ಮಂಗಳವಾರ, ಅಕ್ಟೋಬರ್ 20, 2020
23 °C
ಅವರು ‘ನಟೋರಿಯಸ್‌ ಆರ್‌ಬಿಜಿ’ ಎಂದೇ ಪ್ರಖ್ಯಾತಿ, ಸಂಗೀತ, ನಾಟಕ, ಫ್ಯಾಷನ್‌ ಎಂದರೆ ಅವರಿಗಿಷ್ಟ

PV Web Exclusive: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸೂಪರ್‌ಸ್ಟಾರ್‌!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರು ‘ಸೂಪರ್‌ಸ್ಟಾರ್‌’ ರೀತಿಯಲ್ಲಿ ಇರುವುದನ್ನು ನೀವು ಕಂಡಿದ್ದೀರಾ? ಕೋಟು, ಕೋರ್ಟು, ಆ್ಯಕ್ಟುಗಳ ನಡುವೆ ಮುಳುಗೇಳುವ ಅವರು ಜನರೊಂದಿಗೆ ಬೆರೆಯುವುದನ್ನು ನೋಡಿದ್ದೀರಾ, ನ್ಯಾಯಪೀಠದಲ್ಲಿ ಘನಗಂಭೀರವಾಗಿ ಕುಳಿತು ವಾದ–ವಿವಾದ ಆಲಿಸುವವರಿಗೆ ಅಭಿಮಾನಿಗಳು ಇರುತ್ತಾರಾ, ಅವರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುತ್ತಾರಾ, ನಾಟಕ ನೋಡುತ್ತಾರಾ, ಸಂಗೀತ ಕಛೇರಿಗಳಿಗೆ ಹೋಗುತ್ತಾರಾ, ಕಾಮಿಡಿ ಮಾಡುತ್ತಾರಾ, ಅದು ಹೋಗಲಿ ಮುಖ ಅರಳುವಂತೆ ನಗುತ್ತಾರಾ, ಜಿಮ್‌ ಮಾಡುತ್ತಾರಾ, ಫ್ಯಾಷನ್‌ ಇಷ್ಟ ಪಡುತ್ತಾರಾ...........?

ಈ ಎಲ್ಲಾ ಪ್ರಶ್ನೆಗಳಿಗೂ ‘ಹೌದು’ ಎನ್ನಲು ಮಹಿಳಾ ನ್ಯಾಯಮೂರ್ತಿಯೊಬ್ಬರು ಸೆ.18ರವರೆಗೂ ಬದುಕಿದ್ದರು. 87 ವರ್ಷ ವಯಸ್ಸಾಗಿದ್ದರೂ ನಿಧನರಾಗುವ ದಿನದವರೆಗೂ ಅವರು ನ್ಯಾಯಮೂರ್ತಿಯಾಗಿಯೇ ಇದ್ದರು. ಅವರ ಹೆಸರು; ರುತ್‌ ಬೇಡರ್‌ ಗಿನ್ಸ್‌ಬರ್ಗ್!

ಅಮೆರಿಕ ಸುಪ್ರೀಕೋರ್ಟ್‌ನ 2ನೇ ಮಹಿಳಾ ನ್ಯಾಯಮೂರ್ತಿಯಾಗಿ ಮೂರು ದಶಕ ಸೇವೆ ಸಲ್ಲಿಸಿದ ಅವರು ಮಹಿಳಾ ಹಕ್ಕುಗಳ ಪ್ರತಿಪಾದಕಿಯಾಗಿ, ಸಾಮಾನ್ಯರ ಧ್ವನಿಯಾಗಿ, ಸಂಗೀತ, ನಾಟಕ ಪ್ರೇಮಿಯಾಗಿ, ಫ್ಯಾಷನ್‌ ಟ್ರೆಂಡಿಯಾಗಿ, ಸೌಂದರ್ಯ ಪ್ರಜ್ಞಾವಂತೆಯಾಗಿ ಜನರ ಜೊತೆಯಲ್ಲೇ ಬದುಕಿದ್ದರು.

ವಕೀಲೆಯಾಗಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ, ಕಾನೂನು ಶಾಲೆ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದ ಅವರು 60ನೇ ವಯಸ್ಸಿನಲ್ಲಿ ಅಮೆರಿಕ ಸುಪ್ರೀಂ ಕೋರ್ಟ್‌ ನ್ಯಾಯಪೀಠಕ್ಕೇರಿದ್ದರು. ‘ನಿವೃತ್ತಿಯ ವಯಸ್ಸಲ್ಲಿ ನಾಮ ನಿರ್ದೇಶನವೇ’ ಎಂದು ಪ್ರಶ್ನೆ ಮಾಡಿದವರ ಕಡೆ ತಿರುಗಿ ನೋಡದ ಅವರು ಮೂರು ದಶಕ ಸೇವೆ ಸಲ್ಲಿಸಿದರು. ಅವರ ಕೆಲ ತೀರ್ಪುಗಳು ಅಮೆರಿಕ ಕಾನೂನು ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೂಲವಾದವು.

ಅವರು ನ್ಯಾಯಮೂರ್ತಿಯಾಗುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆಯಲ್ಲಿ (Dress code) ತಮಗೆ ತಾವೇ ಕೆಲ ಮಾರ್ಪಾಡು ಮಾಡಿಕೊಂಡರು. ಗೌನ್‌ ತೊಟ್ಟು ಅದರ ಮೇಲೊಂದು ನೆಕ್ಲೆಸ್‌ ರೀತಿಯ ವಸ್ತ್ರ ಧರಿಸುತ್ತಿದ್ದರು. ಆದು ಅಮೆರಿಕದ ಬಲುದೊಡ್ಡ ಫ್ಯಾಷನ್‌ ಟ್ರೆಂಡ್‌ ಆಗಿ ಗಮನ ಸೆಳೆಯಿತು. ಅವರ ಚಿತ್ರಗಳನ್ನು ಹೋಲುವ ಬಾಬಿ ಡಾಲ್‌ಗಳು ಮಾರುಕಟ್ಟೆಗೆ ಬಂದವು. ಬ್ಯಾಗ್‌, ಟೀ– ಶರ್ಟ್‌, ಮಗ್‌ ಮುಂತಾದ ವಸ್ತುಗಳ ಮೇಲೆ, ಟ್ಯಾಟೂಗಳ ಮೂಲಕ ಅವರ ಚಿತ್ರಗಳು ರಾರಾಜಿಸಿದವು. ಮೀಮ್‌ಗಳು, ಕಾರ್ಟೂನ್‌ಗಳು ಪ್ರಸಿದ್ಧಿ ಪಡೆದವು. ನಡೆ–ನುಡಿಯಿಂದಾಗಿ ಅಮೆರಿಕದ ‘ಪಾಪ್‌ ಕಲ್ಚರ್‌ ಐಕಾನ್‌’ ಎಂದೂ ಪ್ರಸಿದ್ಧಿ ಪಡೆದರು.

ಲಿಂಗ ಸಮಾನತೆಗಾಗಿ ಹೋರಾಟ: ಗಿನ್ಸ್ ಬರ್ಗ್‌ ಅವರ ನ್ಯಾಯಸಮ್ಮತ ಅಭಿಪ್ರಾಯಗಳು, ದಿಟ್ಟ ಮಾತುಗಳು ಅಮೆರಿಕದಲ್ಲಿ ಮನೆ ಮಾತಾಗಿದ್ದವು. ಈ ಕಾರಣದಿಂದಾಗಿ ಅವರನ್ನು ‘ನಟೋರಿಯಸ್‌ ಆರ್‌ಬಿಜಿ’ ಎಂದೇ ಕರೆಯಲಾಗುತ್ತಿತ್ತು. ‘ನಟೋರಿಯಸ್‌’ ಪದವನ್ನು ಅವರು ನಗುನಗುತ್ತಲೇ ಸ್ವಾಗತಿಸಿದ್ದರು. ಅವರ ನಗು ಮೊಗ ಅಮೆರಿಕದಲ್ಲಿ ಮಹಿಳಾ ಹಕ್ಕುಗಳ ಹೋರಾಟದ  ಸ್ಫೂರ್ತಿಯ ಸಂಕೇತವಾಗಿತ್ತು.

ಗಿನ್ಸ್‌ಬರ್ಗ್ ಅವರು ಕೇವಲ ತಮ್ಮ ನಡೆ, ನುಡಿಯಿಂದ ಮಾತ್ರವೇ ಪ್ರಸಿದ್ಧಿ ಪಡೆದವರಲ್ಲ. ಪುರುಷ ಪ್ರಧಾನವಾಗಿದ್ದ ಅಮೆರಿಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಿಂಗ ಸಮಾನತೆಯ ಕಿಚ್ಚು ಹಚ್ಚಿದರು. ಅವರು ಮಹಿಳೆಯರ ಪರವಾಗಿ ನಿಲ್ಲಲು ಅವರು ನಡೆದು ಬಂದ ಹಾದಿಯೂ ಪ್ರಮುಖ ಕಾರಣವಾಗಿತ್ತು. ಜ್ಯೂವಿಷ್‌ ವಲಸಿಗ ದಂಪತಿಗೆ 1933ರಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಅವರು ಜನಿಸಿದ ಅವರು ಶಾಲಾ ದಿನಗಳಿಂದಲೂ ನಾಯಕತ್ವ ಗುಣ ಹೊಂದಿದ್ದರು. ಶಾಲೆಯ ಸ್ಮರಣ ಸಂಚಿಕೆಯ ಸಂಪಾದಕಿಯಾಗಿದ್ದರು, ಶಾಲಾ ಆರ್ಕೆಸ್ಟ್ರಾ ತಂಡದ ಸದಸ್ಯೆಯಾಗಿದ್ದರು.

1956ರಲ್ಲಿ ಹಾರ್ವರ್ಡ್‌ ಕಾನೂನು ಶಾಲೆಗೆ ದಾಖಲಾಗುವ ಹೊತ್ತಿಗೆ ಅವರು ಹೆಣ್ಣುಮಗುವಿನ ತಾಯಿಯಾಗಿದ್ದರು. ಕಾನೂನು ಶಾಲೆಯ 550 ವಿದ್ಯಾರ್ಥಿಗಳ ನಡುವೆ ಇದ್ದ 9 ಹುಡುಗಿಯರಲ್ಲಿ ಗಿನ್ಸ್‌ಬರ್ಗ್‌ ಕೂಡ ಒಬ್ಬರಾಗಿದ್ದರು. ಪತಿ ಮಾರ್ಟಿನ್‌ ನ್ಯೂಯಾರ್ಕ್‌ಗೆ ವರ್ಗಾವಣೆಯಾದ ನಂತರ ಅವರು ಕೊಲಂಬಿಯಾ ಕಾನೂನು ಶಾಲೆಗೆ ತಮ್ಮ ಪದವಿಯನ್ನು ವರ್ಗಾಯಿಸಿಕೊಂಡರು. ನಂತರ ಕೊಲಂಬಿಯಾ ಕಾನೂನು ಶಾಲೆಯಲ್ಲಿ ಮೊದಲ ಮಹಿಳಾ ಕಾನೂನು ಪದವೀಧರೆಯಾಗಿ ಹೊರಹೊಮ್ಮಿದರು.


ಬಾಲಕಿ ಗಿನ್ಸ್‌ಬರ್ಗ್‌ ಮಾದರಿಯ ವೇಷಭೂಷಣ ತೊಟ್ಟಿರುವುದು

ಗಿನ್ಸ್‌ ಬರ್ಗ್ ಲಿಂಗ ತಾರತಮ್ಯವನ್ನು ಸ್ವತಃ ಅನುಭವಿಸಿದರು. ‘ಪುರುಷರ ಕೆಲಸ ಮಾಡಲು ನಿಮಗೆ ನೆಮ್ಮದಿ ಸಿಗುತ್ತದೆಯೇ’ ಎಂದು ಬಹಿರಂಗವಾಗಿ ಪ್ರಾಧ್ಯಾಪಕರೊಬ್ಬರು ಪ್ರಶ್ನಿಸಿದ್ದರು. ಕಾನೂನು ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಅವರೊಬ್ಬ ಮಹಿಳೆ ಎಂಬ ಕಾರಣಕ್ಕೆ ವಕೀಲಿ ತರಬೇತಿಗೆ ಯಾರೂ ಅವಕಾಶ ನೀಡಲಿಲ್ಲ. ಆ ಸಂದರ್ಭದಲ್ಲಿ ಅವರು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗಬೇಕಾಯಿತು. ಈ ಬಗ್ಗೆ ಹಲವು ಸಂದರ್ಭದಲ್ಲಿ ಗಿನ್ಸ್‌ಬರ್ಗ್‌ ಹೇಳಿಕೊಂಡಿದ್ದಾರೆ.

ಲಿಂಗ ತಾರತಮ್ಯದಿಂದಾಗಿ  ಗಿನ್ಸ್‌ಬರ್ಗ್‌ ಹಲವು ಕಾನೂನು ಸಂಸ್ಥೆಗಳಿಂದ (Law firm) ತಿರಸ್ಕೃತಗೊಂಡರು. ಕಡೆಗೆ ಕೊಲಂಬಿಯ ಕಾನೂನು ಶಾಲೆಯ ಪ್ರಾಧ್ಯಾಪಕ ಗೆರಾಲ್ಡ್‌ ಗುಂಟೇರ್‌ ಅವರು ನ್ಯೂಯಾರ್ಕ್‌ ಜಿಲ್ಲಾ ನ್ಯಾಯಾಧೀಶರಾಗಿದ್ದ ಎಡ್ಮಂಡ್‌ ಎಲ್‌ ಪಲ್ಮೇರಿ ಅವರಿಗೊಂದು ಪತ್ರ ಬರೆದರು. ‘ಗಿನ್ಸ್‌ ಬರ್ಗ್‌ ಎಂಬ ಹುಡುಗಿಗೆ ತರಬೇತಿ ನೀಡದಿದ್ದರೆ ಮತ್ತೆಂದೂ ಕೊಲಂಬಿಯಾ ಕಾನೂನು ಶಾಲೆಯಿಂದ ಯಾವುದೇ ಪದವೀಧರರನ್ನು ನಿಮ್ಮ ಬಳಿಗೆ ಕಳುಹಿಸುವುದಿಲ್ಲ’ ಎಂದು ಬೆದರಿಕೆ ಹಾಕಿದರು. ನಂತರ ಅವರಿಗೆ ತರಬೇತಿ ಪಡೆಯುವ ಅವಕಾಶ ದೊರೆಯಿತು.


ಗಿನ್ಸ್‌ ಬರ್ಗ್‌ ಮಾದರಿಯ ಗೊಂಬೆ

ಕಾನೂನು ಸಂಸ್ಥೆಗಳಲ್ಲಿ ತಿರಸ್ಕೃತಗೊಂಡ ಕಾರಣದಿಂದಾಗಿ ಗಿನ್ಸ್‌ಬರ್ಗ್‌ 1961ರಲ್ಲಿ ಅವರು ರಟ್ಜರ್ಸ್‌ ಕಾನೂನು ಶಾಲೆಯಲ್ಲಿ ಉಪನ್ಯಾಸಕಿಯಾಗಿ ನೇಮಕಗೊಂಡರು. ಪುರುಷ ಉಪನ್ಯಾಸಕರಿಗಿಂತಲೂ ಕಡಿಮೆ ವೇತನ ನೀಡುತ್ತಿದ್ದ ಕಾರಣ ಅವರು ಅದರ ವಿರುದ್ಧವೂ ಧ್ವನಿ ಎತ್ತಿದರು. ನಂತರ ಅವರು ಕೊಲಂಬಿಯಾ ಕಾನೂನು ಶಾಲೆಯ ಮೊದಲ ಮಹಿಳಾ ಕಾಯಂ ಪ್ರಾಧ್ಯಾಪಕಿಯಾದರು. ‘ವಿಮೆನ್ಸ್ ರೈಟ್ಸ್‌ ಲಾ ರಿಪೋರ್ಟರ್‌’ ಎನ್ನುವ ನಿಯತಕಾಲಿಕೆಯನ್ನು ಕೂಡ ಆರಂಭಿಸಿದರು. ಮಹಿಳಾ ಹಕ್ಕುಗಳ ಮೇಲೆ ಬೆಳಕು ಚೆಲ್ಲುವ ಅಮೆರಿಕದ ಮೊದಲ ಕಾನೂನು ನಿಯತಕಾಲಿಕ ಇದಾಗಿತ್ತು.

ನಂತರ ಅವರು ವಕೀಲೆಯಾಗಿ ಅಮೆರಿಕನ್‌ ಸಿವಿಲ್‌ ಲಿಬರ್ಟಿ ಯೂನಿಯನ್‌ನಲ್ಲಿ (ಎಸಿಎಲ್‌ಯು) ‘ವುವೆಮ್‌ ರೈಟ್ಸ್‌ ಪ್ರೋಜೆಕ್ಟ್‌’ ಕಾನೂನು ವಿಭಾಗ ಸ್ಥಾಪಿಸಿದರು. ಲಿಂಗ ತಾರತಮ್ಯದ ವಿರುದ್ಧದ ಧ್ವನಿಯಾಗಿ ಅಮೆರಿಕದ ಕೆಳಹಂತದ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗೂ ತಮ್ಮ ಧ್ವನಿ ಮೊಳಗಿಸಿದರು.

‘ರೀಡ್‌ ವಿರುದ್ಧ ರೀಡ್‌’ (404 U.S. SC71–1971)ಪ್ರಕರಣದಲ್ಲಿ, ಯಾವುದೇ ಸಂಸ್ಥೆ ಲಿಂಗದ ಆಧಾರದ ಮೇಲೆ ವ್ಯಕ್ತಿಯನ್ನು ಪರಿಗಣನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಸಂವಿಧಾನದ 14ನೇ ತಿದ್ದುಪಡಿಯ ‘ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ’ (Equal protection of the laws) ಹಕ್ಕನ್ನು ಮಹಿಳೆಯರಿಗೂ ವಿಸ್ತರಣೆ ಮಾಡಿತು. ಗಿನ್ಸ್‌ಬರ್ಗ್‌ ಈ ಪ್ರಕರಣದ ಮೂಲಕ ಅಮೆರಿಕದಲ್ಲಿ ಲಿಂಗ ಸಮಾನತೆಗೆ ಭದ್ರ ಬುನಾದಿ ಹಾಕಿದರು.

‘ಸಫೋರ್ಡ್‌ ಯೂನಿಫೈಡ್‌ ಸ್ಕೂಲ್‌ ವಿರುದ್ಧ ರೆಡ್ಡಿಂಗ್‌’ (557 U.S. 364, 129 S. Ct. 263) ಪ್ರಕರಣದಲ್ಲಿ  13 ವರ್ಷದ ಶಾಲಾ ಬಾಲಕಿ ಡ್ರಗ್ಸ್‌ ಸೇವಿಸುತ್ತಾಳೆ ಎಂಬ ಆರೋಪ ಮಾಡಲಾಗಿತ್ತು. ಶಿಕ್ಷಕರು ಶಾಲಾ ಆವರಣದಲ್ಲಿ ಬಹಿರಂಗವಾಗಿ ಆಕೆಯ ಬಟ್ಟೆ ಬಿಚ್ಚಿಸಿದ್ದರು. ಇದು ಆಕೆಯ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಎಂಬ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿತ್ತು. ಕೆಳ ಹಂತದ ನ್ಯಾಯಾಲಯಯಲ್ಲಿ ಶಾಲೆಯ ಪರವಾಗಿಯೇ ತೀರ್ಪು ಬಂದಿತ್ತು.

ಆದರೆ ಸುಪ್ರೀ ಕೋರ್ಟ್‌ನಲ್ಲಿ ಗಿನ್ಸ್‌ಬರ್ಗ್‌ ಬಾಲಕಿಯ ಪರವಾಗಿ ವಕಾಲತ್ತು ವಹಿಸಿ ವಾದ ಮಂಡಿಸಿದರು. ಕೆಳ ನ್ಯಾಯಾಲಯದ ತೀರ್ಪು ರದ್ದು ಮಾಡಿ ಬಾಲಕಿಯ ‘ವೈಯಕ್ತಿಕ ಹಕ್ಕು’  ಉಲ್ಲಂಘನೆಯಾಗಿದೆ ಎಂಬ ತೀರ್ಪು ಹೊರಬಂತು. ಈ ಪ್ರಕರಣದಲ್ಲಿ ಗಿನ್ಸ್‌ ಬರ್ಗ್‌  ‘ಬಾಲಿಕಿಯ ಬಟ್ಟೆ ಚಿಚ್ಚಿಸಿದವರು ಯಾರೂ 13 ವರ್ಷದ ಹುಡುಗಿಯ ಸ್ಥಾನದಲ್ಲಿ ನಿಂತವರಲ್ಲ’ ಎಂದು ಹೇಳುವ ಮೂಲಕ ಮಹಿಳೆಯ ಭಾವನೆಗಳನ್ನು ಎತ್ತಿಹಿಡಿದಿದ್ದರು.


ಟ್ಯಾಟೂ ಚಿತ್ರದಲ್ಲಿ ಗಿನ್ಸ್‌ ಬರ್ಗ್‌

‘ಜೋ ವಿರುದ್ಧ ವೇಡ್‌’ (410 U.S. 113) ಪ್ರಕರಣ ಅಮೆರಿಕದಲ್ಲಿದ್ದ ಅವೈಜ್ಞಾನಿಕ ಕಾನೂನನ್ನು ರದ್ದು ಮಾಡಿತು. ಅಗತ್ಯ ಸಂದರ್ಭಗಳಲ್ಲಿ, ಮಹಿಳೆಯ ಆರೋಗ್ಯ ದೃಷ್ಟಿಯಿಂದ ಗರ್ಭಪಾತಕ್ಕೆ ಒಳಗಾಗುವುದು ಆಕೆಯ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಅಲ್ಲಿಯವರೆಗೂ ಇದ್ದ ಗರ್ಭಪಾತ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿತು. ಈ ಪ್ರಕರಣ ಗಿನ್ಸ್‌ಬರ್ಗ್‌ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತು. ಗಿನ್ಸ್‌ಬರ್ಗ್‌ ವಕಾಲತ್ತು ವಹಿಸುವ ಪ್ರತಿ ಪ್ರಕರಣ ಲಾಂಡ್‌ಮಾರ್ಕ್‌ ಎನಿಸಿಕೊಳ್ಳುತ್ತಿದ್ದವು. ಮಹಿಳಾ ಪರ ನಿಲುವುಗಳಿಂದ ಅವರು ಅಮೆರಿಕೆಯಲ್ಲಿ ಮನೆಮಾತಾದರು. ಸುಪ್ರೀಂ ಕೋರ್ಟ್‌ನಲ್ಲಿ ಅವರು ವಾದಿಸಿದ 6 ಪ್ರಕರಗಳು ಲ್ಯಾಂಡ್‌ಮಾರ್ಕ್‌ ಎನಿಸಿಕೊಂಡಿವೆ.

1980ರಲ್ಲಿ  ಅಮೆರಿಕ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್‌, ಗಿನ್ಸ್‌ಬರ್ಗ್‌ ಅವರನ್ನು ಕೊಲಂಬಿಯಾದ ಕೋರ್ಟ್‌ ಆಫ್‌ ಅಪೀಲ್‌ನ ನ್ಯಾಯಾಧೀಶೆಯನ್ನಾಗಿ ನಾಮನಿರ್ದೇಶನ ಮಾಡಿದರು. ನಂತರ 1993ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್‌ಕ್ಲಿಂಟನ್‌, ಗಿನ್ಸ್‌ಬರ್ಗ್ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನಾಮನಿರ್ದೇಶನ ಮಾಡಿದರು. ಅಮೆರಿಕ ಸುಪ್ರೀಂ ಕೋರ್ಟ್‌ನ 2ನೇ ಮಹಿಳಾ ನ್ಯಾಯಮೂರ್ತಿಯಾಗುವ ಅವಕಾಶ ಹೋರಾಟಗಾರ್ತಿಗೆ ಒಲಿದು ಬಂತು.

ಕೇವಲ ಐದು ಅಡಿ ಎತ್ತರವಿದ್ದ ಗಿನ್ಸ್‌ಬರ್ಗ್ ಅಮೆರಿಕ ನ್ಯಾಯಾಂಗದಲ್ಲಿ ಉತ್ತುಂಗಕ್ಕೇರಿದರು. ಸುಪ್ರೀಂ ಕೋರ್ಟ್‌ನಲ್ಲಿ ಅತೀ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ನ್ಯಾಯಮೂರ್ತಿಗಳಲ್ಲಿ ಅವರೂ ಒಬ್ಬರಾದರು. ಅವರು ನಾಮನಿರ್ದೇಶನಗೊಂಡ ಪಕ್ಷಕ್ಕೆ ಎಂದಿಗೂ ವಿಧೇಯರಾಗಿ ನಡೆಯಲಿಲ್ಲ, ಅಗತ್ಯ ಸಂದರ್ಭಗಳಲ್ಲಿ ಚಾಟಿ ಬೀಸುತ್ತಲೇ ಇದ್ದರು. ತನ್ನದೇ ಕೋರ್ಟ್‌ನ ಬಹುಮತದ (Mejority in bench) ತೀರ್ಪಿನ  ವಿರುದ್ಧವೇ ಮಾತನಾಡುತ್ತಿದ್ದರು.

1999ರಲ್ಲಿ ಅವರು ಕ್ಯಾನ್ಸರ್‌ ಕಾಣಿಸಿಕೊಂಡಿತು. ಕ್ಯಾನ್ಸರ್‌ ಜೊತೆಗಿನ ಹೋರಾಟ ಮಾಡುತ್ತಲೇ ಅವರು ಎರಡು ದಶಕಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಪ್ರಭಾವಿ ನ್ಯಾಯಮೂರ್ತಿಯಾಗಿದ್ದರು. ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸದಾ ನಗುನಗುತ್ತಲೇ ಜನರೊಂದಿಗೆ ಬೆರೆಯುತ್ತಿದ್ದರು. ಈಚೆಗೆ ಶಸ್ತ್ರಚಿಕಿತ್ಸೆಯಾದ ನಂತರವೂ ಅವರು ಪಾಪ್‌ ಸಂಗೀತ ಕಾರ್ಯಕ್ರಮಕ್ಕೆ ದಿಢೀರ್‌ ಭೇಟಿ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದು ಜೇಮ್ಸ್‌ ವಕೀಲರಾಗಿದ್ದು ಮಗಳು ಜೇನ್‌ ಸಂಗೀತಗಾರ್ತಿಯಾಗಿದ್ದಾರೆ. ಗಿನ್ಸ್‌ಬರ್ಗ್‌ ಬರೆದ ಹಲವು ಪುಸ್ತಕಗಳು ಬೆಸ್ಟ್‌ ಸೆಲ್ಲರ್‌ ಆಗಿವೆ. ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಸಂದಿವೆ.


ಟೀ–ಶರ್ಟ್ ಮೇಲೆ ಗಿನ್ಸ್‌ಬರ್ಗ್‌ ಚಿತ್ರ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕೆಲವೇ ದಿನಗಳು ಇರುವಾಗ ಅವರು ಮೃತಪಟ್ಟಿರುವ ಕಾರಣ ಮುಂದೆ ಗಿನ್ಸ್‌ಬರ್ಗ್ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನು ಅಮೆರಿಕ ಅಧ್ಯಕ್ಷರು ಸೆನೆಟ್‌ ಅನುಮತಿಯ ಮೇರೆಗೆ ನಾಮ ನಿರ್ದೇಶನ ಮಾಡುತ್ತಾರೆ.

ಗಿನ್ಸ್‌ಬರ್ಗ್‌ ಡೆಮಾಕ್ರಟಿಕ್‌ ಅಧ್ಯಕ್ಷರಿಂದ ನಾಮನಿರ್ದೇಶನಗೊಂಡಿದ್ದರು. ಈಗ ರಿಪಬ್ಲಿಕನ್‌ ಪ್ರಧಾನಿ ಡೊನಾಲ್ಡ್‌ ಟ್ರಂಫ್‌ ಅಧಿಕಾರದಲ್ಲಿ  ಇದ್ದಾರೆ. ಟ್ರಂಫ್‌  ಉತ್ತರಾಧಿಕಾರಿಯನ್ನು ಈಗಲೇ ಆಯ್ಕೆ ಮಾಡುವರೇ ಅಥವಾ ಚುನಾವಣೆ ಮುಗಿದ ನಂತರ ಹೊಸ ಪ್ರಧಾನಿ ಆಯ್ಕೆ ಮಾಡುವರೇ ಎಂಬ ಪ್ರಶ್ನೆ ಮೂಡಿದೆ. ಈ ಬಾರಿಯ ನಾಮನಿರ್ದೇಶನ ಜವಾಬ್ದಾರಿ ಯಾವ ಪಕ್ಷದ ಪಾಲಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಶ್ರೇಷ್ಠತೆಯನ್ನು ಕಾಪಾಡುವ ಜವಾಬ್ದಾರಿ ಅಲ್ಲಿಯ ಸರ್ಕಾರದ ಮೇಲಿದೆ.

ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ 9 ಮಂದಿ ನ್ಯಾಯಮೂರ್ತಿಗಳಿದ್ದಾರೆ. ಒಬ್ಬರು ಮುಖ್ಯನ್ಯಾಯಮೂರ್ತಿಯಾಗಿದ್ದರೆ ಉಳಿದ ಎಂಟು ಮಂದಿ ಕಾರ್ಯನಿರ್ವಾಹಕ ನ್ಯಾಯಮೂರ್ತಿಗಳಾಗಿರುತ್ತಾರೆ. ಒಮ್ಮೆ ಸುಪ್ರೀಂಕೊರ್ಟ್‌ಗೆ ನೇಮಕಗೊಂಡರೆ ಅವರು ಸ್ವಯಿಚ್ಛೆಯಿಂದ ನಿವೃತ್ತಿ ಪಡೆಯಬಹುದು, ಇಲ್ಲದಿದ್ದರೆ ಅವರ ಜೀವಿತಾವಧಿವರೆಗೆ ನ್ಯಾಯಮೂರ್ತಿಯಾಗಿ ಮುಂದುವರಿಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು