ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಕ್ಷಿಪಣಿ ದಾಳಿ: 50 ನಾಗರಿಕರು ಸಾವು, ನೂರಕ್ಕೂ ಹೆಚ್ಚು ಜನರಿಗೆ ಗಾಯ

Last Updated 8 ಏಪ್ರಿಲ್ 2022, 18:46 IST
ಅಕ್ಷರ ಗಾತ್ರ

ಕ್ರಾಮರೊಸ್ಕಿ(ಉಕ್ರೇನ್‌):ಉಕ್ರೇನ್‌ನ ಪೂರ್ವದಲ್ಲಿನಾಗರಿಕರನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಕ್ರಾಮರೊಸ್ಕಿ ರೈಲು ನಿಲ್ದಾಣದ ಮೇಲೆ ಶುಕ್ರವಾರ ನಡೆದ ರಾಕೆಟ್ ದಾಳಿಯಲ್ಲಿ 50 ನಾಗರಿಕರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

‘ಒಂದೇ ಕಡೆ 20 ಶವಗಳ ರಾಶಿ ಬಿದ್ದಿರುವುದನ್ನು ಮತ್ತು ಇನ್ನೊಂದು ಕಡೆ ಪ್ಲಾಸ್ಟಿಕ್‌ ಕವರ್‌ನಿಂದ ಮುಚ್ಚಿರುವ ಶವಗಳು ಬಿದ್ದಿರುವುದನ್ನು ನೋಡಿದೆ. ನಂತರ ಆ ಶವಗಳನ್ನು ಸೇನಾ ವಾಹನಗಳಿಗೆ ತುಂಬುತ್ತಿರುವುದು ಕಾಣಿಸಿತು’ ಎಂದು ‘ಎಎಫ್‌ಪಿ’ ಪ್ರತಿನಿಧಿ ತಿಳಿಸಿದರು.

ನಿಲ್ದಾಣದ ಬಳಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಸುಟ್ಟು ಕರಕಲಾಗಿವೆ. ದೊಡ್ಡ ಕಟ್ಟಡದ ಪಕ್ಕದಲ್ಲಿ ರಷ್ಯನ್‌ ಭಾಷೆಯಲ್ಲಿ ಬರೆದಿರುವ ‘ನಮ್ಮ ಮಕ್ಕಳಿಗಾಗಿ’ ಎಂಬ ಪದಗಳಿರುವಕ್ಷಿಪಣಿಯ ಅವಶೇಷಗಳು ಚದುರಿ ಬಿದ್ದಿದ್ದವು ಎಂದು ಅವರು ತಿಳಿಸಿದರು.

ರಷ್ಯಾದಿಂದ ಕ್ಷಿಪಣಿ ದಾಳಿ ನಡೆಯುವಾಗ ರೈಲು ನಿಲ್ದಾಣದಲ್ಲಿ ಸುಮಾರು ನಾಲ್ಕು ಸಾವಿರ ಜನರು ಸ್ಥಳಾಂತರಕ್ಕಾಗಿ ಕಾಯುತ್ತಿದ್ದರು. ಅದರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರೇ ಹೆಚ್ಚಿದ್ದರು ಎಂದು ಮೇಯರ್‌ ಒಲೆಕ್ಸಾಂಡರ್‌ ಗನ್‌ಶೆರಂಕಾ ತಿಳಿಸಿರುವುದಾಗಿ ‘ರಾಯಿಟರ್ಸ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಕ್ಕೂ ಮೊದಲು, ಉಕ್ರೇನ್‌ನ ರೈಲ್ವೆ ಕಂಪನಿಯ ಮುಖ್ಯಸ್ಥ ಅಲೆಕ್ಸಾಂಡರ್ ಕಮಿಶಿನ್, ‘ನಿಲ್ದಾಣಕ್ಕೆ ಎರಡು ಕ್ಷಿಪಣಿಗಳು ಬಂದು ಅಪ್ಪಳಿಸಿವೆ. ಹಲವು ನಾಗರಿಕರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರು.

‘ಇದು ರೈಲ್ವೆ ಮೂಲಸೌಕರ್ಯಗಳನ್ನು ನಾಶಪಡಿಸಲು, ಕ್ರಾಮರೊಸ್ಕಿ ನಿವಾಸಿಗಳು ಹಾಗೂ ರೈಲು ಪ್ರಯಾಣಿಕರನ್ನು ಗುರಿಯಾಗಿಸಿ ನಡೆಸಿರುವ ಉದ್ದೇಶಪೂರ್ವಕ ದಾಳಿ’ ಎಂದು ಕಮಿಶಿನ್ ಹೇಳಿದರು.

ರಷ್ಯಾದ ‍ಪಡೆಗಳ ದಾಳಿ ತೀವ್ರಗೊಳ್ಳುವ ಮುನ್ಸೂಚನೆಯಿಂದ ಉಕ್ರೇನ್‌ ಪೂರ್ವ ಭಾಗದ ನಿವಾಸಿಗಳಿಗೆ ತಕ್ಷಣವೇ ಸ್ಥಳ ತೊರೆದು, ಪಶ್ಚಿಮದ ಪ್ರದೇಶಗಳಿಗೆ ತೆರಳುವಂತೆ ಉಕ್ರೇನ್‌ ಅಧಿಕಾರಿಗಳು ಸೂಚನೆ ನೀಡಿದ್ದರು.

‘ರೈಲು ನಿಲ್ದಾಣದಲ್ಲಿ ಉಕ್ರೇನ್‌ ಪಡೆಗಳು ಇರಲಿಲ್ಲ. ಅಲ್ಲಿದ್ದವರು ಸಾಮಾನ್ಯರು. ಸಾಮಾನ್ಯ ರೈಲು ನಿಲ್ದಾಣದ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿ, ನಾಗರಿಕರನ್ನು ಹತ್ಯೆಗೈದಿವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ಫಿನ್ಲೆಂಡ್‌ ಸಂಸತ್ತನ್ನು ಉದ್ದೇಶಿಸಿ ವರ್ಚುವಲ್‌ ಭಾಷಣದಲ್ಲಿ ಹೇಳಿದರು.

‘ಬುಕಾಕ್ಕಿಂತಲೂ ಕೀವ್‌ ಸಮೀಪದ ಬೊರೊಡಿಯಾಂಕದಲ್ಲಿ ಭೀಕರ ನರಮೇಧ ನಡೆದಿದೆ. ರಷ್ಯಾ ‘ಮಿತಿ ಮೀರಿದ ದುಷ್ಟ’ ರಾಷ್ಟ್ರವೆನಿಸಿ. ಸಿನಿಕತೆಯಿಂದ ನಮ್ಮ ಜನಸಂಖ್ಯೆಯನ್ನು ನಾಶಪಡಿಸುತ್ತಿದೆ. ಇದು, ಅಂಕೆ ಇಲ್ಲದಅದರ ದುಷ್ಟತನಕ್ಕೆ ಸಾಕ್ಷಿ. ಅದನ್ನು ಶಿಕ್ಷಿಸದಿದ್ದರೆ, ದುಷ್ಟತನವನ್ನು ಅದು ಎಂದಿಗೂ ನಿಲ್ಲಿಸದು’ ಎಂದು ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ.

ರೈಲು ನಿಲ್ದಾಣದ ಮೇಲೆ ರಷ್ಯಾ ಪಡೆಗಳು ರಾಕೆಟ್‌ ದಾಳಿ ನಡೆಸಿರುವ ಆರೋಪವನ್ನು ರಷ್ಯಾ ರಕ್ಷಣಾ ಸಚಿವಾಲಯ ತಳ್ಳಿ ಹಾಕಿದೆ.

‘ಕ್ರಾಮರೊಸ್ಕಿ ರೈಲು ನಿಲ್ದಾಣಕ್ಕೆ ಅಪ್ಪಳಿಸಿರುವುದು ‘ತೋಚ್ಕಾ–ಯು’ ಕ್ಷಿಪಣಿ. ಇದು ಉಕ್ರೇನ್‌ ಸೇನೆಯ ಬತ್ತಳಿಕೆಯಲ್ಲಿರುವುದಾಗಿದೆ. ಈ ಕ್ಷಿಪಣಿ ವ್ಯವಸ್ಥೆಯು ಡಾನ್‌ಬಾಸ್‌ ಅಥವಾ ಲುಹಾನ್‌ಸ್ಕ್‌ ಗಣರಾಜ್ಯಗಳು ಅಥವಾ ರಷ್ಯಾ ಸೇನೆಯ ಬಳಕೆಯಲ್ಲಿ ಇಲ್ಲ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ‘ಟಾಸ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಾಡಿಗೆ ಸೈನಿಕರ ತರಬೇತಿ ಕೇಂದ್ರ ಧ್ವಂಸ

ಉಕ್ರೇನ್‌ನಲ್ಲಿ ಕೈಗೊಂಡಿರುವ ವಿಶೇಷ ಸೇನಾ ಕಾರ್ಯಾಚರಣೆಯ ಭಾಗವಾಗಿ, ಒಡೆಸಾ ನಗರದ ಸಮೀಪ ಉಕ್ರೇನ್‌ ಸೇನೆಯು ವಿದೇಶಿ ಬಾಡಿಗೆ ಸೈನಿಕರಿಗೆ ತರಬೇತಿ ನೀಡುತ್ತಿದ್ದ ಕೇಂದ್ರವನ್ನು ಕ್ಷಿಪಣಿ ದಾಳಿ ಮಾಡಿ ನಾಶಪಡಿಸಲಾಗಿದೆ ಎಂದು ರಷ್ಯಾ ಶುಕ್ರವಾರ ಹೇಳಿದೆ.

‘ಬಾಸ್ಟಿಯನ್ ಕರಾವಳಿ ಕ್ಷಿಪಣಿ ವ್ಯವಸ್ಥೆಯ ಹೆಚ್ಚು ನಿಖರವಾದ ಓನಿಕ್ಸ್‌ ಕ್ಷಿಪಣಿಗಳು ಒಡೆಸಾದ ಈಶಾನ್ಯದ ಕ್ರಸ್ನೊಸಿಕಾ ಗ್ರಾಮದಬಳಿ ಇರುವ ಈ ತರಬೇತಿ ಕೇಂದ್ರ ಮತ್ತು ವಿದೇಶಿ ಬಾಡಿಗೆ ಸೈನಿಕರ ಗುಂಪನ್ನು ನಾಶಪಡಿಸಿವೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ, ಮೇಜರ್‌ ಜನರಲ್‌ ಐಗೋರ್‌ ಕೊನಶೆಂಕವ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಓನಿಕ್ಸ್‌ ಕ್ಷಿಪಣಿ ನಿಖರ ದಾಳಿ ನಡೆಸಿದ ದೃಶ್ಯದ ತುಣುಕನ್ನು ರಷ್ಯಾ ಸೇನೆ, ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

‘ಉಕ್ರೇನ್‌ಗೆ ಮುಂದೆ ಯುಇ ಸದಸ್ಯತ್ವ’

ಯುರೋಪಿಯನ್ ಕಮಿಷನ್ ಮುಖ್ಯಸ್ಥರು ಮತ್ತು ಐರೋಪ್ಯ ಒಕ್ಕೂಟದ ಉನ್ನತ ರಾಜತಾಂತ್ರಿಕರು ಶುಕ್ರವಾರ ಉಕ್ರೇನ್‌ಗೆ ರಾಜಧಾನಿ ಕೀವ್‌ಗೆ ಭೇಟಿ ನೀಡಿದರು.

ಬ್ರಸೆಲ್ಸ್‌ನಿಂದ ಕೀವ್‌ಗೆ ರೈಲಿನಲ್ಲಿ ಬಂದ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರಿಗೆ ತಾನು ತಂದಿರುವ ಪ್ರಮುಖ ಸಂದೇಶವೆಂದರೆ ಉಕ್ರೇನ್‌ಗೆ ‘ಯುರೋಪ್‌ ಒಕ್ಕೂಟಕ್ಕೆ ಬಾಗಿಲು ತೆರೆದಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಝೆಲೆನ್‌ಸ್ಕಿ ಅವರಿಗೆ ಯುರೋಪ್‌ ಒಕ್ಕೂಟದಬೆಂಬಲ ಮತ್ತು ಭರವಸೆ ನೀಡಲು ಬಂದಿದ್ದ ಅವರು, ‘ರಷ್ಯಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಂಡ ನಂತರ ಕ್ರಮೇಣ ಪುನಶ್ಚೇತನಗೊಂಡ ಉಕ್ರೇನಿಗೆ ಯುರೋಪ್‌ ಒಕ್ಕೂಟದ ಸದಸ್ಯತ್ವ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಶಾಂತಿ ಮಾತುಕತೆಗೆ ಬುಕಾ ಘಟನೆ ಅಡ್ಡಿ: ಉಕ್ರೇನ್ ಮತ್ತು ರಷ್ಯಾ ನಿರಂತರವಾಗಿ ವರ್ಚುವಲ್‌ ಮೂಲಕ ಶಾಂತಿ ಮಾತುಕತೆ ನಡೆಸುತ್ತಿವೆ. ಆದರೆ, ಬುಕಾದ ನಾಗರಿಕರ ಸಾವುನೋವು ಉಭಯ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆಯ ಮೇಲೆ ಪರಿಣಾಮ ಉಂಟು ಮಾಡಿದೆ ಎಂದು ಉಕ್ರೇನ್‌ ನಿಯೋಗದ ಮಿಖಾಯಿಲ್‌ ಪೊಡೊಲಿಯಾಕ್ ತಿಳಿಸಿದ್ದಾರೆ.

ಬುಕಾ ಮತ್ತು ಇತರ ಪ್ರದೇಶಗಳ ಇತ್ತೀಚಿನ ಚಿತ್ರಣಗಳು, ಉಭಯ ರಾಷ್ಟ್ರಗಳ ಮಾತುಕತೆಯಲ್ಲಿ ಮುಂದೆ ಹೊರಹೊಮ್ಮಲಿದ್ದ ಸಕಾರಾತ್ಮಕ ವಾತಾವರಣವನ್ನು ಮಸುಕಾಗಿಸಿದೆ ಎಂದು ಮಾತುಕತೆಗೆ ಸಮನ್ವಯಕಾರರಾಗಿದ್ದ ಟರ್ಕಿಯ ವಿದೇಶಾಂಗ ಸಚಿವರು ಸಹ ಅಭಿಪ್ರಾಯಪಟ್ಟಿದ್ದಾರೆ.

44ನೇ ದಿನದ ಬೆಳವಣಿಗೆಗಳು

l ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಯುತ್ತದೆ. ನಮ್ಮ ಗುರಿ ಸಾಧಿಸಲಾಗುತ್ತಿದೆ. ಭವಿಷ್ಯದಲ್ಲಿಉಕ್ರೇನ್‌ನಲ್ಲಿ ವಿಶೇಷ ಸೇನಾ ಕಾರ್ಯಾಚರಣೆಕೊನೆಗೊಳಿಸುವ ಆಶಯವನ್ನು ರಷ್ಯಾ ಹೊಂದಿದೆ– ಪುಟಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌

l ಉಕ್ರೇನ್‌ ರಾಷ್ಟ್ರೀಯವಾದಿಗಳು ಯುದ್ಧ ಅಪರಾಧ ಮಾಡುತ್ತಲೇ ಇದ್ದಾರೆ. ರುಬ್ಹೆನೆಯಲ್ಲಿ ರಾಸಾಯನಿಕ ತುಂಬಿದ್ದ ಕಂಟೈನರ್‌ಗಳನ್ನು ಸ್ಫೋಟಿಸಿರುವುದು ಇದಕ್ಕೆ ಒಂದು ನಿದರ್ಶನ. ಗಾಳಿ ಬೀಸುವ ದಿಕ್ಕು ನೋಡಿ, ವಿಷಪೂರಿತ ಮೋಡವು ಲುಹಾನ್‌ಸ್ಕ್‌ ಪ್ರದೇಶಕ್ಕೆ ಚಲಿಸಲೆಂದು ಈ ಸ್ಫೋಟ ನಡೆಸಿದ್ದಾರೆ. ಇದು ಡಾನ್‌ಬಾಸ್ ವಿರುದ್ಧ ಉಕ್ರೇನ್‌ನ ನರಮೇಧದ ಮತ್ತೊಂದು ಕೃತ್ಯ– ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮರಿಯಾ ಝಕರೊವಾ

l ರಷ್ಯಾದ ಆಕ್ರಮಣದಿಂದ ಜೀವಹಾನಿ ಆಗುತ್ತಿದ್ದರೂ ಕಣ್ಣುಮುಚ್ಚಿ
ಕೊಂಡಿರಲು ಆಗದು. ಉಕ್ರೇನ್ ತನ್ನ ಸಾರ್ವಭೌಮತೆಯನ್ನು ಮತ್ತು ನಮ್ಮನ್ನೂ ಧೈರ್ಯದಿಂದ ರಕ್ಷಿಸುತ್ತಿದೆ.ಉಕ್ರೇನ್‌ಗೆ ಎಸ್‌-300ವಾಯು ರಕ್ಷಣಾ ವ್ಯವಸ್ಥೆ ಒದಗಿಸಿದ್ದೇವೆ– ಸ್ಲೋವಾಕಿಯಾ ಪ್ರಧಾನಿಎಡ್ವರ್ಡ್ ಹೆಗರ್

l ರಷ್ಯಾದ ಆಕ್ರಮಣದ ವಿರುದ್ಧದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸದೆ ಭಾರತ ತಟಸ್ಥವಾಗಿ ಉಳಿದಿರುವುದು ನಿರಾಸೆ ಉಂಟು ಮಾಡಿದೆ– ಅಮೆರಿಕದ ರಿಪಬ್ಲಿಕನ್ ಕಾಂಗ್ರೆಸಿಗ ಬ್ರಿಯಾನ್ ಫಿಟ್ಜ್‌ಪ್ಯಾಟ್ರಿಕ್‌

l ಡಾನ್‌ಬಾಸ್‌ಪ್ರದೇಶದಲ್ಲಿ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಉಕ್ರೇನ್‌ಗೆ ಅಮೆರಿಕ ಗುಪ್ತಚರ ಸೇವೆಯನ್ನು ಒದಗಿಸುತ್ತಿದೆ– ಮೊದಲ ಬಾರಿಗೆ ದೃಢಪಡಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್

l ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಮತ್ತು ನ್ಯಾಟೊ ರಾಷ್ಟ್ರಗಳ ರಕ್ಷಣಾ ಸಹಕಾರದ ಬಗ್ಗೆ ಟರ್ಕಿ, ಬ್ರಿಟನ್‌, ಇಟಲಿ ರಕ್ಷಣಾ ಸಚಿವರು
ಇಸ್ತಾಂಬುಲ್‌ನಲ್ಲಿ ಭೇಟಿಯಾಗಿ ಚರ್ಚಿಸಿದರು

l ರಷ್ಯಾದ ಆಕ್ರಮಣವು ಗೋಧಿ ಮತ್ತು ಧಾನ್ಯದ ರಫ್ತಿಗೆ ಮಾರ್ಚ್‌ನಲ್ಲಿಅಡ್ಡಿಯಾದ ಕಾರಣ ವಿಶ್ವದ ಆಹಾರ ಬೆಲೆಗಳು ತುತ್ತ ತುದಿಗೆ ಏರಿವೆ– ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ

l ಉಕ್ರೇನ್‌ನಲ್ಲಿನಾಗರಿಕರ ಹತ್ಯೆ ಸೇರಿದಂತೆ ರಷ್ಯಾದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಜಪಾನ್ ರಷ್ಯಾದ ಎಂಟು ರಾಜತಾಂತ್ರಿಕರನ್ನು ಉಚ್ಚಾಟಿಸಿದೆ

l ಉಕ್ರೇನ್‌ನ ಪೂರ್ವದ ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಪಡೆಗಳುಮುಂಬರುವ ವಾರಗಳಲ್ಲಿ ದಾಳಿ ತೀವ್ರಗೊಳಿಸುವನಿರೀಕ್ಷೆ ಇದೆ. ಕೀವ್ ಬಳಿ ನಾಗರಿಕರ ಮೇಲೆ ನಡೆದ ದೌರ್ಜನ್ಯಕ್ಕಿಂತಲೂ ಮತ್ತಷ್ಟು ಭೀಕರ ದೃಶ್ಯಗಳಿಗೆ ಡಾನ್‌ಬಾಸ್‌ ಸಾಕ್ಷಿಯಾಗಲಿದೆ– ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

l ಅಮೆರಿಕದ ನಡೆ ಅನುಸರಿಸಿ ಬ್ರಿಟನ್‌, ಐರೋಪ್ಯ ಒಕ್ಕೂಟ ಕೂಡ ತನ್ನ ನಿರ್ಬಂಧದ ಪಟ್ಟಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಇಬ್ಬರು ಪುತ್ರಿಯರನ್ನು ಮತ್ತು ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಅವರ ಪುತ್ರಿಯನ್ನು ಸೇರಿಸಿದೆ

l ಪೋಲೆಂಡ್‌ನಿಂದ ರಷ್ಯಾದ ರಾಜತಾಂತ್ರಿಕರನ್ನು ಹೊರ ಹಾಕಿರುವುದಕ್ಕೆ ಪ್ರತೀಕಾರವಾಗಿ ರಷ್ಯಾ, ಪೋಲೆಂಡ್‌ನ 45 ರಾಜತಾಂತ್ರಿಕರಿಗೆ ಏಪ್ರಿಲ್‌ 15ರೊಳಗೆ ದೇಶ ತೊರೆಯಲು ಗಡುವು ನೀಡಿದೆ– ರಷ್ಯಾ ವಿದೇಶಾಂಗ ಸಚಿವಾಲಯದ ಮಾಹಿತಿ

l ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ಸ್ಥಾನದಿಂದ ರಷ್ಯಾವನ್ನು ಅಮಾನತುಗೊಳಿಸಿದ ನಿರ್ಧಾರ ‘ಬೆಂಕಿಗೆ ತುಪ್ಪ ಸುರಿದ ಆತುರದ ನಡೆ’ – ಚೀನಾ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT