ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಕಿವ್‌ ನಗರ ವಶ: ರಷ್ಯಾ ಗುರಿ

ಉಕ್ರೇನ್‌ ಸೇನಾ ನೆಲೆಗಳ ಮೇಲೆ ಜಲಾಂತಾರ್ಗಾಮಿ, ಸುಖೋಯ್‌ ಜೆಟ್‌ಗಳಿಂದ ಕ್ಷಿಪಣಿ ದಾಳಿ
Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬುಕಾ, ಕೀವ್‌: ಕೀವ್‌, ಚೆರ್ನಿವ್ ಮತ್ತು ಸುಮಿ ಪ್ರದೇಶಗಳಿಂದ ಹಿಂದೆ ಸರಿದಿರುವ ರಷ್ಯಾ ಪಡೆಗಳು, ಉಕ್ರೇನಿನ ಎರಡನೇ ಅತಿ ದೊಡ್ಡ ನಗರ ಹಾರ್ಕಿವ್‌ ವಶಕ್ಕೆ ಪಡೆಯುವ ಗುರಿ ಇಟ್ಟುಕೊಂಡು ದಾಳಿ ಆರಂಭಿಸಿವೆ. ಉಕ್ರೇನಿನ ಪೂರ್ವ ಮತ್ತು ಆಗ್ನೇಯದಲ್ಲಿ ಹೊಸದಾಗಿ ಆಕ್ರಮಣಕ್ಕೆ ರಷ್ಯಾ ತಯಾರಾಗುತ್ತಿದೆ ಎಂದು ಉಕ್ರೇನ್ ಸೇನೆ ಮಂಗಳವಾರ ಹೇಳಿದೆ.

ಹಾರ್ಕಿವ್‌ ನಗರವನ್ನು ತೆಕ್ಕೆಗೆ ತೆಗೆದುಕೊಳ್ಳಲು, ಪ್ರಮುಖ ಕೈಗಾರಿಕಾ ಪ್ರದೇಶವಾದ ಡಾನ್‌ಬಾಸ್‌ ಮತ್ತು ಲುಹಾನ್‌ಸ್ಕ್‌ನಲ್ಲಿ ಹಿಡಿತ ಸಾಧಿಸಲು ಉಕ್ರೇನ್‌ ಪಡೆಗಳ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿವೆ. ಈ ಪ್ರಾಂತ್ಯಗಳ ಪೊಪಾಸ್ನ ಮತ್ತು ರುಬ್ಹೆನೆ ನಗರಗಳು ಹಾಗೂ ಕಪ್ಪು ಸಮುದ್ರ ಬಂದರು ನಗರ ಮರಿಯುಪೊಲ್‌ ವಶಕ್ಕೆ ಪಡೆಯಲು ಯತ್ನಿಸುತ್ತಿವೆ ಎಂದು ಸಚಿವಾಲಯದ ವಕ್ತಾರ ಒಲೆಕ್ಸಾಂಡರ್‌ ಮೊತುಜಿಯಾನಿಕ್‌ ಹೇಳಿದ್ದಾರೆ.

‘ನಮ್ಮ ದೇಶದ ನಾಗರಿಕರನ್ನು ಗುರಿಯಾಗಿಸಿ ರಷ್ಯಾ ಪ್ರಯೋಗಿಸುತ್ತಿರುವ ಪ್ರತಿ ಕ್ಷಿಪಣಿ ಮತ್ತು ಬಾಂಬ್‌ಗಳು ಎಲ್ಲವನ್ನೂ ಸುಟ್ಟು ಕರಕಲಾಗಿಸುತ್ತಿದೆ. ಉಕ್ರೇನ್‌ ರಕ್ಷಣೆಗಾಗಿ ಶಕ್ತಿಶಾಲಿ ರಾಷ್ಟ್ರಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕೀವ್‌, ಮೈಕೊಲೈವ್‌, ಒಡೆಸಾ, ಸುಮಿ, ಹಾರ್ಕಿವ್‌, ಝಪ್ರೊರಿಝಿಯಾ, ಜೈಟೊಮಿರ್, ಲುವಿವ್‌, ಡೊನೆಟ್‌ಸ್ಕ್‌, ಇವಾನೊ ಫ್ರಾಂಕ್‌ವಿಸ್ಕ್‌ , ಟರ್ನೊಪಿಲ್‌, ನಿಪ್ರೊಪೆಟ್ರೊವ್‌ಸ್ಕ್‌ ಸೇರಿ ಪ್ರಮುಖ ನಗರಗಳಲ್ಲಿ ಇಡೀ ದಿನ ವಾಯು ದಾಳಿಯ ಸೈರನ್‌ ಮೊಳಗಿತು.

85 ಸೇನಾ ನೆಲೆಗಳು ಧ್ವಂಸ: ಉಕ್ರೇನಿನ ಸೇನಾ ನೆಲೆಗಳನ್ನೇ ಪ್ರಮುಖ ಗುರಿಯಾಗಿಸಿ ದಾಳಿ ಮುಂದುವರಿಸಿರುವ ರಷ್ಯಾ ವಾಯುಪಡೆ ಮತ್ತು ನೌಕಾಪಡೆಗಳು ಸೋಮವಾರ ತಡರಾತ್ರಿ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಕೇಂದ್ರ ಭಾಗದಲ್ಲಿನ 85 ಆಯಕಟ್ಟಿನ ಸೇನಾ ನೆಲೆಗಳು ಧ್ವಂಸಗೊಂಡಿವೆ. 8 ಮಿಲಿಟರಿ ಸಂವಹನ ಕೇಂದ್ರಗಳು, ಉಕ್ರೇನ್‌ ಸೇನೆಯ ಎರಡು ಇಂಧನ ಸಂಗ್ರಹಾಗಾರ ಮತ್ತು ಮದ್ದುಗುಂಡು, ಯುದ್ಧೋಪಕರಣಗಳ ಆರು ಸಂಗ್ರಹಾಗಾರಗಳು, ಒಂದು ಎಸ್‌–300 ಕ್ಷಿಪಣಿ ವ್ಯವಸ್ಥೆ ಹಾಗೂ ತೋಚ್ಕ ಕ್ಷಿಪಣಿ ಲಾಂಚರ್‌ಗಳನ್ನು ನಾಶಪಡಿಸಿಕೊಳ್ಳಲಾಗಿದೆ. ಉಕ್ರೇನಿನಲ್ಲಿ ವಿಶೇಷ ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ, ಮೇಜರ್‌ ಜನರಲ್‌ ಐಗೋರ್‌ ಕೊನಶೆಂಕವ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಬೆಲರೂಸ್ ವಾಯು ಪ್ರದೇಶದಿಂದ ಸುಖೊಯ್‌– 35 ಯುದ್ಧ ವಿಮಾನಗಳಿಂದ ರಷ್ಯಾ ಹಾರಿಸಿದ ಕಲಿಬ್‌ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ ವಾಯುಪಡೆ ಹೇಳಿದೆ.

ಉಕ್ರೇನಿನ ಪಶ್ಚಿಮದಲ್ಲಿ ರಷ್ಯಾದ ಮೂರು ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತು. ನಾಲ್ಕನೇ ಕ್ಷಿಪಣಿಯನ್ನೂ ಹಾನಿಗೊಳಿಸಿ, ಅದರ ಗುರಿ ತಪ್ಪಿಸಲಾಯಿತು ಎಂದು ಉಕ್ರೇನ್‌ ರಕ್ಷಣಾ ಸಚಿವಾಲಯ ಹೇಳಿದೆ.

ನೈಟ್ರಿಕ್ ಆಸಿಡ್ ಟ್ಯಾಂಕ್ ಸ್ಫೋಟ: ಲುಹಾನ್‌ಸ್ಕ್‌ ಪ್ರಾಂತ್ಯದ ರುಬ್ಹೆನೆ ನಗರದಲ್ಲಿನ ನೈಟ್ರಿಕ್ ಆಸಿಡ್‌ ಟ್ಯಾಂಕ್ ಮೇಲೆ ರಷ್ಯಾದ ವಾಯುಪಡೆ ಮಂಗಳವಾರ ನಸುಕಿನಲ್ಲಿ ಬಾಂಬ್‌ ದಾಳಿ ಮಾಡಿದೆ ಎಂದು ಗವರ್ನರ್ ಸೆರ್ಹಿ ಹೈದೈ ತಿಳಿಸಿದ್ದಾರೆ.

ನೈಟ್ರಿಕ್ ಆಮ್ಲವು ಗಾಳಿಯಲ್ಲಿ ಬೆರೆತರೆ ಅದು ಉಸಿರಾಡಲು ಅಪಾಯ ತಂದೊಡ್ಡಲಿದೆ. ಅಲ್ಲದೇ ಚರ್ಮಕ್ಕೂ ಹಾನಿ ಮಾಡುತ್ತದೆ. ಬಾಂಬ್ ವಿರುದ್ಧ ರಕ್ಷಣೆ ಕೊಡುವ ಬಂಕರ್‌ಗಳಿಂದ ಹೊರಬರದಂತೆ, ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಲು ನಾಗರಿಕರಿಗೆ ಗವರ್ನರ್ ಸೂಚಿಸಿದ್ದಾರೆ ಎಂದು ಉಕ್ರೇನಿನ ಸರ್ಕಾರಿ ಸುದ್ದಿಸಂಸ್ಥೆ ‘ದಿ ಕೀವ್‌ ಇಂಡಿಪೆಂಡೆಂಟ್‌’ ವರದಿ ಮಾಡಿದೆ.

ಬುಕಾ ನರಮೇಧ ನಕಲಿ ಕಥೆ: ರಷ್ಯಾ ಕಿಡಿ

ಇದು ರಷ್ಯಾ ವಿರುದ್ಧ ಅಪಪ್ರಚಾರಕ್ಕೆ ಉಕ್ರೇನ್‌ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಹೆಣೆದಿರುವ ಷಡ್ಯಂತ್ರ. ರಷ್ಯಾವನ್ನು ನಿರ್ದಯಿ ಎಂದು ಬಿಂಬಿಸಲು ಮತ್ತು ರಷ್ಯಾದ ಪ್ರತಿಷ್ಠೆ ಹಾಳುಗೆಡವಲು ಉಕ್ರೇನ್‌ ತನ್ನದೇ ನಾಗರಿಕರನ್ನು ಕೊಲ್ಲುತ್ತಿದೆ ಎಂದು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ತಿಳಿಸಿರುವುದಾಗಿ ‘ಟಾಸ್‌’ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಪುಟಿನ್‌ ಯುದ್ಧಾಪರಾಧಿ: ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಯುದ್ಧಾಪರಾಧಿ. ಅಂತರರಾಷ್ಟ್ರೀಯ ನ್ಯಾಯಾಲಯವು ಪುಟಿನ್‌ ಅವರನ್ನು ಶಿಕ್ಷಿಸಬೇಕು’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪುನರುಚ್ಚರಿಸಿದ್ದಾರೆ.

ಕೈಗಳನ್ನು ಬೆನ್ನಿನ ಹಿಂದಕ್ಕೆ ಕಟ್ಟಿ, ತಲೆ ಹಿಂಬದಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಸ್ಥಿತಿಯಲ್ಲಿ ನಾಗರಿಕರ ಶವಗಳು ಬಿದ್ದಿರುವ ಚಿತ್ರಗಳು ಮರುಗುವಂತೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT