ಗುರುವಾರ , ಫೆಬ್ರವರಿ 9, 2023
30 °C

ರಷ್ಯಾ: ಕುರ್ಸ್ಕ್ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ ನಡೆಸಿದ ಉಕ್ರೇನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌: ರಷ್ಯಾದ ದಕ್ಷಿಣ ಕುರ್ಸ್ಕ್ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ಉಕ್ರೇನ್‌ ಪಡೆಗಳಿಂದ ಡ್ರೋನ್‌ ದಾಳಿ ನಡೆದಿದ್ದು, ಇದರಿಂದ ಮಂಗಳವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಮ್ಮ ಭೂ ಭಾಗದ ಎರಡು ವಾಯುನೆಲೆಗಳ ಮೇಲೆ ಡ್ರೋನ್ ದಾಳಿಯಾಗಿದೆ ಎಂದು ರಷ್ಯಾ ಆರೋಪಿಸಿದ ಮರು ದಿನವೇ ಈ ಬೆಂಕಿ ಅವಘಡವನ್ನು ಸ್ಥಳೀಯಾಡಳಿತ ದೃಢಪಡಿಸಿದೆ. 

‘ಡ್ರೋನ್ ದಾಳಿಯಿಂದಾಗಿ ಕುರ್ಸ್ಕ್ ವಿಮಾನ ನಿಲ್ದಾಣ ವ್ಯಾಪ್ತಿಯ ತೈಲ ಸಂಗ್ರಹಾಗಾರದಲ್ಲಿ ಬೆಂಕಿ ಹೊತ್ತಿದೆ. ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿವೆ’ ಎಂದು ಪ್ರಾದೇಶಿಕ ಗವರ್ನರ್‌ ರೋಮನ್ ಸ್ಟಾರೋವೊಯ್ ತಿಳಿಸಿದ್ದಾರೆ.

ರಷ್ಯಾ ಪಡೆಗಳು ಇದಕ್ಕೆ ಪ್ರತೀಕಾರವಾಗಿ ಉಕ್ರೇನ್‌ ಮೇಲೆ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ತೀವ್ರಗೊಳಿಸಿವೆ. ಆದರೆ, ಡ್ರೋನ್‌ ದಾಳಿ ನಡೆಸಿರುವುದನ್ನು ಉಕ್ರೇನ್‌ ದೃಢಪಡಿಸಿಲ್ಲ. 

ಆದರೆ, ದಾಳಿಗೆ ತುತ್ತಾಗಿರುವ ರಷ್ಯಾದ ಎರಡು ವಾಯುನೆಲೆಗಳು ಅಣ್ವಸ್ತ್ರ ಸಾಗಿಸುವ ಸಾಮರ್ಥ್ಯದ ಬಾಂಬರ್‌ಗಳನ್ನು ಇರಿಸಿದ್ದವುಗಳಲ್ಲಿ ಪ್ರಮುಖವಾದುವು. ಈ ದಾಳಿಗಳು ರಷ್ಯಾದ ಕೆಲವು ಕಾರ್ಯತಂತ್ರದ ಸೇನಾ ಕೇಂದ್ರಗಳ ದುರ್ಬಲತೆ ತೆರೆದಿಟ್ಟಿವೆ. 

ಡ್ರೋನ್‌ಗಳು ಸೇನಾ ನೆಲೆಗಳನ್ನು ಸಮೀಪಿಸಿರುವುದರಿಂದ ರಷ್ಯಾದ ವಾಯು ರಕ್ಷಣೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಒಂಬತ್ತು ತಿಂಗಳ ಆಕ್ರಮಣದ ವೇಳೆ, ಉಕ್ರೇನ್‌ ಕಡೆಯಿಂದ ರಷ್ಯಾ ಮೇಲೆ ನಡೆದಿರುವ ಮತ್ತೊಂದು ಪ್ರಮುಖ ಪ್ರತಿ ದಾಳಿ ಇದಾಗಿದ್ದು, ಸಂಘರ್ಷ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.   

ಮೂವರು ಸೈನಿಕರ ಸಾವು: ‘ಉಕ್ರೇನಿನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ರಷ್ಯಾದ ಮೂವರು ಸೈನಿಕರು ಸಾವನ್ನಪ್ಪಿದ್ದು, ನಾಲ್ವರು  ಗಾಯಗೊಂಡಿದ್ದಾರೆ. ಎರಡು ವಿಮಾನಗಳು ಸ್ವಲ್ಪ ಹಾನಿಗೊಳಗಾಗಿವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ದಾಳಿಗೆ ಒಳಗಾದ ವೋಲ್ಗಾ ನದಿಯ ಸರಟೋವ್ ಪ್ರದೇಶದ ಎಂಗೆಲ್ಸ್‌ ವಾಯು ನೆಲೆಯು ಉಕ್ರೇನ್‌ನ ಗಡಿಯ ಪೂರ್ವಕ್ಕೆ 600 ಕಿ.ಮೀ ದೂರದಲ್ಲಿ ಮತ್ತು ರಿಯಾಝನ್‌ ಪ್ರಾಂತ್ಯದ ಡೈಜೊವಾ ವಾಯು ನೆಲೆಯು ಉಕ್ರೇನ್‌ ಗಡಿಯ ಈಶಾನ್ಯದಲ್ಲಿ 500 ಕಿ.ಮೀ ದೂರದಲ್ಲಿ ಇವೆ.

ಉಕ್ರೇನ್‌ ಮೇಲಿನ ದಾಳಿಗೆ ನಿಯೋಜಿಸಿರುವ ಅಣ್ವಸ್ತ್ರ ಸಾಮರ್ಥ್ಯದ ಟಿಯು–95 ಮತ್ತು ಟಿಯು–160 ಕಾರ್ಯತಂತ್ರದ ಬಾಂಬರ್‌ಗಳು ಈ ವಾಯು ನೆಲೆಗಳಿಂದ ಕಾರ್ಯಾಚರಿಸುತ್ತಿದ್ದವು. ಇವುಗಳ ಮೇಲಿನ ದಾಳಿಯು ರಷ್ಯಾದ ದೀರ್ಘ ವ್ಯಾಪ್ತಿ ದಾಳಿಯ ಸಾಮರ್ಥ್ಯ ಕುಗ್ಗಿಸುವ ಉಕ್ರೇನ್‌ನ ಪ್ರಯತ್ನಗಳ ಭಾಗವಾಗಿತ್ತು ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು