ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ ಶಸ್ತ್ರಾಸ್ತ್ರ ಕೊಡಿ, ಜೀವ ಉಳಿಸಿ: ನ್ಯಾಟೊ, ಜಿ–7 ದೇಶಗಳಿಗೆ ಉಕ್ರೇನ್ ಮೊರೆ

Last Updated 7 ಏಪ್ರಿಲ್ 2022, 18:37 IST
ಅಕ್ಷರ ಗಾತ್ರ

ಕೀವ್‌: ರಾಜಧಾನಿ ಕೀವ್‌ನಿಂದ ನಿರ್ಗಮಿಸಿದ ನಂತರ ಮರು ಸಂಘಟಿತವಾಗಿರುವ ರಷ್ಯಾ ಪಡೆಗಳು, ಪೂರ್ವದಲ್ಲಿ ಭೀಕರ ದಾಳಿ ನಡೆಸುತ್ತಿವೆ. ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಪಾಶ್ಚಾತ್ಯ ಮತ್ತು ನ್ಯಾಟೊ ರಾಷ್ಟ್ರಗಳು ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು ಎಂದು ಉಕ್ರೇನ್‌ ಗುರುವಾರ ಮನವಿ ಮಾಡಿದೆ.

ಉಕ್ರೇನ್‌ನ ಕೈಗಾರಿಕಾ ಪ್ರದೇಶದ ಹೃದಯಭಾಗದಲ್ಲಿ ದಾಳಿ ನಡೆಸುತ್ತಿರುವ ರಷ್ಯಾ ಪಡೆಗಳ ವಿರುದ್ಧ ಸಾಧ್ಯವಿರುವಷ್ಟು ಪ್ರತಿರೋಧ ತೋರಿಸಲು ಉಕ್ರೇನ್‌ ನಾಗರಿಕರಿಗೆ ಕರೆಕೊಟ್ಟಿದೆ.

ಕೀವ್‌ ತ್ವರಿತ ವಶಕ್ಕೆ ತೆಗೆದುಕೊಳ್ಳಲು ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಹೇಳಿದಂತೆ ಉಕ್ರೇನ್‌ ಸರ್ಕಾರ ಕಿತ್ತೊಗೆಯುವ ಪುಟಿನ್ ಅವರ ಆರಂಭಿಕ ಗುರಿ ಸಾಧಿಸಲುರಷ್ಯಾ ನಡೆಸಿದ ಆರು ವಾರಗಳ ಆಕ್ರಮಣ ವಿಫಲವಾಗಿದೆ. ರಷ್ಯಾದ ಗಮನವು ಈಗ ರಷ್ಯನ್ ಭಾಷಿಗರು ಹೆಚ್ಚಿರುವ ಡಾನ್‌ಬಾಸ್‌ ಪ್ರದೇಶದ ಮೇಲೆ ನೆಟ್ಟಿದೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಗುರುವಾರ ಬ್ರಸೆಲ್ಸ್‌ನಲ್ಲಿರುವ ನ್ಯಾಟೊ ಕೇಂದ್ರ ಕಚೇರಿಗೆ ಭೇಟಿ ನೀಡಿ, ಶಸ್ತ್ರಾಸ್ತಗಳ ನೆರವು ನೀಡುವಂತೆನ್ಯಾಟೊ ರಾಷ್ಟ್ರಗಳು ಮತ್ತು ಜಿ –7 ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ತುರ್ತು ಮಾತುಕತೆ ನಡೆಸಿದರು. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮನವಿ ಮಾಡಿದರು.

‘ಯುದ್ಧ ವಿಮಾನಗಳು, ನೆಲದಿಂದ ಉಡಾಯಿಸುವ ಕ್ಷಿಪಣಿಗಳು, ಶಸ್ತ್ರ ಸಜ್ಜಿತ ವಾಹನಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ.ನಿಮ್ಮ (ನ್ಯಾಟೊ) ಶಸ್ತ್ರಾಸ್ತ್ರಗಳುಆದಷ್ಟು ಬೇಗಉಕ್ರೇನ್‌ ತಲುಪಿದರೆ, ಹೆಚ್ಚಿನ ಜೀವಗಳನ್ನು ಉಳಿಸಬಹುದು’ಎಂದರು.

ನ್ಯಾಟೊದಲ್ಲಿನ ಕೆಲವು ರಾಷ್ಟ್ರಗಳು, ರಷ್ಯಾದ ಮುಂದಿನ ಗುರಿ ತಾವೇ ಆಗಿರಬಹುದು ಎಂಬ ಚಿಂತೆಯಲ್ಲಿವೆ. ಮೈತ್ರಿಕೂಟದ 30 ಸದಸ್ಯ ರಾಷ್ಟ್ರಗಳನ್ನು ಯುದ್ಧಕ್ಕೆ ಇಳಿಸಬೇಕಾದ ಸನ್ನಿವೇಶ ತಪ್ಪಿಸಲು ನ್ಯಾಟೊ ಯತ್ನಿಸುತ್ತಿದೆ.

ಈ ನಡುವೆಯೂ, ನ್ಯಾಟೊ ಮಹಾ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ ಬರ್ಗ್, ಉಕ್ರೇನ್‌ಗೆರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನಷ್ಟೇ ಅಲ್ಲದೇ, ಪ್ರತಿದಾಳಿಯ ಶಸ್ತ್ರಾಸ್ತ್ರಗಳನ್ನು ಕಳುಹಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದರು.

‘ಉಕ್ರೇನ್ ರಕ್ಷಣಾತ್ಮಕ ಯುದ್ಧ ನಡೆಸುತ್ತಿದೆ. ಹಾಗಾಗಿ, ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕಿಸಿ, ಪೂರೈಸುವುದರಲ್ಲಿ ಯಾವುದೇ ನೈಜ ಅರ್ಥ ಇಲ್ಲ’ ಎಂದು ಅವರು ಹೇಳಿದರು.

‘ನ್ಯಾಟೊಉಕ್ರೇನ್‌ ಬೆಂಬಲಿಸಲು ಮತ್ತು ಸೇನೆಗೆ ಬಲ ತುಂಬಲು ಒಪ್ಪಿಕೊಂಡಿದೆ. ರಷ್ಯಾದ ದಾಳಿಗಳು ಮುಂದುವರಿದಂತೆ, ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒದಗಿಸಲು ಸದಸ್ಯ ರಾಷ್ಟ್ರಗಳು ಒಪ್ಪಿವೆ’ ಎಂದು ಒಕ್ಕೂಟದ ವಿದೇಶಾಂಗ ಸಚಿವರ ಸಭೆಯ ನಂತರ, ಜೆನ್ಸ್ ಸ್ಟೋಲ್ಟೆನ್‌ ಬರ್ಗ್ ಮಾಧ್ಯಮಗಳಿಗೆ ತಿಳಿಸಿದರು.

‘ರಷ್ಯಾ ಪಡೆಗಳಿಂದ ಕ್ರೌರ್ಯ’: ರಷ್ಯಾ ಪಡೆಗಳು ಡಾನ್‌ಬಾಸ್‌ ಸಮೀಪದ ಹಾರ್ಕಿವ್‌ಗೆ ಮುತ್ತಿಗೆ ಹಾಕಿವೆ. ದಕ್ಷಿಣದ ಕೆರ್ಸಾನ್‌ ಪ್ರಾಂತ್ಯದಲ್ಲೂ ಕ್ರೌರ್ಯ ಮೆರೆಯುತ್ತಿವೆ ಎಂದುಉಕ್ರೇನ್‌ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ವಕ್ತಾರ ಒಲೆಕ್ಸಾಂಡರ್ ಶ್ಪುಟುನ್ ಗುರುವಾರ ತಿಳಿಸಿದರು.

ರಷ್ಯಾದಿಂದ ಕಲಿಬ್‌ ಕ್ಷಿಪಣಿ ದಾಳಿ

ಉಕ್ರೇನಿನ ಪೂರ್ವ ಮತ್ತು ಆಗ್ನೇಯ ಭಾಗ ಕೇಂದ್ರೀಕರಿಸಿ, ಎರಡನೇ ಹಂತದ ವಿಶೇಷ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಉಕ್ರೇನ್‌ ಸೇನೆಗೆ ಇಂಧನ ಪೂರೈಸುತ್ತಿದ್ದ ನಾಲ್ಕು ನಗರಗಳ ಮೇಲೆ ಕಲಿಬ್‌ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಗುರುವಾರ ರಷ್ಯಾ ಸೇನೆ ಹೇಳಿದೆ.

ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಿದ ನಾಲ್ಕು ಕಲಿಬ್‌ ಕ್ರೂಸ್‌ ಕ್ಷಿಪಣಿಗಳು, ಮೈಕೊಲೈವ್‌, ಹಾರ್ಕಿವ್‌, ಝಪ್ರೊರಿಝಿಯಾ, ಚುಯುವ್‌ನಲ್ಲಿನ ಇಂಧನ ಸಂಗ್ರಹಾಗಾರಗಳನ್ನು ಧ್ವಂಸಗೊಳಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಐಗೊರ್‌ ಕೊನಶೆಂಕವ್‌ ತಿಳಿಸಿದ್ದಾರೆ.

ಎರಡು ಕಮಾಂಡ್‌ ಪೋಸ್ಟ್‌, ಒಂದು ರೆಡಾರ್‌, ಒಂದು ಎಸ್‌–300 ಕ್ಷಿಪಣಿ ವ್ಯವಸ್ಥೆ ಹಾಗೂ ಕ್ಷಿಪಣಿ, ಮದ್ದುಗುಂಡುಗಳಿದ್ದ ಒಂದು ಉಗ್ರಾಣ, ಹತ್ತು ಪ್ರಬಲ ನೆಲೆಗಳು ಸೇರಿ ಉಕ್ರೇನ್‌ ಮಿಲಿಟರಿಯ 29 ಸ್ವತ್ತುಗಳನ್ನು ನಾಶ ಮಾಡಲಾಗಿದೆ. ಆರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದರು.

ಕ್ಷಿಪಣಿಗಳು ಗುರಿ ಭೇದಿಸುವ ದೃಶ್ಯದ ವಿಡಿಯೊ ತುಣಕನ್ನು ರಷ್ಯಾ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

ಕೀವ್‌ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ರಷ್ಯಾದ ಮಿಲಿಟರಿ ವಾಹನಗಳನ್ನುಉಕ್ರೇನ್‌ ಸೇನೆಯ ಏಕೈಕ ಟ್ಯಾಂಕ್‌ವೊಂದು ನಾಶಪಡಿಸುತ್ತಿರುವುದನ್ನು ಡ್ರೋನ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊ ದೃಶ್ಯದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ.

ಉಕ್ರೇನ್‌ ಕರಡು ಸಮ್ಮತವಲ್ಲ: ರಷ್ಯಾ

‘ಉಕ್ರೇನ್‌ ಬುಧವಾರ ಮಂಡಿಸಿರುವ ಒಪ್ಪಂದದಕರಡು ಇಸ್ತಾಂಬುಲ್‌ನಲ್ಲಿ ಮಾರ್ಚ್‌ 29ರಂದು ನಡೆದ ಶಾಂತಿ ಸಭೆಯ ನಿಬಂದನೆಗಳಿಗೆ ವಿಮುಖವಾಗಿದೆ. ಉಕ್ರೇನ್‌ ಪೂರ್ವ ಷರತ್ತುಗಳನ್ನು ಮುಂದಿಡುತ್ತಲೇ ಇರುತ್ತದೆ. ಇದು ಸ್ವೀಕಾರಾರ್ಹವಲ್ಲ’ ಎಂದುರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಹೇಳಿದ್ದಾರೆ.

‘ಉಕ್ರೇನ್ ಒಪ್ಪಂದದತನ್ನ ಕರಡು ಪ್ರತಿಯನ್ನು ಸಮಾಲೋಚನಾ ಗುಂಪಿನ ಮುಂದಿಟ್ಟಿದೆ. ಇಸ್ತಾಂಬುಲ್‌ ಸಭೆಯಲ್ಲಿ ಉಕ್ರೇನ್‌ ನಿಯೋಗದ ಮುಖ್ಯಸ್ಥ ಅರಾಖಮಿಯಾ ಒಪ್ಪಿ ಸಹಿ ಮಾಡಿರುವ ಕಡತದಲ್ಲಿನ ಪ್ರಮುಖ ನಿಬಂಧನೆಗಳಿಂದ ಹಿಂದೆ ಸರಿಯುವ ಸ್ಪಷ್ಟ ಸೂಚನೆ ಈ ಕರಡಿನಲ್ಲಿದೆ’ ಎಂದು ಲಾವ್ರೊವ್‌ ಹೇಳಿರುವುದಾಗಿ ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ‘ಟಾಸ್‌’ ಗುರುವಾರ ವರದಿ ಮಾಡಿದೆ.

‘ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ನಡುವಿನ ಸಭೆಯ ಕಾರ್ಯಸೂಚಿಯಲ್ಲಿ ಕ್ರಿಮಿಯಾ ಮತ್ತು ಡಾನ್‌ಬಾಸ್‌ನ ಸಮಸ್ಯೆಗಳನ್ನು ಸೇರಿಸಬೇಕೆಂಬ ಪ್ರಸ್ತಾಪವನ್ನು ಹೊಸದಾಗಿ ಸೇರಿದೆ. ಭದ್ರತಾ ಖಾತ್ರಿ ನೀಡುವ ರಷ್ಯಾ ಸೇರಿ ಎಲ್ಲ ದೇಶಗಳ ಒಪ್ಪಿಗೆಯೊಂದಿಗೆ ಮಾತ್ರ ವಿದೇಶಿ ರಾಷ್ಟ್ರಗಳ ಜತೆಗೆ ಸಮರಾಭ್ಯಾಸ ನಡೆಸಬೇಕು ಎಂದು ಇಸ್ತಾಂಬುಲ್‌ ಕಡತದಲ್ಲಿದೆ. ಆದರೆ, ಉಕ್ರೇನ್‌ ಕರಡಿನಲ್ಲಿ ರಷ್ಯಾದ ಉಲ್ಲೇಖವೇ ಇಲ್ಲ’ ಎಂದರು.

ಪ್ರಚೋದನೆಗಳ ಹೊರತಾಗಿಯೂ ರಷ್ಯಾ, ಉಕ್ರೇನ್‌ ಜತೆಗೆ ಮಾತುಕತೆಯನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.

43ನೇ ದಿನದ ಬೆಳವಣಿಗೆಗಳು

l ಉಕ್ರೇನಿನ ಬುಕಾ ಉಪನಗರದಲ್ಲಿ ನಡೆದಿರುವ ನರಮೇಧವನ್ನು ತೀವ್ರವಾಗಿ ಖಂಡಿಸಿ, ಸ್ವತಂತ್ರ ತನಿಖೆಗೆ ಆಗ್ರಹಿಸಿರುವ ಭಾರತದ ನಿಲುವಿಗೆ ಅಮೆರಿಕದ ಸೆನೆಟ್‌ ಮೆಚ್ಚುಗೆ ವ್ಯಕ್ತಪಡಿಸಿದೆ

l ರಷ್ಯಾ ಆಕ್ರಮಣದಿಂದ ಮರಿಯುಪೊಲ್‌ನಲ್ಲಿ ಈವರೆಗೆ ಸತ್ತವರ ಸಂಖ್ಯೆ ಐದು ಸಾವಿರ ದಾಟಿದೆ–ಮೇಯರ್‌ ವಾಡಿಮ್ ಬಾಯ್ಚೆಂಕೊ

l ಉಕ್ರೇನ್‌ಗೆಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ನಿರಂತರ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿರುವುದು ಶಾಂತಿ ಮಾತುಕತೆಗೆ ಪ್ರಮುಖ ಅಡ್ಡಿ– ರಷ್ಯಾ ಆರೋಪ

l ರಷ್ಯಾ ಸೇನೆಯ121ನೇ ಬಾಂಬರ್ ಏವಿಯೇಷನ್ ರೆಜಿಮೆಂಟ್‌ಗೆ ‘ಗಾರ್ಡ್ಸ್’ ಎಂಬ ಬಿರುದನ್ನು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನೀಡಿದ್ದಾರೆ.

l ಅಧ್ಯಕ್ಷ ಪುಟಿನ್ ಅವರ ಪುತ್ರಿಯರ ಮೇಲೆ ವಿಧಿಸಿರುವ ಹಣಕಾಸು ನಿರ್ಬಂಧಗಳು ದಿಗ್ಭ್ರಮೆ ಮೂಡಿಸಿವೆ.ರಷ್ಯಾ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳ ಉನ್ಮಾದದ ನಿರ್ಬಂಧಗಳ ಮುಂದುವರಿಕೆಗೂ ರಷ್ಯಾ ತಕ್ಕ ಪ್ರತಿಕ್ರಿಯೆ ನೀಡಲಿದೆ – ಪುಟಿನ್‌ ವಕ್ತಾರ ಡೆಮಿಟ್ರಿ ಪೆಸ್ಕೊವ್‌

l ರಷ್ಯಾದ ನಾಯಕರು ಮತ್ತು ಇತರರುಉಕ್ರೇನ್ ವಿರುದ್ಧ ವಂಚನೆ, ಹ್ಯಾಕಿಂಗ್ ಮತ್ತು ಸಂಘಟಿತ ಬೆದರಿಕೆಯ ಅಭಿಯಾನಕ್ಕೆ ಸಾಮಾಜಿಕ ಜಾಲತಾಣ ಬಳಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ – ಫೇಸ್‌ಬುಕ್‌ನ ಮಾತೃ ಕಂಪನಿ ಮೆಟಾ

l ಉಕ್ರೇನ್‌ನಲ್ಲಿನ ಸೇನಾ ಕಾರ್ಯಾಚರಣೆಯ ಕುರಿತುಅಮೆರಿಕದ ಇಂಟರ್ನೆಟ್ ದೈತ್ಯ ಗೂಗಲ್‌ ‘ನಕಲಿ ಸುದ್ದಿ’ಗಳನ್ನು ಯೂಟ್ಯೂಬ್‌ನಲ್ಲಿಹರಡುತ್ತಿದೆ. ಹಾಗಾಗಿ ಗೂಗಲ್‌ ಸೇವೆಗಳು ಮತ್ತು ಜಾಹೀರಾತುಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ– ರಷ್ಯಾದ ಸಂವಹನ ಕಾವಲು ಸಂಸ್ಥೆ

l ಜರ್ಮನಿಯ ಸರ್ಕಾರಿ ಬ್ಯಾಂಕ್‌ ಕೆಎಫ್‌ಡಬ್ಲ್ಯುನಿಂದ 163 ದಶಲಕ್ಷ ಡಾಲರ್‌ ಸಾಲ ಪಡೆಯುವ ಒಪ್ಪಂದಕ್ಕೆ ಉಕ್ರೇನ್‌ ಸಹಿ ಹಾಕಿದೆ

l ರಷ್ಯಾದ ಆಕ್ರಮಣದ ಪರಿಣಾಮ ಆಹಾರ ಬೆಲೆಗಳು ಹೆಚ್ಚಾಗುತ್ತಿವೆ. ಇದರಿಂದ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಲಕ್ಷಾಂತರ ಮಕ್ಕಳ ಅಪೌಷ್ಟಿಕತೆಯಿಂದ ಬಳಲುವ ಅಪಾಯ ಹೆಚ್ಚಿಸಿದೆ– ಯೂನಿಸೆಫ್‌

l ಡೊನೆಟ್‌ಸ್ಕ್‌,ಲುಹಾನ್‌ಸ್ಕ್‌, ಝಪೊರಿಝಿಯಾ ಪ್ರದೇಶಗಳಿಂದ ನಾಗರಿಕರ ಸ್ಥಳಾಂತರಕ್ಕೆ 10 ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ರಷ್ಯಾ ಪಡೆಗಳು ಒಪ್ಪಿವೆ– ಉಕ್ರೇನ್‌ ಉಪ ಪ್ರಧಾನಿ ಇರಿನಾ ವೆರೆಶ್‌ಚುಕ್

l ಪೂರ್ವ ಯುರೋಪಿನಲ್ಲಿನರಷ್ಯಾದ ಆಕ್ರಮಣವು ಉಕ್ರೇನ್ ಮತ್ತು ಅದರಾಚೆಗೆ ಅಗಾಧವಾದ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಲಿದೆ– ಅಮೆರಿಕದ ಖಜಾನೆ ಕಾರ್ಯದರ್ಶಿ ಜನೆತ್‌ ಯೆಲೆನ್‌ ಹೌಸ್ ಪ್ಯಾನೆಲ್ ಎಚ್ಚರಿಸಿದ್ದಾರೆ

l ಅಮೆರಿಕದಲ್ಲಿ ನೆಲೆಗೊಳ್ಳಲು ನಿತ್ಯವೂ ನೂರಾರು ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವಉಕ್ರೇನ್‌ ನಿರಾಶ್ರಿತರು, ಮೆಕ್ಸಿಕೊ ಮಾರ್ಗದ ವಿಮಾನಗಳನ್ನು ಬಳಸುವಂತೆ ತಮ್ಮ ಕುಟುಂಬದ ಸದಸ್ಯರು, ಬಂಧು–ಬಾಂಧವರಿಗೆ ಸಂದೇಶ ರವಾನಿಸುತ್ತಿದ್ದಾರೆ

l ಝಪ್ರೊರಿಝಿಯಾದಲ್ಲಿ ಬುಧವಾರ ತಡರಾತ್ರಿ ರಷ್ಯಾದ ಮೂರು ಕ್ರೂಸ್‌ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ– ಉಕ್ರೇನ್‌ ಸೇನೆ

l ಉಕ್ರೇನ್‌ನಲ್ಲಿ ‘ಯುದ್ಧ’ ‌ಕೊನೆಗೊಳಿಸುವ ಶಾಂತಿ ಮಾತುಕತೆಗಳಲ್ಲಿ ಮಿನ್ಸ್ಕ್ ಒಪ್ಪಂದ ಸೇರಿಸಬೇಕು– ರಷ್ಯಾದ ಪ್ರಮುಖ ಮಿತ್ರರಾಷ್ಟ್ರ ಬೆಲರೂಸ್‌ನ ಅಧ್ಯಕ್ಷ ಲುಕಾ ಶೆಂಕಾ ಒತ್ತಾಯ

l ರಷ್ಯಾ ಜತೆಗಿನ ಎಲ್ಲ ಸಂಬಂಧ ಮತ್ತು ವ್ಯಾಪಾರ ಕಡಿತಗೊಳಿಸುವ ನಿರ್ಣಯಕ್ಕೆ ಅಮೆರಿಕದ ಸೆನೆಟ್‌ ಪಕ್ಷಾತೀತವಾಗಿ ಮತ ಚಲಾಯಿಸಿದೆ

l ಮರಿಯುಪೊಲ್‌ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ಬಲವಂತವಾಗಿ ರಷ್ಯಾ ಕರೆದೊಯ್ದಿದೆ– ಉಕ್ರೇನ್‌ ಸೇನೆ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT