ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಸಂಘರ್ಷ: ಕಲಿಬ್ ಕ್ಷಿಪಣಿಗೆ ಸೇನಾ ಕಾರ್ಖಾನೆ ಧ್ವಂಸ

ಮುಳುಗಿದ ‘ಮೊಸ್ಕವಾ’ ಸಮರ ನೌಕೆ l ತೀವ್ರಗೊಂಡ ರಷ್ಯಾದ ಪ್ರತೀಕಾರ l 3ನೇ ವಿಶ್ವಸಮರಕ್ಕೆ ಮುನ್ನುಡಿ?
Last Updated 16 ಏಪ್ರಿಲ್ 2022, 4:54 IST
ಅಕ್ಷರ ಗಾತ್ರ

ಮಾಸ್ಕೊ:ರಷ್ಯಾ ಪಡೆಗಳು ಸಮುದ್ರದಿಂದ ಉಡಾಯಿಸುವ ದೀರ್ಘ ಶ್ರೇಣಿಯಕಲಿಬ್‌ ಕ್ಷಿಪಣಿಗಳನ್ನು ಬಳಸಿ ಕೀವ್‌ ಹೊರ ವಲಯದ ವಿಶ್ನೆವೆ ಪಟ್ಟಣದಲ್ಲಿನ ಉಕ್ರೇನ್‌ ಸೇನಾ ಸಾಧನಗಳ ಕಾರ್ಖಾನೆಯನ್ನು ಗುರುವಾರ ತಡರಾತ್ರಿ ಧ್ವಂಸಗೊಳಿಸಿವೆ.

‘ವಿಜಾರ್’ ಕಂಪನಿಯ ರಕ್ಷಣಾ ಉಪಕರಣ ತಯಾರಿಕೆಯ ಸಂಕೀರ್ಣದಲ್ಲಿರುವ ಕಾರ್ಖಾನೆ ಧ್ವಂಸವಾಗಿದೆ. ವಿಮಾನ ಹೊಡೆದುರುಳಿಸುವದೀರ್ಘ ಶ್ರೇಣಿಯ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳ ಉತ್ಪಾದನೆ ಮತ್ತು ದುರಸ್ತಿ ಕಾರ್ಯಾಗಾರ ಹಾಗೂ ಹಡಗು ಹೊಡೆದುರುಳಿಸುವ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ರಷ್ಯಾದ ಕಪ್ಪು ಸಮುದ್ರದ ನೌಕಾ ಪಡೆಯ ಯುದ್ಧನೌಕೆ ‘ಮಾಸ್ಕವಾ’ ಮೇಲೆ ಉಕ್ರೇನ್‌ ಪ್ರಯೋಗಿಸಿರುವ ನೆಪ್ಚೂನ್‌ ಕ್ಷಿಪಣಿಗಳನ್ನುಈ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿತ್ತು.

ಬ್ರಿಯಾನ್‌ಸ್ಕ್‌ ಪ್ರಾಂತ್ಯದ ಕಿಮೊವೊದಲ್ಲಿ ಗುರುವಾರ ನಾಗರಿಕರ ಮೇಲೆ ಬಾಂಬ್‌ ದಾಳಿ ನಡೆಸಿದ್ದ ಉಕ್ರೇನಿನ ಎಂಐ–8 ಹೆಲಿಕಾಪ್ಟರ್‌ ಅನ್ನು ಎಸ್‌–400 ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ ಎಂದು ಅದು ಹೇಳಿದೆ.

‘ಹಾರ್ಕಿವ್ ನಗರ ಸಮೀಪದ ಇಝಿಯುಮ್‌ಸ್ಕೊ ಗ್ರಾಮದಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಪೋಲೆಂಡ್‌ನ 30 ಬಾಡಿಗೆ ಸೈನಿಕರು ಹತರಾಗಿದ್ದಾರೆಎಂದು ಪ್ರತ್ಯೇಕ ಹೇಳಿಕೆಯಲ್ಲಿ ಅದು ತಿಳಿಸಿದೆ.

ಗಡಿ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಕ್ಕೆ ಮತ್ತು ‘ಮಾಸ್ಕವಾ’ ನೌಕೆ ಮುಳುಗಿಸಿದಕ್ಕೆ ಪ್ರತೀಕಾರವಾಗಿ ಕೀವ್‌ ಮೇಲೆ ಕ್ಷಿಪಣಿ ದಾಳಿ ತೀವ್ರಗೊಳಿಸುವುದಾಗಿ ರಷ್ಯಾ ಶುಕ್ರವಾರ ಎಚ್ಚರಿಕೆ ನೀಡಿದೆ.

ಫಿನ್ಲೆಂಡ್‌, ಸ್ವೀಡನ್‌ಗೆ ಎಚ್ಚರಿಕೆ: ಫಿನ್ಲೆಂಡ್‌ ಮತ್ತು ಸ್ವೀಡನ್‌ ನ್ಯಾಟೊ ಸೇರಿದರೆ ಅವು ಊಹಿಸಲಾಗದಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಶುಕ್ರವಾರ ಕಠಿಣ ಎಚ್ಚರಿಕೆ ನೀಡಿದೆ.

ನೆರೆಯ ರಾಷ್ಟ್ರ ಉಕ್ರೇನ್ ಮೇಲೆ ರಷ್ಯಾದ ವಿನಾಶಕಾರಿ ಆಕ್ರಮಣದ ನಂತರ ಉಭಯ ದೇಶಗಳು ನ್ಯಾಟೊ ಸೇರಲು ಮುಂದಾಗಿವೆ.

‘ಆಯ್ಕೆ ಸ್ವೀಡನ್ ಮತ್ತು ಫಿನ್ಲೆಂಡ್‌ ಅಧಿಕಾರಿಗಳಿಗೆ ಬಿಟ್ಟದ್ದು’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.‘ಉಕ್ರೇನ್‌ಗೆ ಶಸ್ತ್ರಾಸ್ತ್ರ ಕೊಡಬೇಡಿ’

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ಸ್ಥಗಿತಗೊಳಿಸಬೇಕೆಂದು ರಷ್ಯಾ ಅಮೆರಿಕಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದೆ.

ರಷ್ಯಾ ಕಳುಹಿಸಿದ ರಾಜತಾಂತ್ರಿಕ ಟಿಪ್ಪಣಿಯ ಪ್ರತಿಯನ್ನು ಅಮೆರಿಕ ಸ್ವೀಕರಿಸಿದೆ. ಅಮೆರಿಕ ಮತ್ತು ನ್ಯಾಟೊ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದು ಊಹಿಸಲಾಗದ ಪರಿಣಾಮಕ್ಕೆ ದಾರಿ ಮಾಡಿಕೊಡಲಿದೆ ಎಂದು ರಷ್ಯಾ ಎಚ್ಚರಿಕೆ ನೀಡಿರುವುದಾಗಿ ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

25 ದೇಶಗಳಿಂದ ಶಸ್ತ್ರಾಸ್ತ್ರ ಪೂರೈಕೆ: ನ್ಯಾಟೊದ 21 ದೇಶಗಳು ಸೇರಿ 25 ರಾಷ್ಟ್ರಗಳಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿರುವುದಾಗಿ ‘ಟಾಸ್‌’ ಸುದ್ದಿ ಸಂಸ್ಥೆವರದಿ ಮಾಡಿದೆ.

ಸೆರೆ ಸಿಕ್ಕಿರುವ ಬ್ರಿಟನ್‌ ಪ್ರಜೆ ಐಡೆನ್‌ ಆಸ್ಲಿನ್‌ ಸೇರಿ ಅಮೆರಿಕ, ಬ್ರಿಟನ್‌, ನಾರ್ವೆ ಮತ್ತು ಕೆನಡಾದ ಬಾಡಿಗೆ ಸೈನಿಕರು ಸಂಘರ್ಷದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಇವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ತನಿಖಾ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT