವಾರ ಬೆಳಿಗ್ಗೆ ಹೊಡೆದುರುಳಿಸಿದೆ ಎಂದು ಬೆಲರೂಸ್‌ ರಕ್ಷಣಾ ಸಚಿವಾಲಯದ ಮಾಹಿತಿ ಉಲ್ಲೇಖಿಸಿ ಸರ್ಕಾರಿ ಸುದ್ದಿ ಸಂಸ್ಥೆ ‘ಬೆಲ್ಟಾ’ವರದಿ ಮಾಡಿದೆ.

ಅಮೆರಿಕವು ಪೇಟ್ರಿಯಾಟ್‌ ಕ್ಷಿಪಣಿಗಳನ್ನು ಉಕ್ರೇನ್‌ಗೆ ಪೂರೈಸಿದ ಬೆನ್ನಲ್ಲೇ ರಷ್ಯಾವು ಉಕ್ರೇನ್‌ ಗಡಿಗೆ ಹತ್ತಿರದ ತನ್ನ ಏಂಗೆಲ್ಸ್‌ ವಾಯು ನೆಲೆಯಲ್ಲಿ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಳಿಸಿತು. ಈ ವಾಯು ನೆಲೆಯಲ್ಲಿ ರಷ್ಯಾ ತನ್ನ ಕಾರ್ಯತಂತ್ರದ ಯುದ್ಧ ವಿಮಾನಗಳನ್ನು ನೆಲೆಗೊಳಿಸಿದೆ.

ಉಕ್ರೇನ್ ಸೇನೆ ಇತ್ತೀಚೆಗೆ ವಿಮೋಚನೆಗೊಳಿಸಿದ ದಕ್ಷಿಣದ ಕೆರ್ಸಾನ್‌ ನಗರವು ನಿಪ್ರೊ ನದಿಯ ದಂಡೆಗುಂಟ ಬೀಡು ಬಿಟ್ಟಿರುವ ರಷ್ಯಾ ಪಡೆಗಳಿಂದ ಮಾರ್ಟರ್‌ ಮತ್ತು ಶೆಲ್‌ ದಾಳಿಗೆ ತುತ್ತಾಯಿತು.

ಇತ್ತೀಚೆಗೆಸ್ವಾಧೀನಪಡಿಸಿಕೊಂಡ ನಾಲ್ಕು ಪ್ರದೇಶಗಳು ಒಳಗೊಂಡ ಗಡಿ ಸಾರ್ವಭೌಮತ್ವ ಒಪ್ಪಿಕೊಳ್ಳದೇ ಯಾವುದೇ ಶಾಂತಿ ಮಾತುಕತೆ ಸಾಧ್ಯವಿಲ್ಲವೆಂದು ರಷ್ಯಾ, ಉಕ್ರೇನ್‌ನ ಶಾಂತಿ ಮಾತುಕತೆಯ ಪ್ರಸ್ತಾವ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT