ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಮಹಾಯುದ್ಧದ ಎಚ್ಚರಿಕೆ ರವಾನಿಸಿದ ರಷ್ಯಾ 

Last Updated 26 ಏಪ್ರಿಲ್ 2022, 6:52 IST
ಅಕ್ಷರ ಗಾತ್ರ

ಮಾಸ್ಕೋ: ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುವುದನ್ನುವಿರೋಧಿಸಿರುವ ರಷ್ಯಾ, ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ.

ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡುವ ಕುರಿತು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಇಂದು ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಹೇಳಿಕೆ ನೀಡಿದೆ.

‘ನಿಜ, ನೀವು ಅದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೊವ್ ಹೇಳಿದ್ದಾರೆ.

ರಷ್ಯಾದ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿರುವ ಲಾವ್ರೊವ್, ‘ಮೂರನೇ ಮಹಾಯುದ್ಧ ಆರಂಭವಾಗುವ ಅಪಾಯ ಗಂಭೀರಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ಉಕ್ರೇನ್‌ ಶಾಂತಿ ಮಾತುಕತೆಗಳನ್ನು ವಿಫಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಷ್ಯಾ ಯುದ್ಧ ಸಾರಿದಾಗಿನಿಂದಲೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಪಾಶ್ಚಾತ್ಯ ರಾಷ್ಟ್ರಗಳಿಂದ ಮಿಲಿಟರಿ ನೆರವು ಕೇಳುತ್ತಲೇ ಬಂದಿದ್ದಾರೆ. ಶಸ್ತ್ರಾಸ್ತ್ರಗಳಿದ್ದರೆ, ಉಕ್ರೇನ್‌ ಪಡೆಗಳು ಯುದ್ಧ ಗೆಲ್ಲುವುದಾಗಿ ಅವರು ಹೇಳಿದ್ದಾರೆ.

ಹೀಗಾಗಿ ಮಾಸ್ಕೋದ ಎಚ್ಚರಿಕೆಯ ನಡುವೆಯೂ ಪಾಶ್ಚಾತ್ಯ ರಾಷ್ಟ್ರಗಳು ಈಗ ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಮಿಲಿಟರಿ ನೆರವು ನೀಡಲು ಮುಂದೆ ಬರುತ್ತಿವೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ವಾರ ಉಕ್ರೇನ್‌ ರಾಜಧಾನಿ ಕೀವ್‌ಗೆ ತೆರಳಿದ್ದ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ₹53 ಸಾವಿರ ಕೋಟಿ ಮೊತ್ತದ ಮಿಲಿಟರಿ ನೆರವಿನ ಭರವಸೆ ನೀಡಿ ಬಂದಿದ್ದಾರೆ.

ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಚರ್ಚಿಸಲು ಅಮೆರಿಕನೀಡಿರುವ ಆಹ್ವಾನದ ಮೇರೆಗೆ 40 ದೇಶಗಳು ಮಂಗಳವಾರ ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ನಡೆಸಲಿವೆ. ಹಾಗೆಯೇ, ಉಕ್ರೇನ್‌ನಲ್ಲಿಯುದ್ಧ ಮುಗಿದ ನಂತರ ದೀರ್ಘಾವಧಿಯ ಭದ್ರತೆಯನ್ನು ಖಚಿತಪಡಿಸುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT