ಶುಕ್ರವಾರ, ಮೇ 27, 2022
21 °C
‘ಯುರೋಪ್‌ನ ಒಂದು ಅಪರಾಹ್ನದ ಖರೀದಿಗಿಂತ ಭಾರತದ ತಿಂಗಳ ಆಮದಿನ ಪ್ರಮಾಣ ಕಡಿಮೆ’

ರಷ್ಯಾ ತೈಲ: ಜೈಶಂಕರ್‌ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ರಷ್ಯಾದಿಂದ ಭಾರತವು ಒಂದು ತಿಂಗಳಲ್ಲಿ ಖರೀದಿಸುವ ತೈಲದ ಪ್ರಮಾಣವು ಯುರೋಪ್‌ ಒಂದು ಅಪರಾಹ್ನದ ಹೊತ್ತಿಗೆ ಖರೀದಿಸುವ ತೈಲಕ್ಕಿಂತ ಕಡಿಮೆ ಇರಬಹುದು ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಹೇಳಿದ್ದಾರೆ. ರಷ್ಯಾದಿಂದ ಭಾರತವು ತೈಲ ಖರೀದಿಸುತ್ತಿರುವುದರ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. 

‘ತೈಲ ಖರೀದಿಯನ್ನು ನೀವು ಉಲ್ಲೇಖಿಸಿದ್ದನ್ನು ಗಮನಿಸಿದ್ದೇನೆ. ರಷ್ಯಾದಿಂದ ತೈಲ ಖರೀದಿಯ ಕುರಿತು ನಿಮ್ಮ ‌ಪ್ರಶ್ನೆಯಾಗಿದ್ದರೆ, ಯುರೋಪ್‌ನತ್ತ ಗಮನ ಕೇಂದ್ರೀಕರಿಸಿ ಎಂಬುದು ನನ್ನ ಸಲಹೆ. ನಾವು ಇಂಧನ ಖರೀದಿ ಮಾಡುತ್ತಿದ್ದೇವೆ. ಅದು ನಮ್ಮ ಇಂಧನ ಸುರಕ್ಷತೆಗೆ ಅಗತ್ಯವೂ ಹೌದು. ಅಂಕಿ ಸಂಖ್ಯೆಯನ್ನು ಗಮನಿಸಿದರೆ, ನಾವು ಒಂದು ತಿಂಗಳಲ್ಲಿ ಖರೀದಿಸುವ ತೈಲದ ಪ್ರಮಾಣವು ಯುರೋಪ್‌ ಒಂದು ಅಪರಾಹ್ನದಲ್ಲಿ ಖರೀದಿಸುವ ತೈಲದ ಪ್ರಮಾಣಕ್ಕಿಂತ ಕಡಿಮೆ ಇರಬಹುದು’ ಎಂದು ಜೈಶಂಕರ್‌ ಹೇಳಿದ್ದಾರೆ. 

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌, ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರ ಜತೆಗೆ ಮಾಧ್ಯಮಗೋಷ್ಠಿ ನಡೆಸಿ ಜೈಶಂಕರ್‌ ಮಾತನಾಡಿದರು. 

‘ಭಾರತದ ನಿಲುವು (ರಷ್ಯಾ–ಉಕ್ರೇನ್‌ ಯುದ್ಧ) ಏನು ಎಂಬುದನ್ನು ಸ್ಪಷ್ಟಪಡಿಸುವ ಹಲವು ಹೇಳಿಕೆಗಳನ್ನು ವಿಶ್ವಸಂಸ್ಥೆ, ಭಾರತದ ಸಂಸತ್ತು ಮತ್ತು ಇತರ ವೇದಿಕೆಗಳಲ್ಲಿ ನೀಡಲಾಗಿದೆ. ನಾವು ಸಂಘರ್ಷದ ವಿರುದ್ಧ ಇದ್ದೇವೆ ಎಂಬುದೇ ಆ ನಿಲುವು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರ ನಾವು ಇದ್ದೇವೆ. ಈ ಉದ್ದೇಶಗಳಿಗಾಗಿ ಯಾವುದೇ ರೀತಿಯ ಕೊಡುಗೆ ನೀಡಲು ಸಿದ್ಧರಿದ್ದೇವೆ’ ಎಂದು ಜೈಶಂಕರ್‌ ಹೇಳಿದರು. 

ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಅಮೆರಿಕ ಸರ್ಕಾರ ಕೂಡ ಭಾರತದ ಬೆಂಬಲಕ್ಕೆ ನಿಂತಿದೆ. ರಷ್ಯಾದಿಂದ ಭಾರತ ಖರೀದಿಸುತ್ತಿರುವ ತೈಲದ ಪ್ರಮಾಣವು ಒಟ್ಟು ಬಳಕೆಯ ಶೇ 2ಕ್ಕಿಂತ ಕಡಿಮೆ ಇದೆ. ಅಮೆರಿಕದಿಂದ ಶೇ 10ರಷ್ಟು ಖರೀದಿಸಲಾಗುತ್ತಿದೆ ಎಂದು ಅಮೆರಿಕ ಹೇಳಿದೆ. 

ತೈಲ ಆಮದು ಮೂಲಗಳನ್ನು ವಿಸ್ತರಿಸಲು ಭಾರತಕ್ಕೆ ಅಮೆರಿಕ ನೆರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ ನಡೆಸಿದ ವರ್ಚುವಲ್‌ ಸಭೆಯಲ್ಲಿ ಬೈಡನ್‌ ಹೀಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು