ಬುಧವಾರ, ಅಕ್ಟೋಬರ್ 5, 2022
26 °C

ರಶ್ದಿಗೆ ಅಳವಡಿಸಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ: ಷಟೌಕ್ವಾ ಅಧ್ಯಕ್ಷರ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮೇವಿಲ್‌(ಅಮೆರಿಕ): ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಪಶ್ಚಿಮ ನ್ಯೂಯಾರ್ಕ್‌ನ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಲಾಗಿತ್ತು. ಅವರನ್ನು ಚಾಕುವಿನಿಂದ ಹಲವು ಬಾರಿ ಇರಿಯಲಾಗಿತ್ತು.

ರಕ್ತದ ಮಡುವಿನಲ್ಲಿದ್ದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ನ್ಯೂಜೆರ್ಸಿಯ ಫೇರ್‌ಫೀಲ್ಡ್‌ನ ಹಾದಿ ಮಟರ್‌ (24) ಎಂಬಾತ ನಡೆಸಿದ್ದ ದಾಳಿಯಲ್ಲಿ ರಶ್ದಿ ಅವರ ತೋಳಿನ ನರಗಳು, ಪಿತ್ತಜನಕಾಂಗ ಹಾನಿಗೊಂಡಿತ್ತು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ಏಜೆಂಟ್‌ ಆ್ಯಂಡ್ರ್ಯೂ ವೈಲಿ ಶುಕ್ರವಾರ ತಿಳಿಸಿದ್ದರು.

ಆದರೆ, ಸದ್ಯ ಅವರು ಚೇತರಿಕೆ ಕಂಡಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ. ‘ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ. ಮತ್ತು, ಅವರು ಮಾತನಾಡುತ್ತಿದ್ದಾರೆ! ಅವರು ಗುಣಮುಖರಾಗಲೆಂದು ಷಟೌಕ್ವಾದ ಎಲ್ಲರು ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಶನಿವಾರ ರಾತ್ರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಕೂಡ ಈ ಮಾಹಿತಿ ಖಚಿತಪಡಿಸಿದ್ದಾರೆ. ಆದರೆ, ರಶ್ದಿ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಇನ್ನೊಂದೆಡೆ, ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಪೂರ್ವಯೋಜಿತವಾಗಿದೆ. ಅವರ ಮೇಲೆ 10 ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ಹಾದಿ ಮಟರ್‌ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು