ಬುಧವಾರ, ಜೂನ್ 16, 2021
21 °C

ಲಂಡನ್ ಮೇಯರ್ ಆಗಿ ಸಾದಿಕ್ ಖಾನ್ ಮರು ಆಯ್ಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಲೇಬರ್ ಪಕ್ಷದ ಅಭ್ಯರ್ಥಿ ಸಾದಿಕ್ ಖಾನ್ ಅವರು ಲಂಡನ್ ಮೇಯರ್ ಆಗಿ ಎರಡನೇ ಬಾರಿಗೆ ಶನಿವಾರ ಮರು ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಸಾದಿಕ್ ಖಾನ್ ಅವರು 12,06,034 ಮತಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಶೌನ್ ಬೈಲೆ 9,77,601 ಮತ ಪಡೆದಿದ್ದಾರೆ. ಸಾದಿಕ್ ಖಾನ್ ಒಟ್ಟಾರೆ ಶೇ 55.2 ಮತಗಳಿಸಿದ್ದರೆ, ಬೈಲೆ ಶೇ 44.8ರಷ್ಟು ಮತಗಳಿಸಿದ್ದಾರೆ.

2016ರಲ್ಲಿ ಸಾದಿಕ್ ಖಾನ್ ಲಂಡನ್ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಆ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮುಖಂಡ ಎನಿಸಿಕೊಂಡಿದ್ದರು. ಮೇಯರ್ ಮತದಾನವು ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ, ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಮತದಾನವನ್ನು ಮುಂದೂಡಲಾಗಿತ್ತು.

ಜನಾದೇಶಕ್ಕೆ ಹೆಮ್ಮೆ: ಆಯ್ಕೆಯ ಬಳಿಕ ಸಿಟಿಹಾಲ್ ಕಚೇರಿಯಲ್ಲಿ ಮಾತನಾಡಿದ ಸಾದಿಕ್ ಖಾನ್ ಅವರು ‘ಸಾಂಕ್ರಾಮಿಕ ರೋಗದ ಕರಾಳ ದಿನಗಳು ಮುಗಿದ ಬಳಿಕ ಲಂಡನ್‌ ನಗರದ ಪ್ರಕಾಶಮಾನವಾದ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತೇನೆ.  ಇಲ್ಲಿನ ನಾಗರಿಕರಿಗೆ ಹಸಿರು, ಉತ್ತಮ ಮತ್ತು ಸುರಕ್ಷಿತವಾದ ನಗರವನ್ನು ರಚಿಸಲು ಶ್ರಮಿಸುತ್ತೇನೆ. ಅವರ ಅಗತ್ಯವನ್ನು ಪೂರೈಸಲು ಬದ್ಧನಾಗಿರುವೆ’ ಎಂದು ನುಡಿದರು.

‘ಲಂಡನ್ ನಗರದ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಸುಧಾರಿಸುವ ಕೆಲಸ ಮಾಡುವೆ’ ಎಂದು ತಮ್ಮ ಹಿಂದಿನ ಪ್ರತಿಜ್ಞೆಯನ್ನು ಸಾದಿಕ್ ಖಾನ್ ಅವರು ಪುನರುಚ್ಚರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು